Advertisement

ಸಂಕಷ್ಟದಲ್ಲಿ ತೊಗರಿ ರಾಶಿ: ಹೆಗಲೇರಿದ ನಷ್ಟ

10:30 AM Jan 10, 2022 | Team Udayavani |

ವಾಡಿ: ತೊಗರಿ ಕಣಜವೆಂದೇ ಗುರುತಿಸಿಕೊಂಡಿರುವ ಜಿಲ್ಲೆಯಲ್ಲಿ ಈ ವರ್ಷ ಎದುರಾದ ಅತಿವೃಷ್ಟಿಗೆ ಅನ್ನದಾತರು ನಲುಗಿದ್ದಾರೆ. ಭಾರಿ ಇಳುವರಿ ನಿರೀಕ್ಷೆ ಹೊಂದಿದ್ದ ರೈತರ ಹೆಗಲ ಮೇಲೆ ನಷ್ಟದ ಹೊರೆ ಬಿದ್ದಿದೆ. ಸಂಕಷ್ಟದ ನಡುವೆಯೂ ಹೊಟ್ಟೆಗೆ ವರ್ಷದ ಕಾಳು ದಕ್ಕಿಸಿಕೊಳ್ಳಲು ಕೃಷಿಕರು ತೊಗರಿ ರಾಶಿಗೆ ಮುಂದಾಗಿದ್ದಾರೆ.

Advertisement

ತೊಗರಿ ಬೇಸಾಯವನ್ನೇ ಪ್ರಮುಖವಾಗಿ ನೆಚ್ಚಿಕೊಂಡಿರುವ ಚಿತ್ತಾಪುರ, ನಾಲವಾರ, ವಾಡಿ, ಸನ್ನತಿ, ಕೊಲ್ಲೂರ, ಬಳವಡಗಿ, ಇಂಗಳಗಿ, ಕುಂದನೂರು ಪ್ರದೇಶದ ರೈತರು, ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿಯ ಹೊಡೆತ ಅನುಭವಿಸುತ್ತಿದ್ದಾರೆ.

ಪ್ರಸಕ್ತ ಸಾಲಿನಲ್ಲೂ ಅತಿವೃಷ್ಟಿ ಎತೇತ್ಛವಾಗಿ ಕಾಡಿದ್ದು, ಮಹಾ ಮಳೆಗೆ ಬೆಳೆ ಕೊಚ್ಚಿಕೊಂಡು ಹೋಗಿದೆ. ಬಹುತೇಕ ಕಡೆಗಳಲ್ಲಿ ತೊಗರಿ ಮರು ಬಿತ್ತನೆಯೂ ನಡೆದಿದೆ. ಬೆನ್ನುಬಿಡದೆ ಕಾಡಿದ ಅತಿವೃಷ್ಟಿಯಿಂದ ತೊಗರಿ ಸಂಪೂರ್ಣ ನೆಲಕಚ್ಚಿದೆ.

ನೀರಿಗೆ ಕೊಚ್ಚಿ ಹೋದ ಬೆಳೆ ರಕ್ಷಿಸಲು ರೈತರು ಹರಸಾಹಸಪಟ್ಟಿದ್ದು ಅಷ್ಟಿಷ್ಟಲ್ಲ. ನೀರಿನಲ್ಲಿ ನಿಂತ ಬೆಳೆ ಕಂಡು ಮರುಗುತ್ತಿದ್ದಾರೆ. ಸಾಲದ ಹೊರೆ ಜತೆಗೆ ಕಾಳಿಲ್ಲದ ತೊಗರಿ ಹೊರೆ ಹೊತ್ತು ಕಂಗಾಲಾಗಿದ್ದಾರೆ. ತೊಗರಿ ಬೆಳೆಗೆ ಮಳೆ ಒಂದೆಡೆ ಕಾಡಿದರೆ, ಇನ್ನೊಂದೆಡೆ ಕೀಟಗಳ ಕಾಟ ಹೆಚ್ಚಿತ್ತು. ನೆಲದ ತೇವಾಂಶ ಹೆಚ್ಚಾಗಿ ಫಸಲು ಚಿಗಿಯಲಿಲ್ಲ. ಕೀಟಗಳ ಕಾಟದಿಂದ ಕಾಳುಗಳು ಉಳಿಯಲ್ಲಿಲ್ಲ. ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಬೆಳೆ ಸಾಲು ಹಾಳಾಗಿದ್ದನ್ನು ನೆನೆದು ರೈತರು ನಷ್ಟದ ಬದುಕಿಗೆ ಶಪಿಸುತ್ತಿದ್ದಾರೆ.

