Advertisement
ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು- ಈ ಗಾದೆ ಮಾಡಿದ್ದು ಸುಮ್ಮನೆ ಅಲ್ಲ. ಮನೆ ಕಟ್ಟಿದ ನಂತರ, ಮದುವೆ ಮುಗಿದಾದ ಮೇಲೆ ಸಿಕ್ಕಾಪಟ್ಟೆ ಸುಸ್ತಾಗುತ್ತದೆ. ಇದು ಕೇವಲ ದೈಹಿಕ ಸುಸ್ತಲ್ಲ, ಮಾನಸಿಕ ಆಯಾಸ ಕೂಡ. ಏಕೆಂದರೆ, ಈ ಎರಡೂ ಸಂದರ್ಭದಲ್ಲಿ ಕೈಯಲ್ಲಿದ್ದ ಹಣವೆಲ್ಲಾ ಖಾಲಿಯಾಗಿ, ಮತ್ತೆ ಸಾಲ ಮಾಡುವ ಸ್ಥಿತಿ ಎದುರಾಗಿಬಿಡುತ್ತದೆ. ಮದುವೆ, ಮನೆ ಕಟ್ಟುವ ಸಂದರ್ಭಗಳಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಸಣ್ಣಪುಟ್ಟದ್ದು ಎನ್ನುತ್ತಲೇ ಸಾಲದ ಹೊರೆಯು ಮೆಲೇರುತ್ತಲೇ ಇರುತ್ತದೆ. ಇದರಿಂದ ಪಾರಾಗಲು, ಬಹಳಷ್ಟು ಜನ ಕೈಸಾಲವೆಂಬ ಮೀಟರ್ ಬಡ್ಡಿಯ ಸಮುದ್ರಕ್ಕೆ ಬಿದ್ದು ತೊಳಲಾಡುತ್ತಿರುತ್ತಾರೆ.
Related Articles
ಬ್ಯಾಂಕರುಗಳ ಹಿರಿಯಣ್ಣ ಭಾರತೀಯ ಸ್ಟೇಟ್ ಬ್ಯಾಂಕ್ ಹೇಳುವ ಪ್ರಕಾರ, ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಇದರಲ್ಲಿ ಎರಡು ಬಗೆಯ ಸಾಲಗಳಿವೆಯಂತೆ. ಮೊದಲನೆಯದಾಗಿ ಕಟ್ಟಿದ ಮನೆಯನ್ನು ಕೊಳ್ಳಲು ಮನೆಸಾಲ ಪಡೆಯ ಬಯಸುವವರು ಅಥವಾ ಈಗಾಗಲೇ ಮನೆ ಸಾಲ ಪಡೆದು 12 ಕಂತುಗಳನ್ನು ತುಂಬುವ ಮೊದಲೇ ಮತ್ತೆ ಹಣದ ಅವಶ್ಯಕತೆ ಇದ್ದಲ್ಲಿ, ಈಗಾಗಲೇ ಪಡೆದ ಸಾಲ ಹಾಗೂ ಪಡೆಯುತ್ತಿರುವ ಸಾಲದ ಮೊತ್ತ 30 ಲಕ್ಷಕ್ಕಿಂತಲೂ ಹೆಚ್ಚು ಆಗಿದ್ದಲ್ಲಿ ಈ ಟಾಪ್ ಅಪ್ ಲೋನ್ ಪಡೆಯಬಹುದು. ಆದರೆ ಈ ಬಗೆಯ ಸಾಲದಲ್ಲಿ ನೀವು ಪಡೆದ ಅಥವಾ ಪಡೆಯುತ್ತಿರುವ ಸಾಲದ ಶೇ.10ರಷ್ಟು ಮಾತ್ರ ಟಾಪ್ ಅಪ್ ಲೋನ್ ಆಗುತ್ತದೆ. ಉದಾಹರಣೆಗೆ- ನೀವು 40ಲಕ್ಷ ಸಾಲ ಪಡೆದಿದ್ದರೆ. ಹೆಚ್ಚುವರಿಯಾಗಿ ನಾಲ್ಕು ಲಕ್ಷ ಟಾಪ್‌ಅಪ್ ಲೋನ್ ದೊರೆಯುತ್ತದೆ. ಒಂದು ಪಕ್ಷ ನೀವು 30 ಲಕ್ಷ ಪಡೆದಿದ್ದರೆ. ಮೂರು ಲಕ್ಷ ಟಾಪ್ ಅಪ್ ಸಾಲ ಸಿಗುತ್ತದೆ.
