Advertisement

ಟಾಪಿಂಗ್‌ ಹಾದೀಲಿ ಟ್ರಾಫಿಕ್‌ ಟ್ರಬಲ್‌!

12:23 PM Dec 07, 2017 | |

ಬೆಂಗಳೂರು: ಮಳೆಗಾಲದಲ್ಲಿ ರಸ್ತೆಗಳಲ್ಲಿ ಕಾಣಿಸಿಕೊಳ್ಳುವ ಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಮಹಾನಗರ ಪಾಲಿಕೆ ನಗರದ ಕೆಲ ಪ್ರಮುಖ ರಸ್ತೆಗಳನ್ನು ವೈಟ್‌ ಟಾಪಿಂಗ್‌ ಮಾಡಲು ಮುಂದಾಗಿದೆ. ಪಾಲಿಕೆ ಕೈಗೊಂಡಿರುವ ಕಾರ್ಯ ಉತ್ತಮವಾದುದೇ, ಆದರೆ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಟ್ರಾಫಿಕ್‌ ಜಾಮ್‌ ಹೆಚ್ಚಿರುವುದು ಮತ್ತು ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ನಿಗದಿಪಡಿಸದೇ ಇರುವ ಪಾಲಿಕೆಯ ಕ್ರಮ ಈಗ ಭಾರೀ ಚರ್ಚೆ ಮತ್ತು ಟೀಕೆಗೆ ಗುರಿಯಾಗಿದೆ.

Advertisement

ನಗರದ ಪ್ರಮುಖ ರಸ್ತೆಗಳಲ್ಲಿ ಬಿಬಿಎಂಪಿ ವತಿಯಿಂದ ಕೈಗೊಂಡಿರುವ ವೈಟ್‌ ಟಾಪಿಂಗ್‌ ಕಾಮಗಾರಿಯಿಂದ ರಸ್ತೆಗಳು ಕಿರಿದಾಗಿವೆ. ಆದರೆ ಕಾಮಗಾರಿ ನಡೆಯುತ್ತಿರುವ ರಸ್ತೆಗಳಿಗೆ ಪರ್ಯಾಯವಾಗಿ ಪಾಲಿಕೆ ಬೇರೆ ಮಾರ್ಗಗಳ ವ್ಯವಸ್ಥೆ ಮಾಡದ ಕಾರಣ ಕಿಲೋಮೀಟರ್‌ಗಟ್ಟಲೇ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಪರಿಣಾಮ ವಾಹನ ಚಾಲಕರು, ಸವಾರರು ಮತ್ತು ಪ್ರಯಾಣಿಕರು ಗಂಟೆಗಟ್ಟಲೆ ರಸ್ತೆಯಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಆಯ್ದ ರಸ್ತೆಗಳನ್ನು ವೈಟ್‌ಟಾಪಿಂಗ್‌ ರಸ್ತೆಗಳನ್ನಾಗಿ ಪರಿವರ್ತಿಸಲು ಪಾಲಿಕೆಯಿಂದ ಕೆಲ ರಸ್ತೆಗಳಲ್ಲಿ ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಈ ರಸ್ತೆಗಳಲ್ಲಿ ಹೆಚ್ಚಿನ ವಾಹನಗಳು ಸಂಚರಿಸುವುದರಿಂದ ಸಾಮಾನ್ಯ ದಿನಗಳಲ್ಲಿಯೇ ದಟ್ಟಣೆಯಿರುತ್ತದೆ. ಆದರೀಗ ವೈಟ್‌ಟಾಪಿಂಗ್‌ ಕಾಮಗಾರಿಯಿಂದ ಅರ್ಧ ರಸ್ತೆಯನ್ನು ಸಂಚಾರಕ್ಕೆ ನಿರ್ಬಂಧಿಸಿರುವುದರಿಂದ ಮೂರ್‍ನಾಲ್ಕು ಕಿ.ಮೀ. ದಟ್ಟಣೆಯಾಗುತ್ತಿದೆ.