ನಿರೀಕ್ಷಿತ ಕಾಳಿಲ್ಲದ ತೊಗರಿ ಹೊರೆಗಳನ್ನು ತಂದು ರಾಶಿ ಮಾಡುತ್ತಿದ್ದಾರೆ. ಗಣಿ ನಾಡಲ್ಲಿ ತೊಗರಿ ರಾಶಿಗೆ ಚಾಲನೆ ದೊರೆತಿದ್ದು, 15 ಚೀಲ ತೊಗರಿಯಾಗುತ್ತಿದ್ದ ಹೊಲದಲ್ಲಿ ಐದಾರು ಚೀಲಕ್ಕೆ ಸೀಮಿತವಾಗಿದೆ. ಕೆಲ ರೈತರು ಎರಡು ಮೂರು ಚೀಲ ತೊಗರಿ ರಾಶಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಪ್ರಸಕ್ತ ವರ್ಷದ ಬೆಳೆಯ ಫಲ ಕೀಟ ನಾಶಕ ಔಷಧ ಖರೀದಿಗೆ ಮಾಡಿದ ಸಾಲ ತೀರಿಸೋದು ಹೇಗೆ? ಬದುಕೋದು ಹೇಗೆ ಎಂದು ಚಿಂತಿತರಾಗಿರುವ ಅನ್ನದಾತರು, ಸರ್ಕಾರದ ಬೆಳೆ ನಷ್ಟ ಪರಿಹಾರದತ್ತ ದೃಷ್ಟಿ ಹಾಯಿಸಿದ್ದಾರೆ.

ಕೃಷಿ ಕಾರ್ಮಿಕರ ಸಂಕಷ್ಟ

ಈ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ ಕೆಲಸವೂ ಇಲ್ಲದೇ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಕೃಷಿ ಕೆಲಸದ ಕೂಲಿಯೂ ಲಭ್ಯವಾಗದೆ ಕೃಷಿ ಕಾರ್ಮಿಕರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ತೊಗರಿ ರಾಶಿ ಎಲ್ಲೆಡೆ ನಡೆಯುತ್ತಿದೆಯಾದರೂ ಕೃಷಿ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಬೆಳೆ ನಷ್ಟದಲ್ಲಿರುವ ರೈತರ ಕುಟುಂಬವೇ ತೊಗರಿ ರಾಶಿಗೆ ನಿಂತಿದ್ದರಿಂದ ಕೂಲಿಕಾರರಿಗೆ ಹೊಡೆತ ಬಿದ್ದಿದೆ. ಗ್ರಾಪಂ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆಗೆ ಚಾಲನೆ ನೀಡದೇ ಗೋಳಾಡಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಹಾಸುಗಲ್ಲುಗಳಿಗೆ ಬೇಡಿಕೆ ಕುಸಿದಿದ್ದರಿಂದ ಸ್ಥಳೀಯ ಅನೇಕ ಕಲ್ಲು ಗಣಿಗಳು ಸ್ಥಗಿತವಾಗಿವೆ. ಇದರಿಂದ ಗಣಿ ಕಾರ್ಮಿಕರಿಗೂ ಕೆಲಸ ಇಲ್ಲದಂತಾಗಿದೆ. ಒಟ್ಟಾರೆ ಈ ವರ್ಷ ಎದುರಾದ ಅತಿವೃಷ್ಟಿಗೆ ರೈತರು ಮತ್ತು ಕೃಷಿ ಕಾರ್ಮಿಕರ ಬದುಕು ಆರ್ಥಿಕ ಬಿಕ್ಕಟ್ಟಿನ ಹೊಡೆತಕ್ಕೆ ಸಿಲುಕಿದೆ.

