ಪುಣೆ: ಭಾರತದಲ್ಲಿ ಟಾಸ್ ಪಾತ್ರ ನಿರ್ಣಾಯಕವೇನಲ್ಲ ಎಂಬುದಾಗಿ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಕೋಚ್ ಡ್ಯಾರನ್ ಲೇಹ್ಮನ್ ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂಬುದು ಅವರ ಲೆಕ್ಕಾಚಾರ.
“ಟಾಸ್ ಗೆಲ್ಲಲಿ ಬಿಡಲಿ, ನೀವು ಉತ್ತಮವಾಗಿ ಆಡುವುದು ಮುಖ್ಯ. ಕಳೆದ ಭಾರತ ಪ್ರವಾಸದ ವೇಳೆ ನಾವು ಎಲ್ಲ ಟೆಸ್ಟ್ ಪಂದ್ಯಗಳಲ್ಲೂ ಟಾಸ್ ಜಯಿಸಿದ್ದೆವು. ಆದರೆ 4-0 ಅಂತರದಿಂದ ಸೋತೆವು…’ ಎಂದು ಲೇಹ್ಮನ್ ನೆನಪಿಸಿಕೊಂಡರು.
“ಭಾರತ ಹಾಗೂ ಆಸ್ಟ್ರೇಲಿಯ ಸರಣಿ ವೇಳೆ ಯಾವತ್ತೂ ಟಾಸ್ ನಿರ್ಣಾಯಕ ಪಾತ್ರ ವಹಿಸಿದ್ದಿಲ್ಲ. ಇದು ಆಸ್ಟ್ರೇಲಿಯದಲ್ಲಿ ನಡೆಯುವ ಪಂದ್ಯಗಳಿಗೂ ಅನ್ವಯಿಸುತ್ತದೆ. ಟಾಸ್‌ನಿಂದಲೇ ಫಲಿತಾಂಶ ನಿರ್ಧಾರವಾಗಬೇಕೆಂಬ ಅನಿವಾ ರ್ಯತೆ ಇಲ್ಲಿಲ್ಲ…’ ಎಂದರು.
“ಈ ಸರಣಿ ವೇಳೆ “ಕ್ರೀಡಾ ಸ್ನೇಹಿ’ ಪಿಚ್‌ಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಪುಣೆ ಪಿಚ್ ಬಗ್ಗೆ ಇಂಥದೇ ಅಭಿಪ್ರಾಯ ಮೂಡುತ್ತಿದೆ. ಇಲ್ಲಿ ಸಂಪೂರ್ಣ 5 ದಿನಗಳ ಕಾಲ ಟೆಸ್ಟ್ ಪಂದ್ಯ ಸಾಗುತ್ತದೆಂಬ ವಿಶ್ವಾಸವಿದೆ…’ ಎಂದು ಲೇಹ್ಮನ್ ಹೇಳಿದರು.
ಸರಣಿಯ ಮೊದಲ ಟೆಸ್ಟ್ ಪಂದ್ಯ ಗುರುವಾರದಿಂದ ಪುಣೆಯಲ್ಲಿ ಆರಂಭವಾಗಲಿದೆ. ಎರಡೂ ತಂಡಗಳ ಆಟಗಾರರು ಈಗಾಗಲೇ ಪುಣೆಗೆ ಆಗಮಿಸಿದ್ದು ಮಂಗಳವಾರ ಸುದೀರ್ಘಾವ ಧಿಯ ಅಭ್ಯಾಸ ನಡೆಸಿದರು.