ಉಳಿತಾಯದ ಹಣವನ್ನು ಆಕರ್ಷಕ ಮಾಧ್ಯಮಗಳಲ್ಲಿ ಹೂಡುವ ಎಲ್ಲರ ಉದ್ದೇಶವು ಬಹುತೇಕ ಒಂದೇ ರೀತಿಯದ್ದಾಗಿರುತ್ತದೆ. ಅದೆಂದರೆ ಗರಿಷ್ಠ ಇಳುವರಿ ಕನಿಷ್ಠ ಅವಧಿಯೊಳಗೆ ಸಿಗುವಂತಿರಬೇಕು; ಕಡಿಮೆ ರಿಸ್ಕ್ ಇರಬೇಕು; ಅಸಲು ಹಣವನ್ನು ಎಂದೂ ಕಳೆದುಕೊಳ್ಳಬಾರದು !
ಹಣ ಹೂಡಿಕೆಯಲ್ಲಿ ಇಂತಹ ಒಂದು ಧೋರಣೆ ಸರಿಯೇ ಆಗಿದೆ. ಹಿಂದೆಲ್ಲ ಐದು ವರ್ಷದೊಳಗೆ ದುಪ್ಪಟ್ಟಾಗುವ ಠೇವಣಿ ಯೋಜನೆಗಳು ಇದ್ದವು. ಮೂರು ಪಟ್ಟು , ನಾಲ್ಕು ಪಟ್ಟು ಆಗುವ ಆಮಿಷ ಒಡ್ಡುವ ಯೋಜನೆಗಳೂ ಇದ್ದವು. ಆದರೆ ಅಂತಹ ಯೋಜನೆಗಳಲ್ಲಿ ಹಣ ಹೂಡಿದ ಅಮಾಯಕರು ತಮ್ಮ ಅಸಲನ್ನೇ ಕಳೆದು ಕೊಂಡರು.
ಆದುದರಿಂದ ನಾವು ಒಂದು ಮಾತು ನೆನಪಿನಲ್ಲಿ ಇಟ್ಟು ಕೊಳ್ಳಬೇಕು. ಅದೆಂದರೆ ಅತೀ ಕಡಿಮೆ ಅವಧಿಯಲ್ಲಿ ಅತ್ಯಧಿಕ ಇಳುವರಿ ತರುವ ಯೋಜನೆಗಳಲ್ಲಿ ಅತ್ಯಧಿಕ ರಿಸ್ಕ್ ಇದೆ. ಕಡಿಮೆ ರಿಸ್ಕ್ ಇರುವ ಹೂಡಿಕೆಗಳಲ್ಲಿ ಕಡಿಮೆ ಇಳುವರಿ ಇರುತ್ತದೆ; ಅವಧಿಯೂ ದೀರ್ಘವಾಗಿರುತ್ತದೆ; ಆದರೆ ಅಸಲು ಭದ್ರ ಇರುತ್ತದೆ.
ಹೀಗಿರುವಾಗ ನಾವು ನಮ್ಮ ಉಳಿತಾಯದ ಹಣವನ್ನು ಹೂಡುವ 10 ಟಾಪ್ ಮಾಧ್ಯಮಗಳು ಯಾವುವು ಎಂಬುದನ್ನು ತಿಳಿದಿರುವುದು ಅಗತ್ಯ. ಇದನ್ನು ತಿಳಿಯುವಾಗ ಹೂಡಿಕೆಯಲ್ಲಿ ಎರಡು ಬಗೆಯದ್ದಿರುತ್ತವೆ ಎಂಬುದನ್ನೂ ನಾವು ಗಮನಿಸಬೇಕು. ಮೊದಲನೇಯದ್ದು : ಹಣಕಾಸು ಸೊತ್ತುಗಳು ; ಎರಡನೇಯದ್ದು ಹಣಕಾಸೇತರ ಸೊತ್ತುಗಳು.
ಹಣಕಾಸು ಹೂಡಿಕೆ ಸೊತ್ತುಗಳನ್ನು ಶೇರು ಮಾರುಕಟ್ಟೆ ಅಥವಾ ಹಣಕಾಸು ಮಾರುಕಟ್ಟೆಯೊಂದಿಗೆ ಮಿಳಿತವಾಗಿರುವ ಸೊತ್ತುಗಳು. ಉದಾಹರಣೆಗೆ ಈಕ್ವಿಟಿ ಶೇರುಗಳು, ಮ್ಯೂಚುವಲ್ ಫಂಡ್ ಗಳು ಮತ್ತು ನಿರಖು ಇಳುವರಿ ನೀಡುವ ಸೊತ್ತುಗಳು (ಉದಾಹರಣೆಗೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಬ್ಯಾಂಕ್ ಫಿಕ್ಸ್ಡ್ ಡೆಪಾಸಿಟ್ ಗಳು.
