Advertisement

ಕಾಗೆಯ ಸೇಡು? : ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

10:54 AM Jan 25, 2022 | Team Udayavani |

ಭರಮಸಾಗರ: ಇಲ್ಲೊಂದು ಕಾಗೆ ಹಳ್ಳಿ ಜನರ ಪಾಲಿಗೆ ಕಂಟಕವಾಗಿ ಪರಿಣಮಿಸಿದ್ದು, ಮನೆಯಿಂದ ಹೊರ ಬಂದರೆ ಸಾಕು ಹಾರಿ ಬಂದು ತಲೆಗೆ ಕುಕ್ಕುತ್ತದೆ!

Advertisement

ಚಿತ್ರದುರ್ಗ ಜಿಲ್ಲೆ ಭರಮಸಾಗರ ಹೋಬಳಿ ಸಮೀಪದ ಓಬಳಾಪುರ ಗ್ರಾಮಸ್ಥರು ಕಾಗೆ ಕಾಟದಿಂದ ಬೇಸತ್ತು ಪಾವಗಡದ ಶನೀಶ್ವರನ ಸನ್ನಿಧಿ ಸೇರಿ ಇತರೆ ಪುಣ್ಯ ಸ್ಥಳಗಳ ದರ್ಶನ ಪಡೆದು ಬಂದರೂ ಕಾಗೆ ಕಾಟ ತಪ್ಪಿಲ್ಲ. ಕಳೆದೊಂದು ತಿಂಗಳಿಂದ ಕಾಗೆ ಜನರ ನೆಮ್ಮದಿಗೆ ಭಂಗ ತಂದಿದೆ. ಏಳು ಜನರನ್ನು ಗುರಿಯಾಗಿಸಿಕೊಂಡು ಕಾಟ ಕೊಡುತ್ತಿದೆ.

ಮನೆ ಹೊಸಿಲು ದಾಟಿ ಹೊರ ಬಂದರೆ ಸಾಕು ಅಟ್ಯಾಕ್‌ ಮಾಡುತ್ತದೆ. ಅದಕ್ಕೆ ಯಾವುದೇ ತೊಂದರೆ ಕೊಡದೇ ಇದ್ದರೂ ಬಂದು ತಲೆಗೆ ಕುಕ್ಕುತ್ತದೆ. ಈ ಮೊದಲು ಎ.ಕೆ. ಕಾಲೋನಿಯ ಪರಶುರಾಮಪ್ಪ ಎಂಬುವವರ ಮೇಲೆ ಇದೇ ಕಾಗೆ ತನ್ನ ಪ್ರತಾಪ ತೋರುತ್ತಿತ್ತು. ಹರಸಾಹಸ ಪಟ್ಟು ಕಾಗೆಯನ್ನು ಅಲ್ಲಿಂದ ಓಡಿಸಲಾಗಿತ್ತು.

ಇದೀಗ ಸರ್ಕಾರಿ ಶಾಲೆ ಪಕ್ಕದ ರಸ್ತೆಯ ಇಕ್ಕೆಲಗಳಲ್ಲಿನ ಮನೆಗಳ ಬಳಿ ಈ ಕಾಗೆ ಹಾರಾಡುತ್ತಿದೆ. ಇಲ್ಲಿ ನೆಲೆಸಿರುವ ಏಳು ಜನರನ್ನು ಗುರಿಯಾಗಿಸಿಕೊಂಡು ತನ್ನ ಕುಕ್ಕುವ ಚಾಳಿಯನ್ನು ಮುಂದುವರಿಸಿದೆ. ಇತರೆ ಯಾರ ಮೇಲೂ ಕಾಗೆ ಈ ರೀತಿ ಮಾಡುತ್ತಿಲ್ಲ. ಇದರ ನಡೆಯಿಂದ ಬೇಸತ್ತಿರುವ ಜನರು ಪಾವಗಡದ ಶನೀಶ್ವರನ ಸನ್ನಿಧಿಗೆ  ಹೋಗಿ ಪೂಜೆ ಮಾಡಿಸಿಕೊಂಡು ಬಂದರೂ ಕುಕ್ಕುವಿಕೆ ನಿಂತಿಲ್ಲ.

ಸೇಡಿನ ಮರ್ಮವೇನು?:  ಕಾಗೆ ಕಾಟದಿಂದ ಪಾರಾಗಲು ಶತಾಯಗತಾಯಪ್ರಯತ್ನ ನಡೆಸಿರುವ ಓಬಳಾಪುರ ಗ್ರಾಮಸ್ಥರು, ಅದರ ದಾಳಿ ತಪ್ಪಿದರೆ ಸಾಕು ಎನ್ನುತ್ತಿದ್ದಾರೆ.ಕಾಗೆಯನ್ನು ಕಂಡವರೆಲ್ಲ ಹೆದರಿಸಿ ಓಡಿಸುವ ಕೆಲಸಮಾಡುತ್ತಿದ್ದಾರೆ. ಆದರೆ ಕಾಗೆ ಮಾತ್ರ ತಾನಿರುವಪ್ರದೇಶವನ್ನು ಬಿಟ್ಟು ಕದಲುತ್ತಿಲ್ಲ. ಹಾಗಾಗಿ ಕಾಗೆಯ ಸೇಡಿನ ಮರ್ಮವೇ ತಿಳಿಯದಂತಾಗಿದೆ.

Advertisement

ಬೆಳಗ್ಗೆ ಫ್ರೆಶ್‌ ಮೂಡ್‌ ನಲ್ಲಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಮುಂದಾದರೆ ಕಾಗೆ ಕಾಟ ಕೊಡುತ್ತಿದೆ. ಕಾಗೆಗೆ ನಾವೇನು ಮಾಡದಿದ್ದರೂ ಕಾಡುತ್ತಿದೆ. ಅವಿನಾಶ್‌, ಓಬಳಾಪುರ ಗ್ರಾಮಸ್ಥ

ಎಚ್‌.ಬಿ. ನಿರಂಜನಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next