ನಗರದ ಮೈಸೂರು ರಸ್ತೆಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯ ಬಳಿಯಿಂದ ಬಿಎಚ್‌ಇಲ್‌ ವೃತ್ತದವರೆಗೆ ರಸ್ತೆಯ ಅರ್ಧಕ್ಕೆ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಜತೆಗೆ ಹೆಣ್ಣೂರು ಜಂಕ್ಷನ್‌ ಬಳಿ ಮುಖ್ಯ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ವಿಜಯನಗರ ಮೆಟ್ರೋ ನಿಲ್ದಾಣದ ಬಳಿ ಹಾಗೂ ಶೇಷಾದ್ರಿಪುರದ ನಟರಾಜ ಚಿತ್ರಮಂದಿರದ ಬಳಿ ವೈಟ್‌ಟಾಪಿಂಗ್‌ ಕಾಮಗಾರಿ ನಡೆಸಲಾಗುತ್ತಿದೆ.

ಕಾಮಗಾರಿಯಿಂದಾಗಿ ವಾಹನ ಸವಾರರು 3-4 ಗಂಟೆಗಳು ಸಂಚಾರ ದಟ್ಟಣೆಯ ನಡುವೆಯೇ ಸಿಲುಕಿ ತೊಂದರೆ ಅನುಭವಿಸುವಂತಾಗಿದೆ. ರಸ್ತೆಗುಂಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೈಗೆತ್ತಿಕೊಂಡ ಕಾಮಗಾರಿಯಿಂದ ದಟ್ಟಣೆ ಸಮಸ್ಯೆ ಉಂಟಾಗುತ್ತಿದ್ದು, ಸಂಚಾರ ಪೊಲೀಸರು ಸಹ ದಟ್ಟಣೆ ನಿಯಂತ್ರಿಸಲು ಹರಸಾಹಕ ಪಡುತ್ತಿದ್ದಾರೆ.

Advertisement

ಒಂದು ವರ್ಷ ಸಮಸ್ಯೆ ತಪ್ಪಿದ್ದಲ್ಲ: ಬಿಬಿಎಂಪಿ ವತಿಯಿಂದ ನಗರದ ಒಟ್ಟು 29 ರಸ್ತೆಗಳನ್ನು ಎರಡು ಪ್ಯಾಕೇಜ್‌ಗಳಲ್ಲಿ ವೈಟ್‌ಟಾಪಿಂಗ್‌ ಮಾಡಲು ನಿರ್ಧರಿಸಿದ್ದು, ಒಟ್ಟು 93.47 ಕಿ.ಮೀ ಉದ್ದದ ರಸ್ತೆಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ. ಪ್ರಮುಖವಾಗಿ ಹೊರವರ್ತುಲ ರಸ್ತೆಗಳನ್ನು ವೈಟ್‌ಟಾಪಿಂಗ್‌ ಆಗಿ ಪರಿವರ್ತಿಸಲು ಯೋಜನೆ ರೂಪಿಸಿದ್ದು, ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಮುಂದಿನ ಡಿಸೆಂಬರ್‌ವರೆಗೆ ಕಾಲಾವಕಾಶ ನೀಡಲಾಗಿದೆ. ಹೀಗಾಗಿ ಪ್ರಮುಖ ರಸ್ತೆಗಳ ಒಂದಲ್ಲ ಒಂದು ಭಾಗದಲ್ಲಿ ಕಾಮಗಾರಿ ನಡೆಯುವುದರಿಂದ ಈ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಪ್ಪಿದಲ್ಲ. 

ಪೀಕ್‌ ಅವರ್‌ನಲ್ಲಿ ಪೀಕಲಾಟ: ವೈಟ್‌ಟಾಪಿಂಗ್‌ ಕಾಮಗಾರಿಯಿಂದಾಗಿ ಬೆಳಗ್ಗೆ ಹಾಗೂ ಸಂಜೆ (ಪೀಕ್‌ ಅವರ್‌) ವೇಳೆ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಸವಾರರು 2-3 ಕಿ.ಮೀ. ತಲುಪಲು 3-4 ಗಂಟೆಯಾಗುತ್ತಿದೆ. ಇದರಿಂದಾಗಿ ನಿಗದಿತ ಸಮಯಕ್ಕೆ ಶಾಲೆ, ಕಚೇರಿ ಹಾಗೂ ಮನೆಗೆ ತಲುಪಲಾಗದೆ ಜನರು ಕಷ್ಟಪಡುತ್ತಿದ್ದು, ಈ ಹಿಂದೆ ಸಾಮಾನ್ಯವಾಗಿ 1 ಗಂಟೆಗೆ ಮುಂಚಿತವಾಗಿ ಮನೆ ಬಿಡುತ್ತಿದ್ದವರೀಗ 2-3 ಗಂಟೆ ಮುಂಚಿತವಾಗಿ ಮನೆ ಬಿಡಬೇಕಾಗಿದೆ. 