ಹಣಕಾಸೇತರ ಹೂಡಿಕೆ ಸೊತ್ತುಗಳೆಂದರೆ ಚಿನ್ನ ಮತ್ತು ರಿಯಲ್ ಎಸ್ಟೇಟ್.
ಈ ಹಿನ್ನೆಲೆಯಲ್ಲಿ ನಾವೀಗ ನಮ್ಮ ಆಯ್ಕೆ ಉಪಲಬ್ಧವಿರುವ ಟಾಪ್ 10 ಹೂಡಿಕೆ ಅವಕಾಶಗಳು ಯಾವುವು ಎಂಬುದನ್ನು ಇಲ್ಲಿ ಚರ್ಚಿಸಬಹುದು. ಇವುಗಳನ್ನು ಅನುಕ್ರಮವಾಗಿ ಈ ಕೆಳಗಿನಂತೆ ಗುರುತಿಸಬಹುದು :
1. ನೇರ ಈಕ್ವಿಟಿ ಶೇರು ಹೂಡಿಕೆ
2. ಈಕ್ವಿಟಿ ಮ್ಯೂಚುವಲ್ ಫಂಡ್
3. ಡೆಟ್ (ಸಾಲ ಪತ್ರ) ಮ್ಯೂಚುವಲ್ ಫಂಡ್ ಗಳು
4, ನ್ಯಾಶನಲ್ ಪೆನ್ಶನ್ ಸಿಸ್ಟಮ್ (NPS)
5. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)
6. ಬ್ಯಾಂಕ್ ಫಿಕ್ಸ್ಡ್ ಡೆಪಾಸಿಟ್ (ಎಫ್ ಡಿ)
7. ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್ (SCSS)
8. ಆರ್ಬಿಐ ಟ್ಯಾಕ್ಸೇಬಲ್ ಬಾಂಡ್ ಗಳು
9. ರಿಯಲ್ ಎಸ್ಟೇಟ್
10. ಚಿನ್ನ
1. ನೇರ ಈಕ್ವಿಟಿ ಶೇರು ಹೂಡಿಕೆ : ನೇರವಾಗಿ ನಾವು ನಮ್ಮ ಹಣವನ್ನು ಶೇರುಗಳಲ್ಲಿ ತೊಡಗಿಸಬಹುದು. ಇದಕ್ಕಾಗಿ ನಮಗೆ ಯಾವುದೇ ಹಣಕಾಸು ಅಥವಾ ಬ್ಯಾಂಕಿಂಗ್ ಸಂಸ್ಥೆಯಲ್ಲಿ ಡಿಮ್ಯಾಟ್ ಅಕೌಂಟ್ ತೆರೆಯಬೇಕಾಗುತ್ತದೆ. ಆನ್ಲೈನ್ ಟ್ರೇಡಿಂಗ್ ಮೂಲಕ ನಾವೇ ಖುದ್ದು ಶೇರು ಖರೀದಿ, ಮಾರಾಟ ಮಾಡಬಹುದು.
ಆದರೆ ಮಾರುಕಟ್ಟೆ ತಿಳಿವಳಿಕೆ, ಮಾಹಿತಿ, ತಂತ್ರಜ್ಞಾನ ಇತ್ಯಾದಿಗಳ ಕೊರತೆ ನಮಗಿರುವ ಕಾರಣ ನಮಗೆ ಇದರಲ್ಲಿ ಗರಿಷ್ಠ ರಿಸ್ಕ್ ಇರುತ್ತದೆ. ಶೇರು ಮಾರುಕಟ್ಟೆಯು ಯಾವತ್ತೂ ಅಸ್ಥಿರತೆ ಮತ್ತು ಓಲಾಟ ಅಥವಾ ಏರು ಪೇರಿಗೆ ಸುಪ್ರಸಿದ್ಧವಾಗಿದೆ. ಒಮ್ಮೆ ಖರೀದಿಸಿದ ಶೇರುಗಳನ್ನು ಯಾವಾಗ ಬೇಕಾದರೂ ಮಾರಬಹುದು.
