Advertisement

Monsoon: ಬಿರುಸು ಪಡೆದ ಮುಂಗಾರು- ಹಾಸನ, ಶಿವಮೊಗ್ಗದಲ್ಲಿ ಭಾರೀ ಮಳೆ

12:08 AM Jun 21, 2023 | Team Udayavani |

ಬೆಂಗಳೂರು: ಇನ್ನೇನು ರಾಜ್ಯಕ್ಕೆ ಬರ ಪರಿಸ್ಥಿತಿ ಕಾಡಲಿದೆ ಎಂಬ ಆತಂಕದ ನಡುವೆಯೇ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್‌. ಪೇಟೆ ತಾಲೂಕಿನಲ್ಲಿ ಸಿಡಿಲು ಬಡಿದು ರೈತರೊಬ್ಬರು ಅಸುನೀಗಿದ್ದಾರೆ.

Advertisement

ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮುಂದಿನ 4 ದಿನ ರಾಜ್ಯದ 21 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಗುಡುಗಿನಿಂದ ಕೂಡಿದ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ತಾಸಿಗೆ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಎಚ್ಚರಿಕೆ ನೀಡಿದೆ.

ಹಾಸನ ಜಿಲ್ಲೆಯ ಹಲವೆಡೆ ಮಂಗಳವಾರ ಬಿರುಸಿನ ಮಳೆಯಾಗಿದೆ. ಹಾಸನ ನಗರದಲ್ಲಿ ಒಂದು ತಾಸು ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳೆಲ್ಲ ತುಂಬಿ ಹರಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಹಲವು ಬಡಾವಣೆಗಳ ನಿವಾಸಿಗಳು ಪರದಾಡಿದರು. 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ರಸ್ತೆಯ ಬದಿಯ ಚರಂಡಿಗಳಲ್ಲಿ ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ್ದರಿಂದ ಹಲವು ವಾಹನಗಳು ನೀರಿನಲ್ಲಿ ಮುಳುಗಿದವು.

ನಗರದ ಪ್ರಮುಖ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬರು ಕಾಲು ಜಾರಿ ಗುಂಡಿಯಲ್ಲಿ ಬಿದ್ದರು. ಕೂಡಲೇ ಅಲ್ಲಿ ಇದ್ದವರು ಅವರನ್ನು ರಕ್ಷಿಸಿದ್ದಾರೆ. ಹಲವೆಡೆ ಆಸ್ಪತ್ರೆಗಳು, ವಾಣಿಜ್ಯ ಮಳಿಗೆಗಳಿಗೆ ಕೂಡ ನೀರು ನುಗ್ಗಿದೆ.

ರೈತ ಸಾವು

Advertisement

ಮಂಡ್ಯ ಜಿಲ್ಲೆಯ ಕೆ.ಆರ್‌. ಪೇಟೆಯಲ್ಲಿ ಗುಡುಗು-ಸಿಡಿಲು ಸಹಿತ ಮಳೆಯಾಗಿದೆ. ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದ ಮಂಜುನಾಥ್‌ (40) ಸಿಡಿಲು ಬಡಿದು ಸ್ಥಳ ದಲ್ಲಿಯೇ ಅಸುನೀಗಿದ್ದಾರೆ. ಮತ್ತೂಬ್ಬ ರೈತ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿ ವಾತಾವರಣ ತಂಪಾಗು ವುದರ ಜತೆಗೆ ಕೃಷಿ ಚಟುವಟಿಕೆಗಳು ಚುರುಕಾಗುವ ನಿರೀಕ್ಷೆ ಉಂಟಾಗಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಉತ್ತಮ ಮಳೆಯಾಗಿದೆ. ಹಲವು ಸ್ಥಳಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ. ಹಲವು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಮತ್ತೆ ಬಿರುಸು

ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಮುಂಗಾರು ಮತ್ತೆ ಬಿರುಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾರಾಂತ್ಯದಿಂದ ದೇಶದ ಕೇಂದ್ರ, ಪಶ್ಚಿಮ, ಉತ್ತರ ಭಾಗಗಳಲ್ಲಿ ಮುಂಗಾರು ಚುರುಕಾಗಲಿದೆ ಎಂದು ಅದು ಹೇಳಿದೆ.

