Advertisement

ಟಾಪ್ ಗೇರ್ ರಾಜಕುಮಾರ

06:00 AM Dec 04, 2018 | |

ತರುಣ ಕುಳಿತ ಬೈಕ್‌ನಿಂದ ಈ ಸದ್ದು ಕೇಳುತ್ತಿದೆ… ಅಷ್ಟಕ್ಕೂ ಆತನಾರು? ತಲೆಗೆ ಹೆಲ್ಮೆಟ್‌ ಇಲ್ಲ. ತುಟಿ ಮೇಲೆ ಮೀಸೆ ಚಿಗುರಿಲ್ಲ. ಧ್ವನಿಯಲ್ಲಿ ಗಡಸು ಒಡೆದಿಲ್ಲ. ವಯಸ್ಸು ಹದಿನೆಂಟಾಗಿಲ್ಲ. ಡ್ರೈವಿಂಗ್‌ ಲೈಸೆನ್ಸ್‌ ಮಾಡಿಸಿಕೊಂಡವರೇ ಅಲ್ಲ. ಕಡೇಪಕ್ಷ ಇವರ ಈ ಅಪ್ರಾಪ್ತ ವಯಸ್ಸಿಗೆ ವೋಟರ್‌ ಐಡಿ ಕಾರ್ಡೂ ದಕ್ಕಿರುವುದಿಲ್ಲ. ವೇಗದ ರೈಡಿಂಗ್‌, ವ್ಹೀಲಿಂಗ್‌ನ ಈ ಕ್ರೇಜ್‌ನ ಉದ್ದೇಶವಾದರೂ ಏನು?

Advertisement

ಒಂದಲ್ಲಾ ಒಂದು ಚಿತ್ರದಲ್ಲಿ ಈ ದೃಶ್ಯ ಇದ್ದೇ ಇರುತ್ತೆ. ಹೀರೋ ಮತ್ತು ವಿಲನ್‌ ನಡುವೆ ಬೈಕ್‌ ರೇಸ್‌. ತುಂಡು ಲಂಗ ಧರಿಸಿದ ಹೀರೋಯಿನ್‌, ಮುಖಕ್ಕೆ ಮೇಕಪ್‌ ಮೆತ್ತಿಕೊಂಡು, ತುಟಿಗೆ ಲಿಪ್‌ಸ್ಟಿಕ್‌ ಒತ್ತಿಕೊಂಡು, ಚಪ್ಪಾಳೆ ತಟ್ಟುತ್ತಾ ನಿಂತಿರುತ್ತಾಳೆ. ಅವಳ ಹೃದಯ ಗೆಲ್ಲಲಿಕ್ಕಾಗಿ ಇವರಿಬ್ಬರ ನಡುವೆ ಪೈಪೋಟಿ ಎದ್ದಿದೆ. ಮೊದಲು ರೇಸು, ನಂತರ ರೋಸು. ಬಾವುಟ ಇನ್ನೇನು ಕೆಳಗಿಳಿದು, ಸ್ಟಾರ್ಟರ್‌ ಶಿಳ್ಳೆ ಊದಬೇಕು, ಆ ಎಂಟತ್ತು ಸೆಕೆಂಡುಗಳಿಗೂ ಮೊದಲು, ಇಬ್ಬರೂ ಪರಸ್ಪರ ಮುಖ ನೋಡಿಕೊಂಡು, ಕಣ್ಣಲ್ಲೇ
ದುರುಗುಟ್ಟಿಕೊಂಡು, ಬೈಕಿನ ಸ್ವರವನ್ನು ಎತ್ತರಿಸುತ್ತಿರುತ್ತಾರೆ.

