Advertisement

ಸಮಯದ ಹಿಂದೆ ಸವಾರಿ

11:47 AM Dec 24, 2017 | Team Udayavani |

ಚಿತ್ರ: ಟೋರ ಟೋರ  ನಿರ್ಮಾಣ, ನಿರ್ದೇಶನ: ಹರ್ಷ್‌ ಗೌಡ  ತಾರಾಗಣ: ಸಿದ್ದು ಮೂಲಿಮನಿ, ನಟರಾಜ್‌, ಗಗನ್‌, ಅನಿರುದ್ಧ, ಸನತ್‌, ಪೂಜಾ, ಸನಿಹ ಮತ್ತಿತರರು.

Advertisement

ಯಾರಿಗೆ ಅರ್ಥವಾಗಿಲ್ಲ, ಕೈ ಎತ್ತಿ …- ಚಿತ್ರ ಮುಗಿಯಲು ಇನ್ನೇನು ಕೆಲವು ನಿಮಿಷ ಇರುವಾಗ ಚಿತ್ರದ ಪಾತ್ರಧಾರಿಯೊಬ್ಬ ಈ ಪ್ರಶ್ನೆ ಕೇಳುತ್ತಾನೆ. ತೆರೆಮೇಲೆ ಇರುವ ಕಲಾವಿದರೆಲ್ಲಾ ಕೈ ಎತ್ತುತ್ತಾರೆ. ಅವರ ಜೊತೆ ಪ್ರೇಕ್ಷಕರು ಕೂಡಾ. ಹೌದು, “ಟೋರ ಟೋರ’ ಚಿತ್ರ ಪ್ರತಿ ಹಂತದಲ್ಲೂ, ಪ್ರತಿ ಸನ್ನಿವೇಶಗಳಲ್ಲೂ ನಿಮ್ಮಲ್ಲಿ ಪ್ರಶ್ನೆ ಮೂಡಿಸುತ್ತಾ, ಹೊಸ ಹೊಸ ಗೊಂದಲಗಳನ್ನು ಸೃಷ್ಟಿಸುತ್ತಾ ಸಾಗುವ ಸಿನಿಮಾ. ಕೆಲವೊಮ್ಮೆ ಹೊಸ ಪ್ರಯತ್ನಗಳು ಒಂಚೂರು ಹೆಚ್ಚುಕಮ್ಮಿಯಾದರೂ ಅದು ಇಂತಹ ಗೊಂದಲಗಳಿಗೆ ಕಾರಣವಾಗುತ್ತವೆ ಎಂಬುದಕ್ಕೆ “ಟೋರ ಟೋರ’ ಚಿತ್ರ ಸಾಕ್ಷಿ. “ಟೋರ ಟೋರ’ ಚಿತ್ರ ನೋಡಿ ಹೊರಬಂದು ಒಮ್ಮೆ ನೀವು ರಿವೈಂಡ್‌ ಮಾಡಿಕೊಂಡರೆ ನೀವು ಮತ್ತೂಮ್ಮೆ ಕನ್‌ಫ್ಯೂಸ್‌ ಆಗುತ್ತೀರೇ ಹೊರತು ಚಿತ್ರದಲ್ಲಿ ಏನು ನಡೆಯಿತೆಂಬ ಬಗ್ಗೆ ನಿಮಗೆ ಒಂದು ಸ್ಪಷ್ಟ ಚಿತ್ರಣ ಸಿಗೋದಿಲ್ಲ. ಒಂದು ಮೆಷಿನ್‌, ಅದರ ಮೇಲೆ ಕೂರುವ ಪಾತ್ರಧಾರಿಗಳು, ಒಂದು ಬೆಂಕಿಯುಂಡೆ, ಯುವಕರ ಹರಟೆ … ಇವಿಷ್ಟೇ ರಿವೈಂಡ್‌ ಆಗುತ್ತಿರುತ್ತದೆ. ಟೈಮ್‌ ಮೆಷಿನ್‌ ಕಾನ್ಸೆಪ್ಟ್ ಇಟ್ಟುಕೊಂಡು “ಟೋರ ಟೋರ’ ಚಿತ್ರ ಮಾಡಲಾಗಿದೆ. ಹಾಗೆ ನೋಡಿದರೆ ಟೈಮ್‌ ಮೆಷಿನ್‌ ಕಾನ್ಸೆಪ್ಟ್ ಕನ್ನಡಕ್ಕೆ ಹೊಸದು.