ವಿದ್ಯಾರ್ಥಿಗಳ ಪರದಾಟ: ಮೈಸೂರು ರಸ್ತೆ, ಹೆಣ್ಣೂರು ಜಂಕ್ಷನ್‌ ಹಾಗೂ ಹೊಸೂರು ರಸ್ತೆಗಳಲ್ಲಿನ ಕಾಮಗಾರಿಗಳಿಂದ ಕಾಲೇಜು ಹಾಗೂ ಮನೆ ತಲುಪುವುದು 3-4 ಗಂಟೆಗಳು ತಡವಾಗುತ್ತಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ವಾರ್ಷಿಕ ಬಸ್‌ ಪಾಸ್‌ ಪಡೆದಿರುವುದರಿಂದ ಅನಿವಾರ್ಯವಾಗಿ ಅದೇ ಮಾರ್ಗಗಳಲ್ಲಿ ಸಂಚಾರಿಸಬೇಕಾಗಿದೆ. ನಿತ್ಯ ದಟ್ಟಣೆಯಲ್ಲಿ ಸಂಚಾರಿಸಲಾಗದೆ ಕೆಲವರು ಮಾರ್ಗ ಬದಲಾವಣೆ ನೀಡುವಂತೆ ಬಿಎಂಟಿಸಿಯನ್ನು ಕೋರಿದರೆ, ಇನ್ನು ಕೆಲವರು ಟಿಕೆಟ್‌ ಪಡೆದು ಪರ್ಯಾಯ ಮಾರ್ಗಗಳ ಮೂಲಕ ಮನೆ ತಲುಪುತ್ತಿದ್ದಾರೆ. 

ನಗರದಲ್ಲಿನ ರಸ್ತೆಗಳಲ್ಲಿನ ಗುಂಡಿ ರಸ್ತೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ವೈಟ್‌ಟಾಪಿಂಗ್‌ ಕಾಮಗಾರಿ ನಡೆಸಲಾಗುತ್ತಿದೆ. ಈ ರಸ್ತೆಗಳಿಂದ 30 ವರ್ಷಗಳ ಕಾಲ ರಸ್ತೆ ಬಾಳಿಕೆ ಬರಲಿದ್ದು, ದಟ್ಟಣೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಂಚಾರಿ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ 

ಪೊಲೀಸರು ಅನುಮತಿ ನೀಡಿರುವ ರಸ್ತೆ ಮತ್ತು ದಿನಾಂಕ ವಿವರ
ಎಲ್ಲಿಂದ    ಎಲ್ಲಿಗೆ    ಅನುಮತಿ ನೀಡಿರುವ ದಿನಾಂಕ
-ಹೆಣ್ಣೂರು ಜಂಕ್ಷನ್‌    ಬೈಯಪ್ಪನಹಳ್ಳಿ    ಅ.17-ಡಿ.6
-ಹೆಣ್ಣೂರು ಜಂಕ್ಷನ್‌    ಹೆಬ್ಟಾಳ    ನ.4-ಜ.15
-ಬೈಯಪ್ಪನಹಳ್ಳಿ    ಹೆಣ್ಣೂರು ಜಂಕ್ಷನ್‌    ನ.15-ಜ.10
-ಹೆಬ್ಟಾಳ    ಹೆಣ್ಣೂರು ಜಂಕ್ಷನ್‌    ಡಿ.15-ಫೆ.28
-ದೀಪಾಂಜಲಿನಗರ    ಟೋಲ್‌ಗೇಟ್‌ ಜಂಕ್ಷನ್‌    ಅ.30-ಜ-5
-ಟೋಲ್‌ಗೇಟ್‌    ದೀಪಾಂಜಲಿ ನಗರ    ಡಿ.15-ಫೆ.28
-ಮೆಟ್ರೋ ಕಾರಿಡಾರ್‌ ಶಿವಶಂಕರವೃತ್ತ    ಸೌಂತ್‌ಎಂಡ್‌ ವೃತ್ತ    ನ.15-ಜ.15
-ಮೆಟ್ರೋ ಕಾರಿಡಾರ್‌ ಸೌಂತ್‌ಎಂಡ್‌ ವೃತ್ತ    ಶಿವಶಂಕರ ವೃತ್ತ    ಡಿ.15-ಫೆ.28

Advertisement

Udayavani is now on Telegram. Click here to join our channel and stay updated with the latest news.

Next