Advertisement
ಹೀಗೆ ಮಾಡಲೂ ಕಾರಣ ಉಂಟು. ನೀವು ಕಟ್ಟಿದ ಮನೆಯನ್ನು ಖರೀದಿಸುವುದಕ್ಕೆ ಮನೆಸಾಲ ಬೇಕಿದೆ ಅಂತಿಟ್ಟುಕೊಳ್ಳೋಣ. ಮನೆಯ ಮಾರುಕಟ್ಟೆ ದರದ ಶೇ.85ರಷ್ಟು ನಿಮಗೆ ಬ್ಯಾಂಕ್ ಸಾಲ ಸಿಗುತ್ತದೆ. ಕೆಲ ತಿಂಗಳುಗಳಲ್ಲಿ ಮನೆಯ ಮಾರುಕಟ್ಟೆ ದರ ಏರಿಕೆಯಾಗುತ್ತದೆ. ಆಗ ನಿಮಗೆ ಮಕ್ಕಳ ವಿದ್ಯಾಭ್ಯಾಸವೋ, ಕಾಯಿಲೆಯೋ, ಮನೆ ರಿಪೇರಿಯೋ, ಪೀಠೊಪಕರಣಗಳ ಖರೀದಿಯೋ ಯಾವುದೋ ಕಾರಣಕ್ಕೆ ಮತ್ತೆ ಸಾಲ ಮಾಡುವ ಅನಿವಾರ್ಯ ಎದುರಾಗುತ್ತದೆ. ಈ ಸಂದರ್ಭದಲ್ಲಿ ಆಗ ಮತ್ತೆ ಟಾಪ್ ಅಪ್ ಯೋಜನೆಯಲ್ಲಿ ಸಾಲ ಪಡೆಯಬಹುದು.
ಇನ್ನು ಎರಡನೇ ವಿಧದ ಟಾಪ್ ಅಪ್ ಸಾಲ ಯೋಜನೆಯಲ್ಲಿ ಈಗಾಗಲೇ ಮನೆ ಸಾಲ ಪಡೆದಿದ್ದು, ಸರಿಯಾಗಿ ಕಂತುಗಳನ್ನು ಪಾವತಿಸುತ್ತಿದ್ದು, ಒಂದು ವರ್ಷದ ನಂತರ ಯಾವುದೇ ಉದ್ದೇಶಕ್ಕೆ ಹಣದ ಅವಶ್ಯಕತೆ ಇದ್ದಲ್ಲಿ ಸಾಲ ಪಡೆಯಬಹುದು. ಸಾಮಾನ್ಯವಾಗಿ ವರ್ಷದಿಂದ ವರ್ಷಕ್ಕೆ ಸೈಟು ಹಾಗೂ ಮನೆಯ ಮಾರುಕಟ್ಟೆಯ ಬೆಲೆ ಏರಿಕೆಯಾಗುತ್ತಿರುತ್ತದೆ. ನೀವು ಈ ಸಾಲ ಪಡೆಯುವ ಮುನ್ನ ಮನೆಯ ವ್ಯಾಲ್ಯುಯೇಷನ್ ಮಾಡಿಸಬೇಕಾಗುತ್ತದೆ. ಈಗಿನ ಮಾರುಕಟ್ಟೆಯ ದರದ ಶೇ.75 ರಿಂದ ಶೇ.80ರವರೆಗೆ ನೀವು ಸಾಲ ಪಡೆಯಬಹುದು. ನೆನಪಿಡಿ; ಮೊದಲು ನೀವು ಪಡೆದ ಸಾಲ ಹಾಗೂ ಈಗಿನ ಸಾಲದ ಒಟ್ಟು ಮೊತ್ತವನ್ನು ಇಲ್ಲಿ ಪರಿಗಣಿಸಲಾಗುತ್ತದೆ. ಆದರೆ, ಇಲ್ಲಿ 