ನವದೆಹಲಿ: ಟೆಲಿಕಾಂ ಕಂಪನಿಗಳು ಬಾಕಿ ಉಳಿಸಿಕೊಂಡಿರುವ 1.6 ಲಕ್ಷ ಕೋಟಿ ರೂಪಾಯಿ ಹೊಂದಾಣಿಕೆಯ ಒಟ್ಟು ವರಮಾನ(ಎಜಿಆರ್ ) ಹಣವನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಲು ಸುಪ್ರೀಂಕೋರ್ಟ್ ಮಂಗಳವಾರ (ಸೆಪ್ಟೆಂಬರ್ 01, 2020) ಹತ್ತು ವರ್ಷಗಳ ಕಾಲಾವಕಾಶದ ಆದೇಶ ನೀಡಿದೆ.
ಸುಪ್ರೀಂಕೋರ್ಟ್ ನ ಜಸ್ಟೀಸ್ ಅರುಣ್ ಮಿಶ್ರಾ, ಜಸ್ಟೀಸ್ ಎಸ್.ಅಬ್ದುಲ್ ನಜೀರ್ ಮತ್ತು ಜಸ್ಟೀಸ್ ಎಂಆರ್ ಶಾ ನೇತೃತ್ವದ ತ್ರಿಸದಸ್ಯ ಪೀಠ, ದೂರಸಂಪರ್ಕ ಕಂಪನಿಗಳು ಬಾಕಿ ಉಳಿಸಿಕೊಂಡಿರುವ ಮೊತ್ತದ ಶೇ.10ರಷ್ಟು ಹಣವನ್ನು 2021ರ ಮಾರ್ಚ್ 31ರೊಳಗೆ ಪಾವತಿಸುವಂತೆ ನಿರ್ದೇಶನ ನೀಡಿದೆ.
ಟೆಲಿಕಾಂ ಕಂಪನಿಯ ಆಡಳಿತ ನಿರ್ದೇಶಕರು ಮತ್ತು ಅಧ್ಯಕ್ಷರು ಹಣ ಪಾವತಿಯು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಅಫಿಡವಿತ್ ಕಡ್ಡಾಯವಾಗಿರಬೇಕು ಎಂದು ಪೀಠ ತಿಳಿಸಿದೆ. ಒಂದು ವೇಳೆ ಟೆಲಿಕಾಂ ಕಂಪನಿಗಳು ಎಜಿಆರ್ ಬಾಕಿ ಪಾವತಿಸುವಲ್ಲಿ ವಿಫಲವಾದರೆ ಅದು ಅಧಿಕ ಬಡ್ಡಿ ಜತೆಗೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.
ಎಜಿಆರ್ ಬಾಕಿ ಮೊತ್ತ 92, 000 ಕೋಟಿ ರೂಪಾಯಿಯನ್ನು ಕೂಡಲೇ ಪಾವತಿಸಬೇಕೆಂದು ವಿವಿಧ ಟೆಲಿಕಾಂ ಕಂಪನಿಗಳಿಗೆ ಕಳೆದ ವರ್ಷ ಸುಪ್ರೀಂಕೋರ್ಟ್ ನೀಡಿದ ಆದೇಶದಲ್ಲಿ ತಿಳಿಸಿತ್ತು. ಆದರೆ ಇಷ್ಟೊಂದು ದೊಡ್ಡ ಮೊತ್ತ ಕಡಿಮೆ ಅವಧಿಯಲ್ಲಿ ಪಾವತಿಸಲು ಅಸಾಧ್ಯ ಇದಕ್ಕಾಗಿ ಕಂತು ಪಾವತಿ ಅವಧಿಯನ್ನು 20 ವರ್ಷಕ್ಕೆ ನಿಗದಿಪಡಿಸಬೇಕೆಂದು ಕೋರಿ ಜನವರಿಯಲ್ಲಿ ಟೆಲಿಕಾಂ ಕಂಪನಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು.
ವೋಡ್ ಫೋನ್ ಐಡಿಯಾ ಸುಮಾರು 50,000 ಕೋಟಿ ರೂಪಾಯಿ ಬಾಕಿ ಪಾವತಿಸಲು ಇದ್ದು, ಭಾರ್ತಿ ಏರ್ ಟೆಲ್ 26,000 ಸಾವಿರ ಕೋಟಿ ಬಾಕಿ ಇತ್ತು..ಈ ಎರಡು ಟೆಲಿಕಾಂ ಕಂಪನಿಗಳು 15 ವರ್ಷ ಕಾಲಾವಕಾಶ ಕೇಳಿದ್ದವು. ಆದರೆ ಸುಪ್ರೀಂಕೋರ್ಟ್ ಟೆಲಿಕಾಂ ಕಂಪನಿಗಳ ವಾದವನ್ನು ಪೂರ್ಣವಾಗಿ ಮನ್ನಿಸದೇ ಹತ್ತು ವರ್ಷಗಳಲ್ಲಿ ಬಾಕಿ ಹಣ ಪಾವತಿಸುವಂತೆ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.