ಲಕ್ನೋ: ಇತ್ತೀಚೆಗೆ ಪೊಲೀಸರ ಕಾರ್ಯಾಚರಣೆಯಲ್ಲಿ 23 ಮಕ್ಕಳನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದ ಕೊಲೆ ಪ್ರಕರಣವೊಂದರ ಆರೋಪಿ ಸಾವನ್ನಪ್ಪಿದ್ದ. ಇದೀಗ ಆತನ ಒಂದು ವರ್ಷದ ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳುವುದಾಗಿ ಉತ್ತರಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಉತ್ತರಪ್ರದೇಶದ ಫಾರೂಖಾಬಾದ್ ನ ಗ್ರಾಮವೊಂದರಲ್ಲಿ ಈ ವ್ಯಕ್ತಿ ಮತ್ತು ಪತ್ನಿ 23 ಮಕ್ಕಳನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದ. ಪೊಲೀಸರು ಸುಮಾರು ಹತ್ತು ಗಂಟೆಗಳ ಕಾರ್ಯಾಚರಣೆ ನಡೆಸಿ ಆತನನ್ನು ಹತ್ಯೆಗೈದಿದ್ದರು. ಪತ್ನಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸ್ಥಳೀಯರು ಹೊಡೆದು, ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.
ಮಕ್ಕಳನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡು ಪೊಲೀಸರ ಗುಂಡಿಗೆ ಬಲಿಯಾಗಿದ್ದ ಆರೋಪಿಯ ಪುಟ್ಟ ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಅಲ್ಲದೇ ಅವಳು ಬೆಳೆದು ದೊಡ್ಡವಳಾದ ಮೇಲೆ ನನ್ನಂತೆ ಐಪಿಎಸ್ ಅಧಿಕಾರಿಯನ್ನಾಗಿ ಮಾಡುತ್ತೇನೆ ಎಂದು ಕಾನ್ಪುರದ ಪೊಲೀಸ್ ಮಹಾನಿರ್ದೇಶಕ ಮೋಹಿತ್ ಅಗರ್ವಾಲ್ ತಿಳಿಸಿದ್ದಾರೆ.
ಸುಭಾಶ್ ಬಾಥಮ್ ಎಂಬಾತ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಬಂದಿದ್ದ. ಈತ ತನ್ನ ಮಗಳ ಹುಟ್ಟು ಹಬ್ಬ ಆಚರಣೆಗಾಗಿ ಗ್ರಾಮಸ್ಥರು ಹಾಗೂ ಮಕ್ಕಳನ್ನು ಆಹ್ವಾನಿಸಿದ್ದ. ಅದರಂತೆ ಬಂದಿದ್ದ 23ಮಕ್ಕಳನ್ನು ಮತ್ತು ತನ್ನ ಪತ್ನಿಯನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.
ಪತ್ನಿ ಮತ್ತು ಚಿಕ್ಕಮಗುವನ್ನು ಕೂಡಾ ಗನ್ ಪಾಯಿಂಟ್ ಇಟ್ಟು ಹೆದರಿಸತೊಡಗಿದ್ದ. ಸ್ಥಳಕ್ಕೆ ಪೊಲೀಸ್ ವಾಹನ ಬಂದ ಬಳಿಕ ಸುಭಾಶ್ ಮನೆಯ ಟೆರೆಸ್ ಮೇಲಿಂದ ಗುಂಡಿನ ದಾಳಿ ಹಾಗೂ ಕಚ್ಛಾ ಬಾಂಬ್ ಎಸೆಯತೊಡಗಿದ್ದ. ಸುಮಾರು ಹತ್ತು ಗಂಟೆಗಳ ಕಾರ್ಯಾಚರಣೆಯ ಬಳಿಕ ಆತನನ್ನು ಹೊಡೆದುರುಳಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಪತ್ನಿಯೂ ಗ್ರಾಮಸ್ಥರ ಆಕ್ರೋಶಕ್ಕೆ ಸಾವನ್ನಪ್ಪಿದ್ದಳು. ಇದರಿಂದಾಗಿ ಮಗು ಅನಾಥವಾಗಬಾರದು ಎಂದು ಸುಭಾಶ್ ಮಗಳನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.