ಸ್ಟಾರ್ಟರ್‌ ಪೀಪಿ ಹಿಡಿದು, ಶಿಳ್ಳೆ ಊದುತ್ತಿದ್ದಂತೆ ಹಿಂಬಾಲಕರ ಕೂಗು ಮುಗಿಲು ಮುಟ್ಟುತ್ತೆ. ಹೀರೋಯಿನ್‌ ಅಂತೂ ತುದಿಗಾಲಿನಲ್ಲಿ ನಿಂತು,  ಹುರಿದುಂಬಿಸುತ್ತಿರುತ್ತಾಳೆ. ಇಂಥ ಚಿತ್ರ ಓಡುತ್ತೋ, ಬಿಡುತ್ತೋ, ನಾ ಕಾಣೆ. ಆ ಬೈಕ್‌ ರೇಸ್‌ನಿಂದ ಹೀರೋಯಿನ್‌ ಒಲೀತಾಳ್ಳೋ, ವಿಲನ್‌ ಪಾಲಾಗ್ತಾಳ್ಳೋ, ಗೊತ್ತಿಲ್ಲ. ಅವರು ಹೊಮ್ಮಿಸುವ ಬೈಕಿನ ಆ್ಯಕ್ಸಿಲೇಟರ್‌ ಸದ್ದಂತೂ, ಅದನ್ನು ನೋಡುತ್ತಾ ಕುಳಿತ ಯುವಕರ ಪ್ರಾಯದ ಹುಚ್ಚಾಟಕ್ಕೆ ಇನ್ನಷ್ಟು ಕಿಕ್‌ ಏರಿಸುತ್ತಿರುತ್ತೆ. ಟಿವಿಯೊಳಗೆ ಹೀರೋ ಕುಳಿತಿಲ್ಲ, ಬದಲಾಗಿ ತಾನೇ ಅಲ್ಲಿದ್ದೇನೆ ಎಂದು ಕಲ್ಪಿಸಿಕೊಳ್ಳುತ್ತಾನೆ ಈತ. ಯಾವಾಗ ಆ ಸಿನಿಮಾ ಮುಗಿದು, ಟಿವಿ ಆರುತ್ತದೋ, ಆಗ ಅಪ್ಪ- ಅಮ್ಮನಿಗೆ ಬೈಕ್‌ 
ಬೇಕೆನ್ನುವ ಬೇಡಿಕೆಯನ್ನು ಮುಂದಿಡುತ್ತಾನೆ. ಅವರು ಕೊಡಿಸಿದರೂ, ಕೊಡಿಸದಿದ್ದರೂ, ತಿಂಗಳಾಚೆಗೆ ಒಂದಲ್ಲಾ ಒಂದು ದಿನ,
ಅಂಥದ್ದೇ ಸೆಕೆಂಡ್‌ ಹ್ಯಾಂಡ್‌ ಬೈಕನ್ನೇರಿ ಬರುತ್ತಾನೆ ಮಗ. ಕಡೇಪಕ್ಷ ಹೀರೋಗೆ ಆ ಚಿತ್ರದಲ್ಲಿ ಟ್ಯಾಲೆಂಟ್‌ ಇಟ್ಟಿರುತ್ತಾನೆ,
ನಿರ್ದೇಶಕ. ಈತನಿಗೆ ಅದು ಇನ್ನೂ ಸಿದ್ಧಿಸಿರುವುದಿಲ್ಲ. ಜೀವನ ಅಂದ್ರೆ ಏನು ಅಂತ ಹೀರೋನ ಕಷ್ಟಗಳು ನಾನಾ ದೃಶ್ಯದಲ್ಲಿ
ಹೇಳಿದರೂ, ಈತನ ಆಳಕ್ಕೆ ಅವು ಇಳಿದಿರುವುದಿಲ್ಲ. ಮಗನ ಕಿವಿಯಲ್ಲಿ ಒಂದೇ ಸದ್ದು, ವೂ ವೂ… ಬೈಕ್‌ ಏರಿ ಕಾಲೇಜಿಗೆ ಹೊರಟರೆ, ಹಿಂದಿನ ಸೀಟಿನಲ್ಲಿ ಆಟೋಮ್ಯಾಟಿಕ್‌ ಆಗಿ ಹುಡುಗಿ ಕೂರುತ್ತಾಳೆ ಅನ್ನೋ ಹುಚ್ಚೊಂದು  ಇಂಥ ಹುಡುಗರಿಗೆ ಕಿಚ್ಚು ಹತ್ತಿಸುತ್ತಿರುತ್ತೆ. ಆದರೆ, ಇಲ್ಲಿ ವಿಲನ್‌ ಯಾರೂ ಇರುವುದಿಲ್ಲ. ಇದ್ದರೂ, ಅದು ಬೈಕ್‌ ಕೊಡಿಸದ ಅಪ್ಪ- ಮ್ಮಂದಿರೇ!

