– ಸಂತಾನಾಭಿವೃದ್ಧಿ ಕಾರ್ಯಕ್ರಮದಡಿ ಇದನ್ನು ಬಳಸಲಾಗಿತ್ತು
– ಈಗ ತನ್ನ ತವರು ಗೊಲಪಾಗೋಸ್‌ಗೆ ಆಮೆ ವಾಪಸ್
ಕ್ಯಾಲಿಫೋರ್ನಿಯಾ: ಶತಕ ಪೂರೈಸಿರುವ ದೈತ್ಯ ಆಮೆಯು, ಅಳಿವಿನಂಚಿನಲ್ಲಿದ್ದ ತನ್ನ ಸಂತತಿಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿರುವ ಸಂತೃಪ್ತಿಯೊಂದಿಗೆ ತವರಿಗೆ ಮರುಳುತ್ತಿದೆ.
ಅಮೆರಿಕದ ಕ್ಯಾಲಿಫೋರ್ನಿಯಾ ಸಾಂತಾ ಕ್ರುಜ್ ದ್ವೀಪದಲ್ಲಿ ಆಮೆಗಳ ಸಂತತಿ ಗಣನೀಯವಾಗಿ ಕ್ಷೀಣಿಸುತ್ತಿತ್ತು. ಈ ಹಿನ್ನೆಲೆಯಲ್ಲಿ 1960ರಲ್ಲಿ ಈ ಆಮೆಗಳ ಸಂತಾನಭಿವೃದ್ಧಿ ಹೆಚ್ಚಿಸುವ ಕಾರ್ಯಕ್ರಮದಡಿ ಗೊಲಪಾಗೋಸ್ ದ್ವೀಪದಿಂದ ಡೈಗೋ ಎಂಬ ಗಂಡು ಆಮೆ ಸೇರಿದಂತೆ 14 ಆಮೆಗಳನ್ನು ಸಾಂತಾ ಕ್ರುಜ್ ದ್ವೀಪಕ್ಕೆ ಕರತರಲಾಗಿತ್ತು. ಇದೀಗ ಇಲ್ಲಿ 2 ಸಾವಿರಕ್ಕೂ ಅಧಿಕ ಆಮೆಗಳು ವೃದ್ಧಿಯಾಗಿವೆ. ಈ ಪೈಕಿ 800 ಆಮೆಗಳ ಜನನಕ್ಕೆ ಡೈಗೋ ಕಾರಣವಾಗಿದೆ. ಸಂತಾನಾಭಿವೃದ್ಧಿಯಲ್ಲಿ ಈ ಆಮೆ ತನ್ನದೇ ಆಗ ಮಹತ್ವದ ಪಾತ್ರವಹಿಸಿದೆ.
ಈ ದ್ವೀಪದಲ್ಲಿ ಆಮೆ ಸಂತತಿ ಹೆಚ್ಚಿಸುವ ಕಾರ್ಯಕ್ರಮ ಯಶಸ್ವಿಯಾಗಿರುವುದರಿಂದ ಡೈಗೋ ಆಮೆಯನ್ನು ತನ್ನ ತವರು ಗೊಲಪಾಗೋಸ್ ದ್ವೀಪಕ್ಕೆ ಕಳುಹಿಸಲಾಗುತ್ತಿದೆ. ಅಂದು ಪ್ಲೇಬಾಯ್ ಆಗಿದ್ದ ಈ ಡೈಗೋ ಈಗ ನೂರು ವಸಂತಗಳನ್ನು ಪೂರೈಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದಿನ ಮಾರ್ಚ್‌ಗೆ ಗೊಲಪಾಗೋಸ್ ದ್ವೀಪಕ್ಕೆ ಆಗಮಿಸಲಿದೆ. ಈ ದ್ವೀಪವು ಜೀವವೈವಿಧ್ಯ ತಾಣವಾಗಿದ್ದು, ಇದನ್ನು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ. ಭಾರೀ ಸಂಖ್ಯೆಯಲ್ಲಿ ಪ್ರವಾಸಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.