ಹೊಸದಿಲ್ಲಿ: ಪೌರತ್ವ ಕಾಯ್ದೆ ವಿಚಾರದಲ್ಲಿ ಗೊಂದಲ ಮೂಡಿರು ವಂತೆಯೇ ಆ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೆಜ್ಜೆಯಿಟ್ಟಿದೆ. ಅದರ ಅಂಗವಾಗಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಪಕ್ಷದ ಪ್ರಮುಖ ನಾಯಕರು ಭಾನುವಾರದಿಂದಲೇ ದೇಶಾದ್ಯಂತ ಮನೆ ಮನೆಗೆ ಭೇಟಿ ನೀಡಿ, ಪೌರತ್ವ ಕಾಯ್ದೆಗೆ ಬೆಂಬಲ ಯಾಚಿಸುವ ಅಭಿಯಾನ ಕೈಗೊಳ್ಳಲಿದ್ದಾರೆ.
10 ದಿನಗಳಲ್ಲಿ 3 ಕೋಟಿ ಕುಟುಂಬಗಳ ಬೆಂಬಲ ಪಡೆಯುವುದು ಸರಕಾರದ ಉದ್ದೇಶವಾಗಿದೆ. ಜತೆಗೆ ದೇಶಾದ್ಯಂತ 500 ಜಾಥಾಗಳನ್ನು ನಡೆಸಲೂ ಬಿಜೆಪಿ ತೀರ್ಮಾನಿಸಿದೆ. ಅಮಿತ್ ಶಾ ಅವರು ದೆಹಲಿಯಲ್ಲಿ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಗಾಜಿಯಾಬಾದ್, ರಾಜನಾಥ್ ಸಿಂಗ್ ಲಕ್ನೋದಲ್ಲಿ, ಗಡ್ಕರಿ ನಾಗ್ಪುರದಲ್ಲಿ, ನಿರ್ಮಲಾ ಸೀತಾರಾಮನ್ ಜೈಪುರದಲ್ಲಿ ಮನೆ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ತಿಳಿಸಿದ್ದಾರೆ.
ಪಾಕ್ ಜತೆ ಹೋಲಿಕೆ ಏಕೆ?: ಭಾರತವನ್ನು ಪದೇ ಪದೆ ಪಾಕಿಸ್ತಾನದೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಿರುವ ಪ್ರಧಾನಿ ಮೋದಿ ವಿರುದ್ಧ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ಸಿಎಎ ವಿರೋಧಿ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಭಾರತವು ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಇರುವ ದೇಶ.
ಹೀಗಿರುವಾಗ ಪ್ರಧಾನಿ ಮೋದಿ ಅವರು ಪದೇ ಪದೆ ಭಾರತವನ್ನು ಪಾಕ್‌ನೊಂದಿಗೆ ಏಕೆ ಹೋಲಿಕೆ ಮಾಡುತ್ತಾರೆ? ಅವರು ಭಾರತದ ಪ್ರತಿನಿಧಿಯೋ ಅಥವಾ ಪಾಕಿಸ್ತಾನದ ರಾಯಭಾರಿಯೋ’ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಾದರೂ, ನಾಗರಿಕರಿಗೆ ಪೌರತ್ವ ಸಾಬೀತುಪಡಿಸುವಂತೆ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಪಿಂಚಣಿ ಘೋಷಣೆ!: ಈ ಮಧ್ಯೆ, ಉ.ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ, ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಪಿಂಚಣಿ ನೀಡುವುದಾಗಿ ಸಮಾಜವಾದಿ ಪಕ್ಷ ಘೋಷಿಸಿದೆ. ಇದಕ್ಕೆ ತೀಕ್ಷ್ಮ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ‘ಗಲಭೆಕೋರರು ಮತ್ತು ಸಮಾಜವಿರೋಧಿಗಳನ್ನು ಗೌರವಿಸುವುದು ಈ ಪಕ್ಷದ ಡಿಎನ್‌ಎಯಲ್ಲೇ ಇದೆ ಎಂದು ಕಿಡಿಕಾರಿದೆ.
ಪಾಕ್, ಬಾಂಗ್ಲಾ ಮತ್ತು ಆಫ್ಘನ್‌ನಲ್ಲಿ ಕಿರುಕುಳ ಅನುಭವಿಸುತ್ತಿರುವವರ ಪೈಕಿ ಬಹುತೇಕ ಮಂದಿ ಒಬಿಸಿಗಳು ಹಾಗೂ ದಲಿತರಾಗಿದ್ದಾರೆ. ಅವರಿಗೆ ಸಿಎಎಯನ್ವಯ ಪೌರತ್ವ ನೀಡಲಾಗುತ್ತದೆ. ಹಾಗಾಗಿ, ಕಾಯ್ದೆಯನ್ನು ವಿರೋಧಿಸು ವವರನ್ನು ದಲಿತರು ಹಾಗೂ ಒಬಿಸಿಗಳ ವಿರೋಧಿಗಳು ಎಂದು ಘೋಷಿಸಬೇಕು.
– ನಿತ್ಯಾನಂದ ರಾಯ್, ಕೇಂದ್ರ ಸಚಿವ
ಪೌರತ್ವ ಕಾಯ್ದೆಯು ದೇಶದ ಯಾವುದೇ ನಾಗರಿಕನ ವಿರುದ್ಧ ವಾಗಿಲ್ಲ. ಪ್ರತಿಭಟನೆ ನಡೆಸುತ್ತಿರುವ ಪ್ರತಿಪಕ್ಷಗಳಿಗೆ ಈ ಕಾಯ್ದೆಯ ಕುರಿತು ತಿಳಿವಳಿಕೆಯೇ ಇಲ್ಲ.
– ರಾಮ್ ಮಾಧವ್, ಬಿಜೆಪಿ ಪ್ರಧಾನ ಕಾರ್ಯದರ್ಶಿ