ಜನನಿಬಿಡ ರಸ್ತೆಗಳಲ್ಲಿ ಬೈಕ್‌ ಅನ್ನು ಭರ್ರನೆ ಓಡಿಸುವಾಗಲೂ ಆ ಹೀರೋನೇ ತಲೆಯಲ್ಲಿ ಕುಳಿತಿರುತ್ತಾನೆ. ಸುಖಾಸುಮ್ಮನೆ ಬೆರಳುಗಳು ಹಾರನ್ನಿನ ಮೇಲೆ ಆಡುತ್ತಿರುತ್ತವೆ. ಅದನ್ನು ಕೇಳಿಸಿಕೊಳ್ಳುವ ಯಾವುದೇ ಕಿವಿಗಳೂ ಢಮಾರೇ! ಅವನ ಆ ವೇಗ, ಅಲ್ಲಿನ
ವಾಹನ ಸಂಚಾರರ, ಪಾದಚಾರಿಗಳ ಎದೆಯಲ್ಲಿ ಎಷ್ಟು ಆತಂಕ ಹುಟ್ಟಿಸುತ್ತದೆಂಬುದನ್ನು ಆತ ಯಾವತ್ತೂ ಯೋಚಿಸುವುದೇ
ಇಲ್ಲ. “ಬ್ರೇಕ್‌ ಇಲ್ಲದ ಪಯಣವೇ ಯೌವನ. ಓಡುವುದೇ ಅದರ ಹುಮ್ಮಸ್ಸು’ ಎನ್ನುವುದು ಪ್ರಾಯದ ಒಂದು ತತ್ವ. ಅದಕ್ಕೆ
ಪೂರಕವಾಗಿ ಯೌವನ ಏರಿದಂತೆ ಬೈಕ್‌ನ ಹುಚ್ಚಾ ಯುವಕರಲ್ಲಿ ಏರುತ್ತಿರುತ್ತೆ. ಈಗಂತೂ ಜಾವಾ ಬೈಕ್‌ನ
ಮರುಎಂಟ್ರಿ ಮಾರ್ಕೆಟ್‌ನಲ್ಲಿ ರಂಗೇರುತ್ತಿದೆ. ಇದು ಯುವಕರ ಬೈಕ್‌ನ ಆಸೆಗೆ ಕಿಕ್‌ ಏರಿಸುವಂತಿದೆ. ಪಾಲಕರನ್ನು
ಕಾಡಿಯೋ, ಬೇಡಿಯೋ, ಒಟ್ಟಿನಲ್ಲಿ ಕಾಲೇಜು ತಲುಪಲೊಂದು ಬೈಕು ಬೇಕು. ಅದೇ ಅವರಿಗೆ ರಾಜರಥ. 

ಇವರು ಓಡಿಸಿದ್ದೇ ಹಾದಿ…
ಪಾದಚಾರಿಗಳಿಗೆ ಮಾಡಿದ ಫ‌ುಟ್‌ಪಾತ್‌ಗಳನ್ನೂ ಇವರು ಬಿಡೋಲ್ಲ. ಅದರ ಮೇಲೂ ಬೈಕ್‌ ಹತ್ತಿಸಿ, ಎದೆ ನಡುಗಿಸುತ್ತಾರೆ. ಅದರಲ್ಲೂ ಟ್ರಾಫಿಕ್‌ ಸಿಗ್ನಲ್‌ ಇದ್ದರಂತೂ, ಕತೆಗೆ ಬೇರೆಯದ್ದೇ ಟ್ವಿಸ್ಟ್‌. ಆಗ, ಇವರು ಓಡಿಸಿದ್ದೇ ಹಾದಿ. ದೊಡ್ಡ ಗಾಡಿಗಳು
ಅಂತರ ಕಾಪಾಡಿಕೊಳ್ಳಲು ಜಾಗ ಬಿಟ್ಟಿದ್ದರೆ, ಈ ರೈಡರ್‌ಗಳು ನುಸುಳುಕೋರರಂತೆ, ಸಂದಿಗೊಂದಿಗಳಲ್ಲಿ ಜಾಗ ಮಾಡಿಕೊಂಡು,
ಸಿಗ್ನಲ್‌ನ ಮುಂದೆ ಬರುತ್ತಾರೆ. “ಕಾಯುವಿಕೆಗಿಂತ ತಪವು ಬೇರಿಲ್ಲ’ ಎನ್ನುವ ಕವಿವಾಣಿಗೆ ಇವರು ಯಾವತ್ತೂ ತದ್ವಿರುದ್ಧವೇ. ಒಂದೆರಡು ಸೆಕೆಂಡ್‌ ಅತ್ತ ಇತ್ತ ನೋಡ್ತಾರೆ. ಅಲ್ಲಿ ಪೊಲೀಸರು ಇರಲಿಲ್ಲ ಅಂತಾದರೆ, ಯಾವ ದಿಕ್ಕಿನಿಂದಾದರೂ ಮಿಂಚಿನಂತೆ ಮರೆ
ಆಗ್ತಾರೆ. ಸೀರೆಯುಟ್ಟ ಕಾರಣದಿಂದಲೋ ಅಥವಾ ಎರಡೂ ಕಡೆ ಕಾಲು ಚಾಚಿ ಕೂರದ ಮಹಿಳೆಯರು, ಒಂದೇ ಕಡೆ ಅಂದರೆ ಬೈಕ್‌ನ ಎಡ ಭಾಗದಲ್ಲಿ ಕಾಲು ಚಾಚಿಕೊಂಡಾಗ, ಇವರ ಬೈಕ್‌, ರಭಸದಲ್ಲಿ ಅವರ ಕಾಲನ್ನು ಸ್ಪರ್ಶಿಸಿ, ಮಾಯ ಆಗುತ್ತೆ.  ಅವರು “ಅಯ್ಯೋ’ ಎಂದು ಚೀರಿದರೂ, ರೈಡರ್‌ಗೆ ಅದು ಕೇಳಿಸದು. ಆಟೋದಿಂದ ಇಳಿಯುವಾಗಲೂ, ಇವರು ಯಮನ ಸ್ವರೂಪದಲ್ಲಿ ಎದುರು ಬರುತ್ತಾರೆ. ಸಾಮಾನ್ಯ ಜನ ಎಡಭಾಗದಲ್ಲಿ ಸಂಚರಿಸುವಾಗಲೂ ಬಂದು ಡಿಕ್ಕಿ ಹೊಡೆದಾಗಲೂ, ಇವರು ತಿರುಗಿ ನೋಡುವುದಿಲ್ಲ.

Advertisement

ರಾಂಗ್‌ಸೈಡ್‌ ಪ್ರಿಯರು!
ಬೈಕ್‌ ಓಡಿಸುವಾಗ ಇವರದ್ದೇ ಒಂದು ಸಂವಿಧಾನ. ಆಗ ಕಾಣಿಸುವುದು ಬರೀ ರಾಂಗ್‌ ಸೈಡ್‌ ಮಾತ್ರವೇ. “ಟ್ರಾμಕ್‌ ರೂಲ್ಸ್‌ ಬ್ರೇಕ್‌ ಮಾಡುವುದೂ ಒಂದು ಕ್ರೇಜ್‌, ಅದೇ ಫ್ಯಾಶನ್ನು’ ಎನ್ನುವ ಮಹಾನುಭಾವರು. “ಅಪಘಾತವೇ ಅವಸರಕ್ಕೆ ಕಾರಣ’ ಎನ್ನುವ ಫ‌ಲಕವನ್ನು ಇವರು ಯಾವತ್ತೂ ಕಣ್ಣೆತ್ತಿ ನೋಡುವುದಿಲ್ಲ. ಕಡೇಪಕ್ಷ ಇವರು ಡಿಕ್ಕಿ ಹೊಡೆದವರನ್ನು, ಕೈಹಿಡಿದು ಮೇಲೆತ್ತುತ್ತಾರಾ? ಆ ಮಾನವೀಯ ಗುಣವನ್ನೂ ಇವರು ರೂಢಿಸಿಕೊಂಡಿರುವುದಿಲ್ಲ. ಮುಂದೆ ಎಲ್ಲೋ ಹೋಗಿ ನಿಂತಾಗ, ಗೆಳೆಯರೊಟ್ಟಿಗೆ, ಆ ಪ್ರಸಂಗವನ್ನೂ ತಮಾಷೆಯಾಗಿ ವರ್ಣಿಸಿ, ಮಜಾ ಅನುಭವಿಸುತ್ತಾರೆ. 