2ಲಕ್ಷದಿಂದ 5 ಕೋಟಿಯವರೆಗೆ ಸಾಲ ಪಡೆಯಬಹುದು. ನೀವು ಅದನ್ನು ಏತಕ್ಕೆ ಖರ್ಚುಮಾಡುತ್ತೀರಿ ಎಂದು ಬ್ಯಾಂಕಿನವರಿಗೆ ಲೆಕ್ಕ ಕೊಡಬೇಕಾದ ಅವಶ್ಯಕತೆ ಇಲ್ಲ. ಏಕಗಂಟಿನಲ್ಲಿ ಸಾಲ ದೊರೆಯುತ್ತದೆ. ಆದರೆ, ಮನೆ ಸಾಲ ಹೀಗಲ್ಲ. ಇದನ್ನು ಪಡೆಯಬೇಕಾದರೆ ನಿಮಗೆ ಕಂತು ಕಟ್ಟುವ ಸಾಮರ್ಥ್ಯದ ಬಗ್ಗೆ ವರಮಾನದ ಪುರಾವೆಯನ್ನು ಬ್ಯಾಂಕಿಗೆ ಕೊಡಬೇಕಾಗುತ್ತದೆ. ನಿಮ್ಮ ವರಮಾನ ಕಡಿಮೆ ಇದ್ದಲ್ಲಿ ನಿಮ್ಮ ಗಂಡ/ಹೆಂಡತಿ/ಮಗ/ಮಗಳು ಇವರ ವರಮಾನವನ್ನು ಪರಿಗಣಿಸುತ್ತಾರೆ. ಜೊತೆಗೆ, ಇದರೆ ಆಸ್ತಿ ಇದ್ದರೆ ಅದನ್ನು ಆರ್ಥಿಕ ಸಾಮರ್ಥಯ ತೋರಿಸಲು ಕೊಟ್ಟರೆ ಸಾಲ ಸರಾಗವಾಗಿ ಸಿಗುತ್ತದೆ.
ಹೆಚ್ಚಿನ ದಾಖಲೆ ಬೇಡ…ನೀವು ಈ ಸಾಲ ಪಡೆಯಲು ಹೆಚ್ಚಿನ ದಾಖಲೆಗಳೇನೂ ಬೇಡ. ನಿಮ್ಮ ವರಮಾನದ ಪುರಾವೆ, ಮನೆಯ ವ್ಯಾಲ್ಯೂಯೇಷನ್ ಇದ್ದರೆ ಅಷ್ಟೇ ಸಾಕು. ಏಕೆಂದರೆ, ಈಗಾಗಲೇ ನಿಮ್ಮ ಮನೆಯನ್ನು ಬ್ಯಾಂಕಿನವರು ಬ್ಯಾಂಕಿಗೆ ಡೀಡ್ ಮಾಡಿಕೊಂಡಿರುತ್ತಾರೆ. ಮತ್ತೆ ಈಗ ಅದೇ ಆಸ್ತಿಯ ಮೇಲೆ ಸಾಲ ಪಡೆಯುತ್ತಿರುವುದರಿಂದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೆಚ್ಚಿನ ಮೊತ್ತಕ್ಕೆ ಮನೆಯನ್ನು ಅಡಮಾನ ಮಾಡಬೇಕಾಗಬಹುದು. ಇನ್ನೂ ನೀವು ಮನೆಯ ಸಾಲವನ್ನೇ ಪಡೆದಿಲ್ಲ. ಈಗಾಗಲೇ ಮನೆ ಇದೆ ಅದನ್ನು ಅಡಮಾನವಗಿಟ್ಟು ಬ್ಯಾಂಕಿನಲ್ಲಿ ಸಾಲವನ್ನು ಪಡೆಯಲು ಸಾಧ್ಯವೇ ಎಂಬ ಪ್ರಶ್ನೆ ಅನೇಕರಲ್ಲಿ ಇದೆ. ಬ್ಯಾಂಕುಗಳು ಇದಕ್ಕೂ ಸೈ ಎನ್ನುತ್ತವೆ. ಬ್ಯಾಂಕ್‌ಗಳ ಭಾಷೆಯಲ್ಲಿ ಅದನ್ನು ಆಲ್ ಪರ್‌ಪಸ್ ಮಾರ್ಟ್‌ಗೇಜ್ ಲೋನ್ ಅನ್ನುತ್ತಾರೆ. ಇಲ್ಲಿ ನೀವು ಯಾವ ಉದ್ದೇಶಗಳಿಗೆ ಬೇಕಾದರೂ ಹಣವನ್ನು ಉಪಯೋಗಿಸಬಹುದು. ನೀವು ಖರ್ಚುಮಾಡುವ ಹಣಕ್ಕೆ ಯಾವುದೇ ಪುರಾವೆ ಕೇಳುವುದಿಲ್ಲ. ಈ ಬಗೆಯ ಸಾಲಕ್ಕೆ ನೀವು ಆಧಾರ ನೀಡುವ ಆಸ್ತಿ ವಾಣಿಜ್ಯ ಕಟ್ಟಡಗಳೂ ಆಗಿರಬಹುದು. ಈ ಬಗೆಯ ಸಾಲವನ್ನು ಕನಿಷ್ಠ 10 ಲಕ್ಷದಿಂದ ಗರಿಷ್ಠ 7.5 ಕೋಟಿಯವರೆಗೆ ಪಡೆಯಬಹುದು. ಸಾಲದ ಮೊತ್ತವನ್ನು ಅಂದಾಜಿಸುವಾಗ ಆಸ್ತಿಯ ಈಗಿನ ಮಾರುಕಟ್ಟೆಯ ಬೆಲೆ ಹಾಗೂ ಕಂತುಕಟ್ಟುವ ನಿಮ್ಮ ವರಮಾನ ಸಾಮರ್ಥ್ಯ ಇಲ್ಲಿ ಮುಖ್ಯ. ಸಾಲ ತೀರಿಸುವ ಅವಧಿ ಕನಿಷ್ಟ 5 ವರ್ಷದಿಂದ ಗರಿಷ್ಠ 15 ವರ್ಷಗಳವರೆಗೆ ನೀಡುತ್ತಾರೆ.ನೀವು ಈ ಸಾಲ ಪಡೆಯಲು ತಿಂಗಳ ವರಮಾನ ಕನಿಷ್ಠ 25,000 ಇರಬೇಕು. ನಿಮ್ಮ ಮನೆ ಅಥವಾ ಕಟ್ಟಡದ ಮಾರುಕಟ್ಟೆಯ ದರದ ಶೇ.60ರಿಂದ ಶೇ.65ರ ವರೆಗೆ ಮಾತ್ರ ಸಾಲ ಪಡೆಯಲು ಸಾಧ್ಯ. ಈ ಸಾಲಕ್ಕೆ ಬ್ಯಾಂಕಿನವರು ಹಾಕುವ ಬಡ್ಡಿ ಮನೆ ಸಾಲಕ್ಕಿಂತ ತುಸು ಹೆಚ್ಚಿರುತ್ತದೆ. ಸಾಮಾನ್ಯವಾಗಿ ಬ್ಯಾಂಕಿನ ಬೇಸ್‌ರೇಟ್‌ಗಿಂತ ಶೇ.1.50 ರಿಂದ ಶೇ.2.25ರಷ್ಟು ಅಧಿಕವಾಗಿರುತ್ತದೆ. ಸಾಲ ಪಡೆಯೋದು ಹೇಗಪ್ಪಾ?
