ಸಿರುಗುಪ್ಪ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವತಂತ್ರವಾಗಿ ಮತ ಚಲಾಯಿಸುವ ಮೂಲಕ ಉತ್ತಮ ಅಭ್ಯರ್ಥಿ ಆಯ್ಕೆಮಾಡಿಕೊಳ್ಳಬೇಕು. ಇಲ್ಲವೇ ಅಭ್ಯರ್ಥಿಗಳು ತಮಗೆ ಸರಿಯಿಲ್ಲದೆ ಹೋದಾಗ ನೋಟಾ ಮತವನ್ನಾದರೂ ಚಲಾಯಿಸುವ ಮೂಲಕ ತಮ್ಮ ಮತದಾನದ ಹಕ್ಕು ಚಲಾಯಿಸಲು ಅವಕಾಶವಿದೆ ಎಂದು ತಹಶೀಲ್ದಾರ್ ಎಸ್.ಪದ್ಮಕುಮಾರಿ ತಿಳಿಸಿದರು.
ತಾಲೂಕಿನ ಹಚ್ಚೊಳ್ಳಿ ಗ್ರಾಮದ ಕೆಇಬಿ ಕಾಲೋನಿಯಲ್ಲಿ ತಾಲೂಕು ಆಡಳಿತ ಹಾಗೂ ಚುನಾವಣಾ ಆಯೋಗ ವತಿಯಿಂದ ಮತದಾನದ ಕುರಿತು ಜಾಗೃತಿ ಮೂಡಿಸುವ ಅಂಗವಾಗಿ ನಡೆದ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅಭಿವೃದ್ಧಿಗಾಗಿ ಮತ್ತು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ತಮಗೆ ಒಬ್ಬ ಪ್ರತಿನಿ ಧಿಯ ಅವಶ್ಯಕತೆ ಇದ್ದು, ಯೋಗ್ಯರಾದ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ ದೇಶದ ಅಭಿವೃದ್ಧಿಗಾಗಿ ಪ್ರಾಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರದ್ದಾಗಿದೆ ಎಂದರು.
ತಾಪಂ ಇಒ ಶಿವಪ್ಪ ಸುಬೇದಾರ್ ಮಾತನಾಡಿ, ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಇಲ್ಲಿನ ಕೆಇಬಿ ಕಾಲೋನಿಯಲ್ಲಿ ಶೇ.57ರಷ್ಟು ಮಾತ್ರ ಮತದಾನವಾಗಿದ್ದು, ಅತಿ ಕಡಿಮೆ ಮತದಾನ ನಡೆದಿದ್ದರಿಂದ ಮತದಾರರಲ್ಲಿ ಜಾಗೃತಿ ಮೂಡಿಸಲು ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಂತರ ಕಾಲೋನಿಯ ವಿವಿಧ ಬೀದಿಗಳಲ್ಲಿ ತಹಶೀಲ್ದಾರ್ ಎಸ್ .ಪದ್ಮಕುಮಾರಿ, ತಾಪಂ ಇಒ ಶಿವಪ್ಪ ಸುಬೇದಾರ್, ಪೌರಾಯುಕ್ತ ಮರಿಲಿಂಗಪ್ಪ, ಅಬಕಾರಿ ನಿರೀಕ್ಷಕ ನರೇಂದ್ರ, ಶಿಕ್ಷಣ ಇಲಾಖೆಯ ವಿಜಯರಂಗಾರೆಡ್ಡಿ, ಪಿಡಿಒ ಈರಣ್ಣ ಸೇರಿದಂತೆ ವಾರ್ಡ್‌ನ ನಾಗರಿಕರು ಪಂಜಿನ ಮೆರವಣಿಗೆಯ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಎಸ್.ಪದ್ಮಕುಮಾರಿ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.