ಯಾರಿವನು… ಶೂರನಲ್ಲ?
ಅಷ್ಟಕ್ಕೂ ಯಾರಿವರು? ತುಟಿ ಮೇಲೆ ಮೀಸೆ ಚಿಗುರಿಲ್ಲ. ಧ್ವನಿಯಲ್ಲಿ ಗಡಸು ಒಡೆದಿಲ್ಲ. ವಯಸ್ಸು ಹದಿನೆಂಟಾಗಿಲ್ಲ. ಡ್ರೈವಿಂಗ್‌ ಲೈಸೆನ್ಸ್‌
ಮಾಡಿಸಿಕೊಂಡವರೇ ಅಲ್ಲ. ಕಡೇಪಕ್ಷ ಇವರ ಈ ಅಪ್ರಾಪ್ತ ವಯಸ್ಸಿಗೆ ವೋಟರ್‌ ಐಡಿ ಕಾರ್ಡೂ ದಕ್ಕಿರುವುದಿಲ್ಲ. “ಯಾರಿವನು, ಈ
ಮನ್ಮಥನು…?’ ಎಂದು ದಿಢೀರನೆ ಪ್ರತ್ಯಕ್ಷವಾಗಿ ಬಂದು ಕಾಪಾಡಲು, ಇವರು ಪ್ರೇಮಲೋಕದ ರವಿಚಂದ್ರನ್ನೂ ಆಗಿರುವುದಿಲ್ಲ. ಇವರು ಓಡಿಸುವ ವೇಗಕ್ಕೆ ಒಂದು ಅರ್ಥವೇ ಇರುವುದಿಲ್ಲ. ರೊಂಯ್ಯನೆ ಆ್ಯಂಬುಲೆನ್ಸ್‌ನಂತೆ ಹೋಗುತ್ತಾರೆಂದರೆ, ಯಾರಧ್ದೋ ಪ್ರಾಣ
ಉಳಿಸೋದಿಕ್ಕೂ ಅಲ್ಲ. ತಡವಾಗಿ ಎದ್ದಿರುತ್ತಾರೆ. ತರಗತಿಗೆ ಲೇಟ್‌ ಆಗಿರುತ್ತೆ. ಇನ್ನಾವುದೋ ಪಾರ್ಟಿಗೆ ಹೋಗ್ಬೇಕಿರುತ್ತೆ. ಅಲ್ಲೆಲ್ಲೋ ಹುಡುಗಿಗೆ, ಕ್ಲಾಸ್‌ ಬಿಡೋ ಟೈಮ್‌ ಆಗಿರುತ್ತೆ. ಮ್ಯಾಟಿನಿ ಶೋ ಅದಾಗಲೇ ಶುರುವಾಗ್ಬಿಟ್ಟಿರುತ್ತೆ…  ಇವೇ ಸಿಲ್ಲಿ ಕಾರಣಗಳಷ್ಟೇ. ನಾಲ್ಕು ಜನಕ್ಕೆ ಉಪಯೋಗ ಆಗುವ ಸನ್ನಿವೇಶಗಳಲ್ಲಿ ಇವರು ಯಾವತ್ತೂ ಹೀರೋ ಆಗುವುದೇ ಇಲ್ಲ.

