Advertisement

ನಾನಾವತಿ, ಜೆಸ್ಸಿಕಾ ಲಾಲ್‌ –ಜೇಠ್ಮಲಾನಿ ವಾದಿಸಿದ ಕೆಲವು ಪ್ರಮುಖ ಪ್ರಕರಣಗಳು

10:31 AM Sep 10, 2019 | keerthan |

ಹಿರಿಯ ವಕೀಲ, ಮಾಜಿ ಕೇಂದ್ರ ಸಚಿವ ರಾಮ್‌ ಜೇಠ್ಮಲಾನಿ ರವಿವಾರ 96ರ ಹರೆಯದಲ್ಲಿ ವಿಧಿವಶರಾಗಿದ್ದಾರೆ. 7 ದಶಕದ ವಕೀಲಿ ಜೀವನದಲ್ಲಿ ಹಲವು ಮಹತ್ವದ ಪ್ರಕರಣಗಳನ್ನು ವಾದಿಸಿ ನ್ಯಾಯಾಲಯದಲ್ಲಿ ಗೆಲುವಿನ ನಗು ಬೀರಿದ್ದರು. 18ನೇ ವರ್ಷಕ್ಕೆ ವಕೀಲಿ ವೃತ್ತಿ ಆರಂಭಿಸಿದ್ದ ರಾಮ್‌ ಬೂಲ್‌ಚಂದ್‌ ಜೇಠ್ಮಲಾನಿ ಒಂದು ಕಾಲದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ವಕೀಲರಾಗಿದ್ದರು.

Advertisement

ಇಂದಿರಾ ಗಾಂಧಿ ಪ್ರಕರಣ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಕರಣಗಳನ್ನು ವಾದಿಸಿದ್ದ ರಾಮ್‌ ಜೇಠ್ಮಲಾನಿ ಹಲವು ವಿವಾದಕ್ಕೂ ಗುರಿಯಾಗಿದ್ದರು.

ಆಡ್ವಾಣಿ ಹವಾಲ ಪ್ರಕರಣ
ಬಿಜೆಪಿ ಹಿರಿಯ ನಾಯಕ ಲಾಲ್‌ ಕೃಷ್ಣ ಆಡ್ವಾಣಿಯವರು ಹವಾಲ ಹಗರಣದ ಆರೋಪಕ್ಕೆ ಸಿಲುಕಿದಾಗ ರಾಮ್‌ ಜೇಠ್ಮಲಾನಿ ಅವರು ಆಡ್ವಾಣಿ ಪರ ವಾದಿಸಿದ್ದರು. ಅಕ್ರಮ ಹಣವನ್ನು ರಾಜಕಾರಣಿಗಳಿಂದ ಹವಾಲ ದಲ್ಲಾಳಿಗಳ ಮೂಲಕ ಸಾಗಣೆ ಆರೋಪದ ಈ ಪ್ರಕರಣವನ್ನು ರಾಮ್‌ ಜೇಠ್ಮಲಾನಿ ಅವರು ಯಶಸ್ವಿಯಾಗಿ ವಾದಿಸಿ ಗೆಲುವು ಸಾಧಿಸಿದ್ದರು. ಆದರೆ ಕೇವಲ ನನ್ನಿಂದಾಗಿ ಆಡ್ವಾಣಿ ಈ ಪ್ರಕರಣದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು ಎಂದು ಜೇಠ್ಮಲಾನಿ ಹೇಳಿಕೆ ನೀಡಿದ್ದರು.

ನಾನಾವತಿ ವರ್ಸಸ್‌ ಮಹಾರಾಷ್ಟ್ರ ಸರಕಾರ ಪ್ರಕರಣ
ಇದು 1962ರಲ್ಲಿ ದೇಶದ ಗಮನ ಸೆಳೆದಿದ್ದ ಕೊಲೆ ಪ್ರಕರಣ. ನೌಕಾ ಪಡೆಯ ಅಧಿಕಾರಿಯೋರ್ವರು ತನ್ನ ಹೆಂಡತಿಯ ಪ್ರಿಯಕರನನ್ನು ಗುಂಡು ಹಾರಿಸಿದ ಪ್ರಕರಣ. ಈ ಪ್ರಕರಣದಲ್ಲಿ ಮೊದಲು ಜೇಠ್ಮಲಾನಿ ಯಾರ ಪರ ವಹಿಸದಿದ್ದರೂ ನಂತರ ಕೊಲೆಯಾಗಿದ್ದ ಪ್ರೇಮ್‌ ಅಹುಜಾ ಪರ ವಾದ ಮಾಡಿದ್ದರು. ಸರಕಾರಿ ವಕೀಲರಾಗಿದ್ದ ಯಶ್ವಂತ್‌ ಚಂದ್ರಚೂಡ್‌ ಅವರಿಗೆ ಸಹಾಯ ಮಾಡಿದ್ದ ಜೇಠ್ಮಲಾನಿ, ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ಈ ಪ್ರಕರಣದಲ್ಲಿ ಅಧಿಕಾರಿ ನಾನಾವತಿ ಅವರೇ ದೋಷಿ ಎಂದು ನಿರೂಪಿಸಿದ್ದರು. ಈ ಪ್ರಕರಣದಿಂದ ರಾಮ್‌ ಜೇಠ್ಮಲಾನಿ ಅವರು ಸಾಕಷ್ಟು ಪ್ರಸಿದ್ದಿ ಪಡೆದಿದ್ದರು.

