ಹೊಸದಿಲ್ಲಿ: ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ತನಿಖೆಯನ್ನು ಜೂನ್ 15 ರೊಳಗೆ ಪೊಲೀಸರು ಪೂರ್ಣಗೊಳಿಸುವವರೆಗೆ ಕಾಯುವಂತೆ ಸರ್ಕಾರವು ಒತ್ತಾಯಿಸಿದ ನಂತರ ಪ್ರತಿಭಟನಾನಿರತ ಕುಸ್ತಿಪಟುಗಳು ಬುಧವಾರ ತಮ್ಮ ಪ್ರತಿಭಟನೆಯನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಲು ಒಪ್ಪಿಕೊಂಡಿದ್ದಾರೆ.
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಸುಮಾರು ಐದು ಗಂಟೆಗಳ ಸಭೆ ನಡೆಸಿದ ಕುಸ್ತಿಪಟುಗಳು, ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳನ್ನು ಹಿಂಪಡೆಯುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಹೇಳಿದರು.
ಕುಸ್ತಿಪಟುಗಳು ಮೇ 28 ರಂದು ‘ಮಹಿಳಾ ಸಮ್ಮಾನ್ ಮಹಾಪಚಾಯತ್’ ನಡೆಸಲು ಅನುಮತಿಯಿಲ್ಲದೆ ಹೊಸ ಸಂಸತ್ ಭವನದ ಕಡೆಗೆ ಮೆರವಣಿಗೆ ನಡೆಸಿದಾಗ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.
ಸಭೆಯಲ್ಲಿ ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ಅವರ ಪತಿ ಸತ್ಯವರ್ತ್ ಕಡಿಯಾನ್ ಮತ್ತು ಜಿತೇಂದರ್ ಕಿನ್ಹಾ ಉಪಸ್ಥಿತರಿದ್ದರು. ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧದ ಪ್ರತಿಭಟನೆಯ ಪ್ರಮುಖ ಹೋರಾಟಗಾರ್ತಿ ವಿನೇಶ್ ಫೋಗಟ್ ಅವರು ಸಭೆಯಲ್ಲಿ ಭಾಗಿಯಾಗಲಿಲ್ಲ.
“ಜೂನ್ 15 ರೊಳಗೆ ಪೊಲೀಸ್ ತನಿಖೆ ಪೂರ್ಣಗೊಳ್ಳಲಿದೆ ಎಂದು ನಮಗೆ ತಿಳಿಸಲಾಯಿತು. ಅಲ್ಲಿಯವರೆಗೆ, ಪ್ರತಿಭಟನೆಯನ್ನು ಅಮಾನತುಗೊಳಿಸುವಂತೆ ನಮಗೆ ತಿಳಿಸಲಾಗಿದೆ” ಎಂದು ಸಭೆಯ ನಂತರ ಸಾಕ್ಷಿ ಮಲಿಕ್ ಸುದ್ದಿಗಾರರಿಗೆ ತಿಳಿಸಿದರು.
“ದಿಲ್ಲಿ ಪೊಲೀಸರು ಮೇ 28 ರಂದು ಕುಸ್ತಿಪಟುಗಳ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ಗಳನ್ನು ಹಿಂಪಡೆಯುತ್ತಾರೆ” ಎಂದು ಅವರು ಹೇಳಿದರು. ಮಲಿಕ್ ಮತ್ತು ಪುನಿಯಾ ಇಬ್ಬರೂ ತಮ್ಮ ಆಂದೋಲನ ಇನ್ನೂ ಮುಗಿದಿಲ್ಲ ಮತ್ತು ಸರ್ಕಾರದ ಕೋರಿಕೆಯಂತೆ ಜೂನ್ 15 ರವರೆಗೆ ಮಾತ್ರ ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ಪ್ರತಿಪಾದಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಠಾಕೂರ್, ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಚುನಾವಣೆಯನ್ನು ಜೂನ್ 30 ರೊಳಗೆ ನಡೆಸಲಾಗುವುದು ಎಂದು ಹೇಳಿದರು. ಠಾಕೂರ್ ಅವರು ಈ ವಿವಾದವನ್ನು ಮುರಿಯಲು ನಿರ್ಣಾಯಕ ಸಭೆಯನ್ನು ಕರೆದಿದ್ದಾರೆ.