ಕಂಪಲ (ಉಗಾಂಡ): ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಪಾಕಿಸ್ತಾನ ಕ್ರಿಕೆಟಿಗರು ಉಗಾಂಡದಲ್ಲಿ ಟಿ20 ಕ್ರಿಕೆಟ್ ಆಡಲು ಹೋಗಿ ಈಗ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಕೂಟದ ಪ್ರಾಯೋಜಕ ಹಿಂದೆ ಸರಿದಿದ್ದಾರೆಂದು ಸಂಘಟಕರು ಘೋಷಿಸಿದ್ದರಿಂದ ಆಡಲು ಹೋದ ಟಿ20 ಕೂಟವೇ ರದ್ದುಗೊಂಡಿದೆ. ಕಡೆಗೆ ಸಂಘಟಕರು ಹಣ ಕೊಡಲಿಲ್ಲವೆಂದು ಪ್ರವಾಸ ವ್ಯವಸ್ಥಾ ಸಂಸ್ಥೆ ವಿಮಾನ ಟಿಕೆಟನ್ನೇ ರದ್ದುಗೊಳಿಸಿದೆ. ಇದರಿಂದಾಗಿ ಆಟಗಾರರಿಗೆ ನಿರಾಕ್ಷೇಪಣಾ ಪತ್ರ ನೀಡಿ ಆಡಲು ಕಳುಹಿಸಿಕೊಟ್ಟಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಾರೀ ಮುಖಭಂಗಕ್ಕೆ ಒಳಗಾಗಿದೆ.
ಪರದಾಡಿದ ಪಾಕ್‌ನ ತಾರೆಯರು:
ಸಯೀದ್ ಅಜ್ಮಲ್, ಯಾಸಿರ್ ಹಮೀದ್, ಇಮ್ರಾನ್ ಫರತ್ ಸೇರಿದಂತೆ ಪಾಕ್‌ನ ತಾರಾ ಆಟಗಾರರು ಕೂಟಕ್ಕೆ ತೆರಳಿದ್ದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಆಟಗಾರರು ಪ್ರವಾಸಕ್ಕೆ ಹೊರಡುವ ಮೊದಲೇ ಉಗಾಂಡ ಕ್ರಿಕೆಟ್ ಸಂಸ್ಥೆ ಜತೆಗೆ ಒಪ್ಪಂದ ನಡೆಸಿತ್ತು. ಈ ಪ್ರಕಾರವಾಗಿ ಒಪ್ಪಂದದ ಮೊತ್ತವಾಗಿ ಉಗಾಂಡ ಕ್ರಿಕೆಟ್ ಸಂಸ್ಥೆ ಪಾಕಿಸ್ತಾನ ಆಟಗಾರರಿಗೆ ಶೇ.50ರಷ್ಟು ಹಣ ನೀಡಬೇಕಿತ್ತು. ಒಪ್ಪಂದದ ಪ್ರಕಾರ ಪಾಕ್ ಆಟಗಾರರು ಉಗಾಂಡದ ಕಂಪಲಕ್ಕೆ ತಲುಪಿದರು. ಈ ನಡುವೆ ಪ್ರಾಯೋಜಕರು ದಿಢೀರ್ ಕೈಕೊಟ್ಟಿದ್ದಾರೆ. ಸುಮ್ಮನೆ 2 ದಿನ ವ್ಯರ್ಥ
ಮಾಡಿದ ನಂತರ ದೇಶಕ್ಕೆ ಹಿಂತಿರುಗಲು ಹೊರಟರೆ ಅಲ್ಲೂ ಎಡವಟ್ಟಾಗಿದೆ.
ವಿಮಾನದ ಟಿಕೆಟ್ ಬುಕ್ ಮಾಡಿದ್ದ ಪ್ರವಾಸಿ ಯೋಜನಾ ಸಂಸ್ಥೆ ಹಣ ಪಾವತಿ ಮಾಡಿಲ್ಲವೆಂದು ಟಿಕೆಟನ್ನು ಬ್ಲಾಕ್ ಮಾಡಿದೆ. ಮರಳಿ ಹೋಟೆಲ್‌ಗೆ ತೆರಳುವ ದುಸ್ಥಿತಿ ಎದುರಾಗಿದೆ. ಈಗ ಉಗಾಂಡಾದಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿ ಆಟಗಾರರನ್ನು ಪಾಕಿಸ್ತಾನಕ್ಕೆ ತಲುಪುವ ಹೊಣೆ ಹೊತ್ತುಕೊಂಡಿದೆ.