ಹೀರೋ ಅಗಲು ರಸ್ತೆಯೇ ಮಾರ್ಗವಲ್ಲ…
ಒಂದು ವಿಚಾರ ಗೊತ್ತಿರಲಿ ಮಕ್ಕಳೇ… ಬೈಕ್‌ ಅನ್ನು ರಾಕೆಟ್‌ನಂತೆ ಓಡಿಸಿಯೋ, ವ್ಹೀಲಿಂಗ್‌ ಮಾಡಿಯೋ ತಪ್ಪಿ ಬಿದ್ದರೆ, ಯಾವ ಸಿನಿಮಾ ಹೀರೋ ಬಂದೂ ನಿಮ್ಮನ್ನು ಕಾಪಾಡುವುದಿಲ್ಲ. ನಿಜ ಜೀವನದಲ್ಲಿ ಎಲ್ಲರೂ ಹೀರೋಗಳು ಎನ್ನುವ ಸತ್ಯ ನಿಮಗೆ ತಿಳಿದಿರಲಿ. ಅದನ್ನು ಸಾಧಿಸಲು ಪ್ರೀತಿ, ಮಾನವೀಯತೆ, ಸಹಬಾಳ್ವೆಯಂಥ ಸುಂದರ ಮಾರ್ಗಗಳಿವೆ. ರಸ್ತೆ ಮೇಲೆ ರೊಂಯ್ಯನೆ ಸಾಗಿದರಷ್ಟೇ
ಹೀರೋ ಎನ್ನುವ ಭಾವ ಬೇಡ. ನಿಮ್ಮ ಪಯಣ ಸುಖಮಯವಾಗಿರಲಿ.

ಮಕ್ಕಳಿಗೆ ಬೈಕ್‌ ಕೊಡುವ ಮುನ್ನ…
“18 ವರ್ಷ ತುಂಬದೇ ಬೈಕ್‌ ರೈಡಿಂಗ್‌ ಮಾಡುವುದು ತಪ್ಪು’ ಎಂಬ ಸಂಗತಿ ನಿಮಗೆ ಮೊದಲು ತಿಳಿದಿರಲಿ. 
“ದುಡಿಯೋದೇ ಮಕ್ಕಳಿಗಾಗಿ, ಅವರಿಗೆ ಬೈಕ್‌ ಕೊಡಿಸದೇ ಮತ್ಯಾರಿಗೆಕೊಡಿಸಲಿ?’ ಎಂಬ ಭಾವ ಇಟ್ಟುಕೊಳ್ಳಬೇಡಿ.
ಬದುಕು ಅತ್ಯಮೂಲ್ಯ. ಅದಕ್ಕೆ ಬೆಲೆ ಕಟ್ಟಲಾಗದು. ಹುಚ್ಚು ಸಾಹಸ ಬೇಡ ಎನ್ನುವ ಸಂಗತಿಯನ್ನು ಮಕ್ಕಳಿಗೆ ಮನವರಿಕೆ ಮಾಡುತ್ತಿರಿ.
ಹೀರೋಗಳ ಸ್ಟಂಟು ಸಿನಿಮಾಕ್ಕಷ್ಟೇ ಚೆಂದ. ನಿಜ ಜೀವನಕ್ಕೆ ಅಪಾಯ ಎಂಬುದನ್ನು ತಿಳಿಹೇಳಿ.
ಸ್ವಂತ ಕಾಲಿನ ಮೇಲೆ ನಿಲ್ಲುವ ತನಕ ಬೈಕ್‌ ಕೊಡಿಸುವುದಿಲ್ಲ ಎಂಬ ನಿರ್ಧಾರಕ್ಕೆ ನೀವೇ ಬಂದುಬಿಡಿ.
ವೇಗದ ರೈಡಿಂಗ್‌, ವ್ಹೀಲಿಂಗ್‌ ಅಪಾಯದ ಕುರಿತ ಸುದ್ದಿಗಳನ್ನು ಸೂಕ್ಷ್ಮವಾಗಿ ತಿಳಿಸುತ್ತಿರಿ.
ಮನೆಯಲ್ಲಿ ಬೈಕ್‌ ಇದ್ದರೂ, ಅಗತ್ಯದ ಸಂದರ್ಭಗಳಲ್ಲಷ್ಟೇ ಬಳಸಲು ನೀಡಿ.

ಮಾಲಾ ಮ. ಅಕ್ಕಿಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next