ಸತತ ಮಳೆಯಿಂದ ಜಲಾಶಯಗಳ ಒಳಹರಿವು ಹೆಚ್ಚಿದ್ದು, ಪ್ರಮುಖ ನದಿಗಳಾದ ಶರಾವತಿ, ನೇತ್ರಾವತಿ, ಕಾವೇರಿ, ಅಘನಾಶಿನಿ, ತುಂಗಾ, ಭದ್ರಾ, ಕುಮದ್ವತಿ, ದಂಡಾವತಿ ಮೈದುಂಬಿ ಹರಿಯುತ್ತಿವೆ. ರಭಸದ ಮಳೆಯ ಜೊತೆಗೆ ಗಾಳಿಯೂ ಬೀಸುತ್ತಿರುವ ಕಾರಣ ಹಲವೆಡೆ ವಿದ್ಯುತ್ ಕಂಬಗಳು ಮುರಿದಿವೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
Advertisement
ಮಳೆಗೆ ಮನೆಯ ಚಾವಣಿ ಕುಸಿದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ (ಗುಡಕಟ್ಟಿ) ಗ್ರಾಮದ ಸಂತೋಷ ಮುದಕಪ್ಪ ಮಸ್ಕಿ (31) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಅಸು ಗ್ರಾಮದ ಚಾಂದೇವಾಡಿ ಸೇತುವೆ ಮುಳುಗಿದ್ದು, ಪಾಂಡ್ರಿ ನದಿ ಉಕ್ಕಿ ಹರಿಯುತ್ತಿದೆ. ಶಾಲಾ ಮಕ್ಕಳು ದೋಣಿ ಮೂಲಕ ನದಿ ದಾಟುವ ಸಂಕಷ್ಟ ಎದುರಿಸುತ್ತಿದ್ದಾರೆ. ರೆಸಾರ್ಟ್‌ಗಳ ರಿವರ್ ರಾಫ್ಟಿಂಗ್ ದೋಣಿಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ಬಳಸಿಕೊಳ್ಳಲಾಗಿದೆ. ಯಲ್ಲಾಪುರ ತಾಲೂಕಿನ ಆನಗೋಡ ಗ್ರಾ.ಪಂ ವ್ಯಾಪ್ತಿಯ ಸಾವಗದ್ದೆ ಸಮೀಪದ ಶೇಡಿಗಾಳಿ ಬಳಿ ಮಳೆ-ಗಾಳಿಗೆ ಕೈಗಾ ಹೈಟೆನ್ಶನ್ ವಿದ್ಯುತ್ ತಂತಿ ಹರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಮಾಣಿಹೊಳೆ ಸೇತುವೆ ಮತ್ತಷ್ಟು ಕುಸಿದಿದೆ.ಕರಾವಳಿ ಭಾಗದಲ್ಲಿ ಶೇ.100ರಷ್ಟು ಮಳೆ:
ಕರಾವಳಿ ಭಾಗದಲ್ಲಿ ಶೇ.100ರಷ್ಟು ಮಳೆ ಆವರಿಸಿದ್ದರೆ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ತಲಾ ಶೇ.80ರಷ್ಟು ಮಳೆ ಆವರಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಗರಿಷ್ಠ 111.9 ಮಿ.ಮೀ, ಉತ್ತರ ಕನ್ನಡ 105.9 ಮಿ.ಮೀ, ದಕ್ಷಿಣ ಕನ್ನಡ 104.5 ಮಿ.ಮೀ, ಚಿಕ್ಕಮಗಳೂರು 99.1.ಮೀ., ಉಡುಪಿ 87.1 ಮಿ.ಮೀ, ಹಾಸನ 64.5 ಮಿ.ಮೀ, ಬೆಳಗಾವಿ 63 ಮಿ.ಮೀ ಮಳೆ ಬಿದ್ದಿದೆ. ಉಳಿದಂತೆ ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಧಾರವಾಡ, ಹಾವೇರಿ, ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ಚಿತ್ರದುರ್ಗ,ವಿಜಯಪುರದಲ್ಲಿ ಸಾಧಾರಣ ಮಳೆ ಆಗಿದೆ.
ರಾಯಚೂರು ಜಿಲ್ಲೆಯಲ್ಲಿ ಅತಿ ಕಡಿಮೆ 1 ಮಿ.ಮೀ ಮಳೆ ಬಿದ್ದಿದೆ. ಮುಂದಿನ ಎರಡು ದಿನಗಳಲ್ಲಿ ಭಾರಿ ಮಳೆಯಾಗಲಿದ್ದು, ಈ ವಾರ ಮುಂಗಾರು ಮಳೆ ರಾಜ್ಯವ್ಯಾಪಿ ಚುರುಕಾಗಿರಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.