ಯಾವುದೇ ಒಂದು ಹೊಸ ಕಾನ್ಸೆಪ್ಟ್, ಜಾನರ್‌ ಅನ್ನು ಪ್ರೇಕ್ಷಕರು ಒಪ್ಪಿಕೊಳ್ಳಬೇಕಾದರೆ ಅದು ನಮ್ಮ ಮನಸ್ಸಿಗೆ ತಟ್ಟಬೇಕು. ಅಂತಹ ಪ್ರಯತ್ನ ಹೊಸ ಕಾನ್ಸೆಪ್ಟ್ಗಳಿಗೆ ತುಂಬಾ ಮುಖ್ಯ. ಆದರೆ, “ಟೋರ ಟೋರ’ ನಿರ್ದೇಶಕರು ಈ ಬಗ್ಗೆ ಹೆಚ್ಚು ಗಮನವಹಿಸಬೇಕಿತ್ತು ಮತ್ತು ಸಾಕಷ್ಟು ಪೂರ್ವತಯಾರಿ ಕೂಡಾ ಬೇಕಿತ್ತು. ಹಾಗಂತ ಇದು ಕೆಟ್ಟ ಪ್ರಯತ್ನವಲ್ಲ. ತಮಗೆ ಸಿಗುವ ಟೈಮ್‌ ಮೆಷಿನ್‌ ಮೂಲಕ ತಮ್ಮ ಭೂತಕಾಲವನ್ನು ನೋಡಿಕೊಳ್ಳುವ ಯುವಕರ ಕುರಿತು ಇಡೀ ಸಿನಿಮಾ ಸಾಗುತ್ತದೆ. ಈ ಕಾನ್ಸೆಪ್ಟ್ ಚೆನ್ನಾಗಿದೆ. ಆದರೆ, ಅದನ್ನು ಮತ್ತಷ್ಟು ವಿಸ್ತರಿಸಿ, “ಪ್ರೇಕ್ಷಕ ಸ್ನೇಹಿ’ಯನ್ನಾಗಿಸುವಲ್ಲಿ ಅವರು ಹಿಂದೆ ಬಿದ್ದಿದ್ದಾರೆ. ಬಟನ್‌ ಒತ್ತಿದ ಕೂಡಲೇ ಅದೃಶ್ಯರಾಗುವ, 99 ವರ್ಷಗಳ ಹಿಂದಕ್ಕೆ ಹೋಗಿ ಬರುವ ಅಂಶಗಳನ್ನು ಅಷ್ಟು ಬೇಗ ಅರಗಿಸಿಕೊಳ್ಳೋದು ಕಷ್ಟ. ಮುಖ್ಯವಾಗಿ ಈ ಸಿನಿಮಾದಲ್ಲಿ ಏಕತಾನತೆ ಕಾಡುತ್ತದೆ.

ಕಾಲೇಜೊಂದರ ಯುವಕರ ಗುಂಪೊಂದು ತಮಗೆ ಸಿಗುವ ಟೈಮ್‌ ಮೆಷಿನ್‌ ಇಟ್ಟುಕೊಂಡು ಹಿಂದಿನ ದಿನಗಳಿಗೆ ಜಾರುವುದನ್ನು ಮತ್ತು ಅದರಿಂದ ಥ್ರಿಲ್‌  ಆಗುವುದನ್ನು ತೋರಿಸಿದ್ದಾರೆ. ಇಡೀ ಸಿನಿಮಾದಲ್ಲಿ
ಅದರಾಚೆ ಯೋಚಿಸುವ ಅಥವಾ ಟೈಮ್‌ ಮೆಷಿನ್‌ ಮೂಲಕ ಅವರು ಹೊಸದೇನನ್ನು ಹೇಳುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ, ಅದೇ ದೃಶ್ಯಗಳು, ಮಾತುಕತೆಗಳು ರಿಪೀಟ್‌ ಆಗುತ್ತಿರುತ್ತವೆ. ಎ.ಸಿಯಡಿಯಲ್ಲೇ ಹುಟ್ಟಿ ಬೆಳೆದವರಂತೆ, ರಿಮೋಟ್‌ ಸಿಕ್ಕಾಗ ಏನೋ ಜೀವನದಲ್ಲಿ ಸಿಗದ ಅಪರೂಪದ ವಸ್ತು ಸಿಕ್ಕಂತೆ ವರ್ತಿಸುವ ಯುವಕರ ತಂಡ ಕೆಲವೊಮ್ಮೆ ಕಾಮಿಡಿಯಾಗಿಯೂ ಕಾಣುತ್ತದೆ.

ಇಲ್ಲಿ ಒಂದಷ್ಟು ಪಾತ್ರಗಳು ಬರುತ್ತವೆ. ಆ ಪಾತ್ರಗಳಿಗೆ ಹೆಚ್ಚು ಮಹತ್ವವಿಲ್ಲ. ಸಿನಿಮಾದಿಂದ ಬೇರೆಯಾಗಿಯೇ ಕಾಣುತ್ತವೆ. ಸಿನಿಮಾದಲ್ಲಿ ವಿಷಯ ಕಡಿಮೆ ಇದೆ ಎಂಬುದು ಕೆಲವು ದೃಶ್ಯಗಳ ಮೂಲಕ ಗೊತ್ತಾಗುತ್ತದೆ. ಯುವಕರ ಸುಖಾಸುಮ್ಮನೆ ಕಾಮಿಡಿ, ಹರಟೆ, ತರೆಲಗಳಲ್ಲಿ ಆ ಜಾಗವನ್ನು ತುಂಬಲಾಗಿದೆ. ಚಿತ್ರದಲ್ಲಿ ಟೈಮ್‌ ಮೆಷಿನ್‌ ಅನ್ನು ತುಂಬಾ ಚೆನ್ನಾಗಿ ಡಿಸೈನ್‌ ಮಾಡಲಾಗಿದೆ. ಆ ಮಟ್ಟಿಗೆ ಗ್ರಾμಕ್‌ ತಂಡದ ಕೆಲಸವನ್ನು ಮೆಚ್ಚಬೇಕಿದೆ. ಚಿತ್ರದಲ್ಲಿ ಹಾಡುಗಳಿಲ್ಲ. ಆದರೆ, ಹಿನ್ನೆಲೆ ಸಂಗೀತಕ್ಕೂ ದೃಶ್ಯಗಳಿಗೂ ಹೊಂದಿಕೆಯಾಗಿಲ್ಲ. ಚಿತ್ರದಲ್ಲಿ ಸಿದ್ದು ಮೂಲಿಮನಿ, ನಟರಾಜ್‌, ಗಗನ್‌, ಅನಿರುದ್ಧ, ಸನತ್‌, ಪೂಜಾ, ಸನಿಹ ನಟಿಸಿದ್ದಾರೆ.

Advertisement

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next