ಹೂಡಿಕೆ ಉದ್ದೇಶದಿಂದ ನಾವು ನಡೆಸುವ ನೇರ ಶೇರು ಖರೀದಿ ಮತ್ತು ಮಾರಾಟ ವಹಿವಾಟಿನಲ್ಲಿ ಇಳುವರಿ ಅಥವಾ ರಿಟರ್ನ್ಸ್ ನ ಯಾವುದೇ ಗ್ಯಾರಂಟಿ ಇರುವುದಿಲ್ಲ. ಶೇರು ಮಾರುಕಟ್ಟೆಯ ಸಂಪತ್ತು ಒಂದು ಅರ್ಥದಲ್ಲಿ ಕನ್ನಡಿಯೊಳಗಿನ ಗಂಟಿನ ಹಾಗೆ. ಆದರೂ ವಿವೇಕ ಮತ್ತು ಬುದ್ಧಿ ವಂತಿಕೆಯೊಂದಿಗೆ ಅತಿಯಾದ ಅಸೆ ಮತ್ತು ನಿರ್ಭಯವಾಗಿ ವ್ಯವಹರಿಸುವವರಿಗೆ ಕನ್ನಡಿಯೊಳಗಿನ ಗಂಟು ದಕ್ಕುವುದಿದೆ.
ಶೇರು ಮಾರುಕಟ್ಟೆಯಲ್ಲಿ ಅತ್ಯಂತ ಕ್ಷಿಪ್ರವಾಗಿ, ಅತ್ಯಂತ ಕಡಿಮೆ ಅವಧಿಯಲ್ಲಿ ಲಾಭ ಮಾಡಲು ಸಾಧ್ಯವಿದೆ. ಆದರೆ ರಿಸ್ಕ್ ಅಷ್ಟೇ ಗುರುತರವಾಗಿರುತ್ತದೆ. ಶೇರು ಖರೀದಿಯನ್ನು ಯಾವಾಗ ಮಾಡಬೇಕು ಮತ್ತು ಯಾವಾಗ ಶೇರನ್ನು ಮಾರಬೇಕು ಎಂಬುದು ಯಾವತ್ತೂ ಯಕ್ಷ ಪ್ರಶ್ನೆಯೇ ಆಗಿರುತ್ತದೆ; ಕಾರಣ ಶೇರು ಮಾರುಕಟ್ಟೆಯ ವಿಪರೀತ ಏರಿಳಿತ, ಓಲಾಟ !
ಶೇರು ಖರೀದಿ, ಮಾರಾಟದ ವ್ಯವಹಾರದಲ್ಲಿ ಯಾವತ್ತೂ ನಷ್ಟವನ್ನು ಕಡಿಮೆ ಮಾಡುವುದಕ್ಕೆ ಸ್ಟಾಪ್ ಲಾಸ್ ತಂತ್ರವನ್ನು ಅನುಸರಿಸಬೇಕಾಗುತ್ತದೆ. 100 ರೂ. ಧಾರಣೆಯ ಶೇರು 80 ರೂ.ಗೆ ಇಳಿಯುತ್ತಲೇ ಮಾರಾಟವಾಗಬೇಕು ಎಂದು ಸ್ಟಾಪ್ ಲಾಸ್ ಆರ್ಡರ್ ಹಾಕುವುದರಲ್ಲಿ (ಬಹುತೇಕ ಸಂದರ್ಭಗಳಲ್ಲಿ) ಜಾಣತನವೇ ಇರುತ್ತದೆ.
ಏಕೆಂದರೆ 80 ರೂ.ಗೆ ಇಳಿದ ಶೇರು ಅನಂತರ 50 ರೂ.ಗೆ ಕೂಡ ಕುಸಿಯಬಹುದು ! ಅನಂತರ ಅದೇ ಧಾರಣೆಯಲ್ಲಿ ಆ ಶೇರು ಬಹು ದಿನಗಳ ಕಾಲ ಉಳಿದರೆ ಆ ಸಂದರ್ಭದಲ್ಲಿ ಅದನ್ನು ಖರೀದಿಸಬಹುದಾಗಿರುತ್ತದೆ. ಆದುದರಿಂದ ಶೇರು ವಹಿವಾಟಿನಲ್ಲಿ ಖರೀದಿ ಮತ್ತು ಮಾರಾಟವನ್ನು ಎಂಟೆದೆಯೊಂದಿಗೇ, ಆದರೆ ವಿವೇಕಯುತವಾಗಿ, ಮಾಡಬೇಕಾಗುತ್ತದೆ.