ತುರ್ತು ಪರಿಸ್ಥಿತಿ ವಿರುದ್ದ
1975 ಜೂನ್‌ 25ರ ರಾತ್ರಿ ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಇದನ್ನು ವಿರೋಧಿಸಿದ್ದ ಹಲವಾರು ರಾಜಕಾರಣಿಗಳು ಮತ್ತು ಪತ್ರಕರ್ತರು ಜೈಲು ಸೇರಿದ್ದರು. ಈ ಸಂವಿಧಾನ ವಿರೋಧಿ ಕ್ರಮವನ್ನು ಪ್ರಶ್ನಿಸಿ 12 ಜನ ವಕೀಲರ ಗುಂಪು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಶಾಂತಿ ಭೂಷಣ್‌ ನೇತೃತ್ವದ ಈ ತಂಡದಲ್ಲಿ ರಾಮ್‌ ಜೇಠ್ಮಲಾನಿ ಕೂಡಾ ಸದಸ್ಯರಾಗಿದ್ದರು. ಆದರೆ ಸರ್ವೋತ್ಛ ನ್ಯಾಯಾಲಯ ಕೇಂದ್ರ ಸರಕಾರದ ಪರವಾಗಿ ತೀರ್ಪು ನೀಡಿತ್ತು.

Advertisement

ಇಂದಿರಾ ಹಂತಕರ ರಕ್ಷಣೆ
ಇಂದಿರಾ ಗಾಂಧಿ ಅವರು ತನ್ನ ಅಂಗರಕ್ಷಕರಿಂದ ಹತ್ಯೆ ಪ್ರಕರಣದಲ್ಲಿ ರಾಮ್‌ ಜೇಠ್ಮಲಾನಿ ಅವರು ಆರೋಪಿಗಳಾದ ಬಲ್ಬೀರ್‌ ಸಿಂಗ್‌ ಮತ್ತು ಖೇಹರ್‌ ಸಿಂಗ್‌ ಪರವಾಗಿ ವಾದಿಸಿದ್ದರು. ಬಲ್ಬೀರ್‌ ಸಿಂಗ್‌ ಮತ್ತು ಇಬ್ಬರು ಇಂದಿರಾ ಅಂಗರಕ್ಷಕರ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಸಾಬೀತು ಪಡಿಸಿದ್ದರೂ ಖೇಹರ್‌ ಸಿಂಗ್‌ ಗೆ ಜೀವಾವಧಿ ಶಿಕ್ಷೆಯನ್ನು ತಪ್ಪಿಸಲಾಗಲಿಲ್ಲ.

ರಾಜೀವ್‌ ಗಾಂಧಿ ಹಂತಕರ ಪರ
ಇಂದಿರಾ ಹಂತಕರ ಪರ ವಾದಿಸಿ ಅಚ್ಚರಿ ಮೂಡಿಸಿದ್ದ ಜೇಠ್ಮಲಾನಿ ನಂತರ ರಾಜೀವ್‌ ಗಾಂಧಿ ಹಂತಕರ ಪರ ವಾದ ಮಂಡಿಸಿದ್ದರು. ಹಂತಕ ಆರೋಪಿ ಮುರುಗನ್‌ ಪರ ವಾದಿಸಿದ್ದ ಜೇಠ್ಮಲಾನಿ, ರಾಜೀವ್‌ ಗಾಂಧಿ ಹತ್ಯೆ ದೇಶದ ವಿರುದ್ಧ ನಡೆದ ಅಪರಾಧವಲ್ಲ ಎಂದು ಹೇಳಿಕೆ ನೀಡಿದ್ದರು.

ಅಮಿತ್‌ ಶಾ- ಸೊಹ್ರಾಬುದ್ದೀನ್‌ ಪ್ರಕರಣ
ಗುಜರಾತ್‌ ಗೃಹ ಸಚಿವರಾಗಿದ್ದ ಅಮಿತ್‌ ಶಾ ಮೇಲಿದ್ದ ಸೊಹ್ರಾಬುದ್ದೀನ್‌ ನಕಲಿ ಎನ್‌ ಕೌಂಟರ್‌ ಕೇಸ್‌ ನಲ್ಲಿ ರಾಮ್‌ ಜೇಠ್ಮಲಾನಿ ಅಮಿತ್‌ ಶಾ ಪರವಾಗಿ ವಾದ ಮಂಡಿಸಿದ್ದರು.

ಅಫ್ಜಲ್ ಗುರು ಪ್ರಕರಣ
2001ರಲ್ಲಿ ಪಾರ್ಲಿಮೆಂಟ್‌ ದಾಳಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಮೊಹಮ್ಮದ್‌ ಅಫ್ಜಲ್ ಗುರು ಅವರಿಗೆ ವಿಧಿಸಿದ್ದ ಮರಣದಂಡನೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಅದಲ್ಲದೇ ಅಫ್ಜಲ್ ಗುರುವಿನ ಇಚ್ಛೆಯ ವಕೀಲರನ್ನು ನೇಮಿಸಲು ಅವಕಾಶ ನೀಡಲಿಲ್ಲ ಎಂದು ವಾದಿಸಿದ್ದರು.

ಜೆಸ್ಸಿಕಾ ಲಾಲ್‌ ಪ್ರಕರಣ
ದೇಶದಲ್ಲಿ ಸಂಚಲನ ಉಂಟು ಮಾಡಿದ್ದ ಜೆಸ್ಸಿಕಾ ಲಾಲ್‌ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಾಂಗ್ರೆಸ್‌ ನಾಯಕ ವಿನೋದ್‌ ಶರ್ಮಾರ ಪುತ್ರ ಮನು ಶರ್ಮಾ ಪರ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next