ಇದನ್ನೂ ಓದಿ:ವಿಡಿಯೋ: ದೋಣಿಗಳ ಮೇಲೆ ಬಿದ್ದ ಬೃಹತ್ ಬಂಡೆ: 10 ಮಂದಿ ದುರ್ಮರಣ

ಅತಿಯಾದ ಮಳೆಯಿಂದ ಪ್ರಸಕ್ತ ವರ್ಷ ನಾಲವಾರ ವಲಯದಲ್ಲಿ ಸುಮಾರು 9500 ಹೆಕ್ಟೇರ್‌ನಷ್ಟು ಅಂದರೆ ಶೇ.40ರಷ್ಟು ಬೆಳೆ ನಷ್ಟ ಉಂಟಾಗಿದೆ. ತೊಗರಿ ಬೆಳೆ ಹೂ ಬಿಡುವಾಗ ಇಬ್ಬನಿ ಬಿದ್ದು ಹಾಳಾಯಿತು. ಹುಳು ಕಾಟದ ಜತೆಗೆ ಅತಿವೃಷ್ಟಿ ಕಾಡಿತು. ಗೊಡ್ಡು ರೋಗವೂ ಬೆಳೆಯನ್ನು ತಿಂದು ಹಾಕಿತು. ಹೀಗಾಗಿ ಎಕರೆಗೆ ಎರಡು ಚೀಲ ಮಾತ್ರ ಬೆಳೆ ಬಂದಿದೆ. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಿ ಶೇ.90ರಷ್ಟು ರೈತರಿಗೆ ಈಗಾಗಲೇ ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. -ಸತೀಶಕುಮಾರ ಪವಾರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ನಾಲವಾರ

ಹೊಲದಾಗ ದುಡಿದು ತಿನ್ನುವ ರೈತರಿಗೆ ಕಾಡುವ ಕಷ್ಟ ನಿನ್ನೆ ಮೊನ್ನೆಯದಲ್ಲ. ಒಮ್ಮೆ ಹೆಚ್ಚು ಮಳೆಯಾದರೆ ಮತ್ತೂಮ್ಮೆ ಮಳೆ ಕೊರತೆಯಿಂದ ಬೆಳೆಗಳು ಹಾಳಾಗುತ್ತಿವೆ. ಈ ವರ್ಷ ಅತಿಯಾದ ಮಳೆ ಸುರಿದು ತೊಗರಿ ನಾಶವಾಗಿದೆ. ನೆಟೆ ರೋಗ ಹತ್ತಿದ ಕಾರಣ ಇಳುವರಿ ಬಂದಿಲ್ಲ. ಐದು ಎಕರೆ ಭೂಮಿಯಲ್ಲಿ ಮೂರು ಚೀಲ ತೊಗರಿಯಂದರೆ ಬದುಕಲು ಸಾಧ್ಯವೇ? ನಮ್ಮ ಹೊಲದಲ್ಲಿ ನಾವೇ ದುಡಿದರೂ ಕಷ್ಟ ತಪ್ಪಿಲ್ಲ. ಇನ್ನೂ ಕೂಲಿಕಾರ್ಮಿಕರನ್ನು ಬಳಸಿಕೊಂಡರೆ ಉಳಿಯುತ್ತೇವಾ? ಸಕಾರ ಕೊಟ್ಟ ಪರಿಹಾರ ಯಾತಕ್ಕೂ ಸಾಕಾಗಲ್ಲ? -ಈಶಮ್ಮ ಬಸವರಾಜ ಶಿರವಾಳ, ರೈತ ಮಹಿಳೆ, ಕಮರವಾಡಿ

-ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next