ಶೇರು ಹೂಡಿಕೆಯಲ್ಲಿ ಆಕರ್ಷಕ ರಿಟರ್ನ್ ಸಿಗಬೇಕಾದರೆ “ಕಾಯುವಿಕೆಗಿಂತ ಅನ್ಯ ತಪವು ಇಲ್ಲ’ ಎಂಬ ತತ್ವವನ್ನು ಅನುಸರಿಸಬೇಕಾಗುತ್ತದೆ. ಸಾಮಾನ್ಯವಾಗಿ ಮುಂಚೂಣಿ ಶೇರುಗಳು ಭರವಸೆಯ ಶೇರುಗಳಾಗಿರುತ್ತವೆ. ಇವನ್ನು ಒಂದು ವರ್ಷ ಕೈಯಲ್ಲಿ ಇರಿಸಿಕೊಂಡರೆ ಶೇ.13, ಮೂರು ವರ್ಷ ಇರಿಸಿಕೊಂಡರೆ ಶೇ.8 ಮತ್ತು ಐದು ವರ್ಷ ಇರಿಸಿಕೊಂಡರೆ ಶೇ.12.5ರ ರಿಟರ್ನ್ ಸಿಗುವ ಸಾಧ್ಯತೆ ಇರುತ್ತದೆ. ಆ ನಡುವೆ ಡಿವಿಡೆಂಡ್ (ಲಾಭಾಂಶ)ವೂ ಕೈಗೆ ಬರುತ್ತದೆ. ಬೋನಸ್, ರೈಟ್ಸ್, ಪ್ರಿಫರೆನ್ಶಿಯಲ್ ಇತ್ಯಾದಿ ಇಶ್ಯೂಗಳಿದ್ದರೆ ಅವುಗಳ ಮೂಲಕವೂ ಬಂಪರ್ ಲಾಭ ಬರುವ ಸಾಧ್ಯತೆ ಇರುತ್ತದೆ.
ಹಾಗಾಗಿ ಲಿಕ್ವಿಡಿಟಿ (ನಗದೀಕರಿಸುವ ಸೌಕರ್ಯ) ಯಾವತ್ತೂ ಇರುತ್ತದೆ. ಶೇರು ಹೂಡಿಕೆಯ ಮೇಲಿನ ಇಳುವರಿ ಮಾರುಕಟ್ಟೆ ಆಧಾರಿತವಾಗಿರುವುದರಿಂದ ರಿಸ್ಕ್ ಜಾಸ್ತಿ ಇರುತ್ತದೆ. ಶೇರು ವಹಿವಾಟಿಗೆ ಸಂಬಂಧಿಸಿ 15% STCG ಅಂದರೆ ಶಾಟ್ ಟರ್ಮ್ ಕ್ಯಾಪಿಟಲ್ ಗೇನ್ಸ್ , 10% LTCG ಅಂದರೆ ಲಾಂಗ್ ಟರ್ಮ್ (ಒಂದು ವರ್ಷ) ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಇರುತ್ತದೆ. ಆದರೆ ಒಂದು ಲಕ್ಷ ರೂ. ವರೆಗಿನ ಲಾಭಕ್ಕೆ ತೆರಿಗೆ ವಿನಾಯಿತಿ ಇದೆ !
ನೇರ ಮಾರುಕಟ್ಟೆಯಲ್ಲಿ ನಾವು ಯಾವುದೇ ಒಂದು ನಿರ್ದಿಷ್ಟ ದಿನ ಖರೀದಿಸಿದ ಶೇರುಗಳನ್ನು ಅದೇ ದಿನ ಮಾರಬಹುದು. ಆದರೆ ಸೆಬಿ ನಿಯಮದ ಪ್ರಕಾರ ಇದು ಸಟ್ಟಾ ವ್ಯವಹಾರ ಎಂದಾಗುತ್ತದೆ. ಎಂದರೆ ಸ್ಪೆಕ್ಯುಲೇಟಿವ್ ಟ್ರೇಡಿಂಗ್ ಎಂದರ್ಥ. ಆದುದರಿಂದ ಹೀಗೆ ಅದೇ ದಿನ ಖರೀದಿಸಿದ ಶೇರನ್ನು ಅದೇ ದಿನ ಮಾರಿದರೆ ಶೇ.30ರ ತೆರಿಗೆ ಹೊರೆ ಬರುತ್ತದೆ.
ಶೇರುಗಳನ್ನು ಕನಿಷ್ಠ ಒಂದು ವರ್ಷವಾದರೂ ಹೂಡಿಕೆದಾರ ತನ್ನ ಕೈಯಲ್ಲಿ ಇರಿಸಿಕೊಳ್ಬಬೇಕು. ಮೂರು ಅಥವಾ ಐದು ವರ್ಷ ಕಾಲ ಶೇರನ್ನು ಕೈಯಲ್ಲಿ ಉಳಿಸಿಕೊಂಡರೆ ದಕ್ಕಬಹುದಾದ ಲಾಭ (ರಿಟರ್ನ್) ಗಮನಾರ್ಹ ಪ್ರಮಾಣದ್ದಾಗಿರುತ್ತದೆ ಎಂಬುದನ್ನು ಹೂಡಿಕೆದಾರರು ಸದಾ ಮನಸ್ಸಿನಲ್ಲಿ ಇರಿಸಿಕೊಂಡರೆ ಅಸಲೂ ಭದ್ರ, ಲಾಭವೂ ಭದ್ರ ಎನ್ನಬಹುದು !