ಬೆಂಗಳೂರಿನಲ್ಲಿ ಮಳೆ

ಬೆಂಗಳೂರಿನ ಬಹುತೇಕ ಕಡೆ ಮಂಗಳವಾರ ಸಾಧಾರಣ ಮಳೆಯಾಗಿದೆ. ಇಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದ್ದು, ಮೋಡ ಕವಿದ ವಾತಾವರಣ ಇರಲಿದೆ. ರಾಜ್ಯ ರಾಜಧಾನಿಯಲ್ಲಿ ಶೀತ ಗಾಳಿ ಬೀಸುತ್ತಿದ್ದು, ಜನಸಾಮಾನ್ಯರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

21 ಜಿಲ್ಲೆಗಳಿಗೆ ಮುನ್ನೆಚ್ಚರಿಕೆ

ಮುಂದಿನ 4 ದಿನ ರಾಜ್ಯದ ಒಟ್ಟು  21 ಜಿಲ್ಲೆಗಳಲ್ಲಿ  ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಕಲಬುರಗಿ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ಯಾದಗಿರಿ, ಚಾಮರಾಜನಗರ, ದಾವಣಗೆರೆ, ರಾಯಚೂರು, ಉತ್ತರ ಕನ್ನಡ, ಹಾಸನ, ಶಿವಮೊಗ್ಗ, ಚಿತ್ರದುರ್ಗ, ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ  ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಗಳಿವೆ.

80 ಮನೆಗಳಿಗೆ ನೀರು

ಶಿವಮೊಗ್ಗದ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗಿದೆ. ಗುಡುಗು, ಸಿಡಿಲು ಆರ್ಭಟದೊಂದಿಗೆ ಸುರಿದ ಭಾರೀ ಮಳೆಯಿಂದ ಪ್ರಮುಖ ರಸ್ತೆಗಳಲ್ಲಿ ಅಡಿಗಳಷ್ಟು ನೀರು ಹರಿಯಿತು. ದಿಢೀರ್‌ ಮಳೆಗೆ ಕಂಗಾಲಾದ ಜನ ಮನೆ ಸೇರಲು ಪರದಾಡಿದರು. 80ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಶಿವಮೊಗ್ಗ ರೈಲು ನಿಲ್ದಾಣದಲ್ಲಿನ ಫ್ಲಾಟ್‌ಫಾರ್ಮ್ ಛಾವಣಿ ಸಂಪೂರ್ಣ ಸೋರುತ್ತಿದ್ದು, ವೀಡಿಯೋ ವೈರಲ್‌ ಆಗಿದೆ.

ಕರಾವಳಿಯ ಕೆಲವು ಕಡೆ ಮಂಗಳವಾರ ಮಳೆಯಾಗಿದೆ. ಮಂಗಳೂರು ಮತ್ತು ಉಡುಪಿ ನಗರದ ಅಲ್ಲಲ್ಲಿ  ಬೆಳಗ್ಗೆ ಮತ್ತು ರಾತ್ರಿ ವೇಳೆ ಸಾಧಾರಣ ಮಳೆಯಾಗಿದೆ. ಕಾರ್ಕಳ, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ ಮಳೆಯಾಗಿದೆ.

ಶೇ.75ರಷ್ಟು ಮಳೆ ಕೊರತೆ

ಜೂ. 1ರಿಂದ 20ರ ವರೆಗೆ ಕರಾವಳಿಯಲ್ಲಿ 488 ಮಿ.ಮೀ. ವಾಡಿಕೆ ಮಳೆ ಸುರಿಯಬೇಕಾದಲ್ಲಿ 121 ಮಿ.ಮೀ ಮಾತ್ರ ಸುರಿದಿದೆ. ಶೇ. 75ರಷ್ಟು ಕಡಿಮೆ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಡಿಕೆಯಂತೆ 540 ಮಿ.ಮೀ. ಮಳೆಯಾಗಬೇಕು, ಸುರಿದದ್ದು ಕೇವಲ 139 ಮಿ.ಮೀ. ಮಾತ್ರ. ಸದ್ಯ ಶೇ. 74ರಷ್ಟು ಕೊರತೆ ಇದೆ. ಉಡುಪಿಯಲ್ಲಿ 661 ಮಿ.ಮೀ. ಮಳೆ ಸುರಿಯಬೇಕಾದಲ್ಲಿ 584 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇ. 76ರಷ್ಟು ಕಡಿಮೆ ಸುರಿದಿದೆ.

ಕರಾವಳಿಯಲ್ಲಿ  ಮುಂದಿನ 3-4 ದಿನ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಚದುರಿದ್ದ ಮೋಡಗಳು ಅರಬಿ ಸಮುದ್ರ ಮತ್ತು ಕರಾವಳಿಯಲ್ಲಿ ದಟ್ಟೈಸು ತ್ತಿವೆ. ಹೀಗಾಗಿ ಮುಂಗಾರು ಚುರುಕಾಗುವ ನಿರೀಕ್ಷೆ ಇದೆ.

-ಡಾ| ರಾಜೇಗೌಡ, ಹವಾಮಾನ ವಿಜ್ಞಾನಿ, ಕೃಷಿ ವಿ.ವಿ., ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next