ವಾಷಿಂಗ್ಟನ್ : ಅಮೆರಿಕದಲ್ಲಿರುವ ಭಾರತೀಯ ಮೂಲದ ಏಳು ಉನ್ನತ ಐಟಿ ಹೊರಗುತ್ತಿಗೆ ಕಂಪೆನಿಗಳು 2015ಕ್ಕೆ ಹೋಲಿಸಿದರೆ 2016ರಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಎಚ್-1ಬಿ ವೀಸಾ ಪಡೆದಿವೆ ಮತ್ತು ಒಂದು ಸಮೂಹವಾಗಿ ಈ ಏಳು ಕಂಪೆನಿಗಳನ್ನು ಪರಿಗಣಿಸಿದರೆ ಎಚ್-1ಬಿ ವೀಸಾ ಸ್ವೀಕೃತಿ ಪ್ರಮಾಣವು ಶೇ.37ರಷ್ಟು ಕುಸಿದಿದೆ ಎಂದು ಹೊಸ ವರದಿಯೊಂದು ತಿಳಿಸಿದೆ.
2015ಕ್ಕೆ ಹೋಲಿಸಿದರೆ 2016ರಲ್ಲಿ ಈ ಕಂಪೆನಿಗಳಿಗೆ ಮಂಜೂರಾದ ಎಚ್-1ಬಿ ವೀಸಾ 5,436 ಆಗಿದ್ದು ಇದು ಶೇ.37ರ ಕುಸಿತವನ್ನು ಸೂಚಿಸುತ್ತದೆ ಎಂದು ವಾಷಿಂಗ್ಟನ್‌ನಲ್ಲಿ ನೆಲೆಗೊಂಡಿರುವ ಲಾಭರಹಿತ ಚಿಂತನ ಚಾವಡಿ “ನ್ಯಾಶನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿ’ ಇದರ ವರದಿ ತಿಳಿಸಿದೆ.
2016ರಲ್ಲಿ ಈ ಏಳು ಕಂಪೆನಿಗಳಿಗೆ ಮಂಜೂರಾಗಿದ್ದ 9,356 ಹೊಸ ಎಚ್-1ಬಿ ವೀಸಾ ಅರ್ಜಿಗಳು ಅಮೆರಿಕದ ಒಟ್ಟು ಔದ್ಯೋಗಿಕ ಪ್ರಮಾಣದ ಕೇವಲ ಶೇ.0.006ರಷ್ಟು ಆಗಿದೆ ಎಂದು ವರದಿಯು ಹೇಳಿದೆ.
ಭಾರತೀಯ ಕಂಪೆನಿಗಳಿಗೆ ಹೊರಗುತ್ತಿಗೆ ಕೊಡುವ ಮೂಲಕ ಮತ್ತು ಎಚ್-1ಬಿ ವೀಸಾಗಳನ್ನು ಮಂಜೂರು ಮಾಡುವ ಮೂಲಕ ಅಮೆರಿಕನ್ನರಿಗೆ ದೇಶೀಯ ಉದ್ಯೋಗ ನಷ್ಟವಾಗಿದೆ ಎಂಬ ಹುಯಿಲು ಕೇವಲ ಅತಿಶಯದ್ದಾಗಿದೆ ಎಂಬುದು ಈ ವರದಿಯಿಂದ ಶ್ರುತಪಟ್ಟಿದೆ.
ಅಮೆರಿಕನ್ ಆರ್ಥಿಕತೆಯು ಸ್ವದೇಶೀಯರಿಗೆ 16 ಕೋಟಿ ಉದ್ಯೋಗಳನ್ನು ಒದಗಿಸುತ್ತಿರುವಾಗ ವಿದೇಶಿಗರಿಗೆ 10,000ಕ್ಕಿಂತಲೂ ಕಡಿಮೆ ಸಂಖ್ಯೆಯ ಉದ್ಯೋಗ ಸಿಗುತ್ತಿದೆ ಎಂಬ ಅಂಕಿ ಅಂಶಗಳಿಂದ “ಅಮೆರಿಕನ್ನರಿಗೆ ಉದ್ಯೋಗ ನಷ್ಟವಾಗುತ್ತಿದೆ’ ಎಂಬ ಹುಯಿಲು ಅರ್ಥಹೀನವಾಗಿದೆ ಎಂಬುದನ್ನು “ನ್ಯಾಶನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿ’ ಚಿಂತನ ಚಾವಡಿಯ ಸಂಶೋಧನಾತ್ಮಕ ವರದಿಯು ಸ್ಪಷ್ಟಪಡಿಸಿದೆ.
ವರದಿಯ ಪ್ರಕಾರ 2016ರಲ್ಲಿ ಟಿಸಿಎಸ್ ಕಂಪೆನಿಗೆ ಮಂಜೂರಾದ ಎಚ್-1ಬಿ ವೀಸಾ ಪ್ರಮಾಣವು 2015ಕ್ಕೆ ಹೋಲಿಸಿದಾಗ ಶೇ.56ರಷ್ಟು ಕಸಿದಿದೆ. ಎಂದರೆ 2015ರಲ್ಲಿ 4,674ರ ಪ್ರಮಾಣವು 2016ರಲ್ಲಿ 2,040ಕ್ಕೆ ಕುಸಿದಿದೆ.