ನಿಮಗೆ ನಿಮ್ಮ ವರಮಾನದ ಪ್ರಕಾರ ಎಷ್ಟು ಸಾಲ ಸಿಗಬಹುದು ಎಂಬುದಕ್ಕೆ ಈ ಕೋಷ್ಟಕ ನೋಡಿದರೆ ಅರ್ಥವಾಗುತ್ತದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ನೀವು ಗಳಿಸುವ ತಿಂಗಳ ವರಮಾನದಲ್ಲಿ ಸಾಲದ ಕಂತು ಕಳೆದು, ನಂತರ ಜೀವನ ನಿರ್ವಹಣೆಗೆ ಕನಿಷ್ಠ ಇಷ್ಟು ಹಣ ಬೇಕೆಬೇಕು ಎಂದಿದೆ. ಉದಾಹರಣೆಗೆ, ನಿಮ್ಮ ತಿಂಗಳ ವರಮಾನ ಹತ್ತು ಸಾವಿರವಿದ್ದಲ್ಲಿ ಕೇವಲ ಎರಡು ಸಾವಿರದಷ್ಟು ಹಣವನ್ನು ಸಾಲದ ಕಂತು ಕಟ್ಟಲು ಬಳಸಿಕೊಳ್ಳಬಹುದು. ತಿಂಗಳ ವರಮಾನ ಹೆಚ್ಚಾದಂತೆ ಕಂತು ಕಟ್ಟುವ ನಿಮ್ಮ ಸಾಮರ್ಥ್ಯ ಹೆಚ್ಚುತ್ತಾ ಹೋಗುತ್ತದೆ. ವಾರ್ಷಿಕ ವರಮಾನ ತಿಂಗಳ ಕಂತು
1.20 ಲಕ್ಷ 20%
1.20 ಲಕ್ಷ = ರೂ. 3 ಲಕ್ಷ 30%
3 ಲಕ್ಷ = ರೂ 5 ಲಕ್ಷ 55%
5 ಲಕ್ಷ = ರೂ. 8 ಲಕ್ಷ 60%
8 ಲಕ್ಷ = ರೂ. 10 ಲಕ್ಷ 65%
10 ಲಕ್ಷ 70% ಈಗಲೂ ಸಾಲ ಪಡೀರಿ
ಸೈಟು ಕೊಳ್ಳಲು ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಕೊಡುವುದಿಲ್ಲ. ಒಂದುಪಕ್ಷ ಕೊಟ್ಟರೂ, ಅದು ಎಲ್ಲ ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆ ಗೊಂಡ ಬಡಾವಣೆಯ ನಿವೇಶನವಾಗಿದ್ದರೆ ಮಾತ್ರ ಸಿಗುತ್ತದೆ. ಇನ್ನೊಂದು ಕಂಡೀಷನ್ ಅಂದರೆ, ಸೈಟು ಕೊಂಡ ಮೇಲೆ ಐದು ವರ್ಷದಲ್ಲಿ ಮನೆ ಕಟ್ಟಬೇಕು. ಇಲ್ಲವಾದರೆ, ಸೈಟು ಕೊಳ್ಳಲು ಕೊಟ್ಟ ಹಣಕ್ಕೆ ಬ್ಯಾಂಕ್‌ಗಳು ವಾಣಿಜ್ಯ ಬಡ್ಡಿ ವಿಧಿಸುತ್ತದೆ. ಹೀಗೆ, ಸಾಲ ಪಡೆದು ಸೈಟು, ಮನೆ ಕಟ್ಟಿ ನಂತರವೂ ಟಾಪ್‌ಅಪ್ ಸಾಲ ಪಡೆಯಬಹುದೇ? ಅಂದರೆ ಖಂಡಿತವಾಗಿ ಎನ್ನುತ್ತವೆ ಬ್ಯಾಂಕ್‌ಗಳು. ಆಗ ಮನೆ ಸಾಲ ಪಡೆದ ಶೇ. 10ರಷ್ಟು ಹಣ ಟಾಪ್‌ಅಪ್ ಸಾಲವಾಗಿ ದೊರೆಯುತ್ತದೆ. ಟಾಪ್ ಅಪ್ ಲೋನ್ ವಿಷಯದಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಎಂದರೆ ಬಡ್ಡಿ ದರ. ಇದು ಸಾಮಾನ್ಯವಾಗಿ ಮನೆ ಸಾಲಕ್ಕಿಂತ ಶೇ.0.50 ಅಧಿಕವಿರುತ್ತದೆ. ಈ ಯೋಜನೆಯಲ್ಲಿ ಕನಿಷ್ಠ 2 ಲಕ್ಷದಿಂದ ಗರಿಷ್ಠ 50 ಲಕ್ಷದವರೆಗೆ ಸಾಲ ದೊರೆಯಲಿದೆ. ಮರು ಪಾವತಿ ಸಹಾ ಮೊದಲ ಸಾಲದ ಪೂರ್ತಿ ಕಂತು ಮುಗಿಯುವ ಅವಧಿಗೆ ಮುನ್ನ ಅಥವಾ ಗರಿಷ್ಠ 20 ವರ್ಷಗಳ ಕಾಲಾವಧಿ ಸಿಗುತ್ತದೆ. – ರಾಮಸ್ವಾಮಿ ಕಳಸವಳ್ಳಿ