ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಮತ್ತು ಗುರ್ಗಾಂವ್ ನಲ್ಲಿರುವ ಟ್ವಿಟರ್ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಮಂಗಳವಾರ ನಡೆದಿದೆ. ಇದೊಂದು ವಾಕ್ ಸ್ವಾತಂತ್ರ್ಯದ ಕೊಲೆ ಎಂದು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಆರೋಪಿಸಿದೆ.
ಇದನ್ನೂ ಓದಿ:ತೆಂಗಿನ ಸಸಿ ನೆಟ್ಟು 67 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ ದೇವೇಗೌಡರು
“ದೆಹಲಿ ಪೊಲೀಸರು ಮೈಕ್ರೋಬ್ಲಾಗಿಂಗ್ ಸೈಟ್ ಕಚೇರಿಗಳ ಮೇಲೆ ಹೇಡಿತನದ ದಾಳಿ ನಡೆಸುವ ಮೂಲಕ ಬಿಜೆಪಿ ನಾಯಕರ ಮೋಸದ ಟೂಲ್ ಕಿಟ್ ಅನ್ನು ಮರೆಮಾಚಲು ವಿಫಲ ಯತ್ನಗಳನ್ನು ನಡೆಸುತ್ತಿರುವುದು ಬಹಿರಂಗವಾಗುತ್ತಿದೆ” ಎಂದು ಕಾಂಗ್ರೆಸ್ ದೂರಿದೆ.
ದೆಹಲಿ ಸ್ಪೆಷಲ್ ಸೆಲ್ ಪೊಲೀಸರು ಸೋಮವಾರ ಟ್ವಿಟರ್ ಇಂಡಿಯಾಕ್ಕೆ ಕೋವಿಡ್ ಟೂಲ್ ಕಿಟ್ ಆರೋಪಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಿದ್ದರು. ಅಲ್ಲದೇ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರ ಟ್ವೀಟ್ ತಿರುಚಿದ್ದು ಯಾವ ಆಧಾರದ ಮೇಲೆ ನಿರ್ಧರಿಸಿದೆ ಎಂಬ ಮಾಹಿತಿಯನ್ನು ಹಂಚಿಕೊಳ್ಳುವಂತೆ ಸೂಚಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಪೊಲೀಸರು ಸೋಮವಾರ ಸಂಜೆ ಲಾಡೋ ಸರಾಯ್ ಮತ್ತು ಗುರ್ಗಾಂವ್ ನಲ್ಲಿರುವ ಟ್ವಿಟರ್ ಇಂಡಿಯಾ ಕಚೇರಿ ಮೇಲೆ ದಾಳಿ ನಡೆಸಿದ್ದರು ಎಂದು ವರದಿಯಾಗಿತ್ತು. ನಾವು ದಾಳಿ ನಡೆಸಿಲ್ಲ, ದೂರಿನ ಕ್ರಮದಂತೆ ನೋಟಿಸ್ ನೀಡಲು ಟ್ವಿಟರ್ ಇಂಡಿಯಾ ಕಚೇರಿಗೆ ಪೊಲೀಸರು ಭೇಟಿ ನೀಡಿದ್ದರು ಎಂದು ದೆಹಲಿ ಪೊಲೀಸ್ ಪಿಆರ್ ಒ ಚಿನ್ಮಯ್ ಬಿಸ್ವಾಲ್ ತಿಳಿಸಿದ್ದರು.