– ಪ್ರಧಾನಿ ವರ್ಚಸ್ಸಿಗೆ ಧಕ್ಕೆ ತರಲು ಕಾಂಗ್ರೆಸ್ ಕುತಂತ್ರ: ಬಿಜೆಪಿ
– ಇದು ಸುಳ್ಳಿನ ಕಂತೆ; ಕೇಸು ದಾಖಲಿಸಲು ಕ್ರಮ: ಕಾಂಗ್ರೆಸ್
ಹೊಸದಿಲ್ಲಿ: ರೈತ ಕಾಯ್ದೆಗಳ ವಿರುದ್ಧ ಪ್ರತಿಭಟನೆ ವೇಳೆ ಏಕಾಏಕಿ ಭುಗಿಲೆದ್ದ “ಟೂಲ್‌ಕಿಟ್’ ವಿವಾದ ಮತ್ತೂಮ್ಮೆ ಚರ್ಚೆಗೆ ವಸ್ತುವಾಗಿದೆ. ಕಾಂಗ್ರೆಸ್ ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ಪ್ರಧಾನಿ ಮೋದಿಯವರ ವರ್ಚಸ್ಸಿಗೆ ಮಸಿ ಬಳಿಯಲು ಬಳಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ತಿರುಗೇಟು ನೀಡಿರುವ ಕಾಂಗ್ರೆಸ್, ಅಂಥ ಟೂಲ್‌ಕಿಟ್ ಇಲ್ಲ. ಅದು ಕೇವಲ ಬಿಜೆಪಿಯ ಕಪೋಲಕಲ್ಪಿತ ಪ್ರಚಾರ ಎಂದಿದೆ. ಟೂಲ್‌ಕಿಟ್ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರಾದ ಜೆ.ಪಿ. ನಡ್ಡಾ, ಸಂಭೀತ್ ಪಾತ್ರಾ ವಿರುದ್ಧ ಪೊಲೀಸರಿಗೆ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿದೆ.
ಆರೆಸ್ಸೆಸ್ ಮುಖವಾಣಿ “ಆರ್ಗನೈಸರ್’ನಲ್ಲಿ ಟೂಲ್‌ಕಿಟ್ ಬಗ್ಗೆ ಮೊದಲು ಉಲ್ಲೇಖಗೊಂಡಿತ್ತು. ಈ ಟೂಲ್‌ಕಿಟ್‌ನಲ್ಲಿ ಸೋಂಕಿನ ಭಾರತೀಯ ರೂಪಾಂತರ ಬಿ.1.617 ವೈರಸ್‌ನ್ನು “ಮೋದಿ ವೈರಸ್’ ಅಥವಾ “ಭಾರತದ ರೂಪಾಂತರಿ’ ಎಂದು ಉಲ್ಲೇಖೀಸುವಂತೆ ಕಾಂಗ್ರೆಸ್‌ನ ಕಾರ್ಯ ಕರ್ತ ರಿಗೆ ಕರೆ ನೀಡಲಾಗಿದೆ. ಕುಂಭ ಮೇಳ ವೈರಸ್‌ನ ಸೂಪರ್ ಸ್ಪ್ರೆಡರ್ ಎಂದು ಜಾಲ ತಾಣ ಗಳಲ್ಲಿ ಪ್ರಚಾರ ಮಾಡಬೇಕು ಎಂದು ಸೂಚಿಸ ಲಾಗಿದೆ. ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ನಾಲ್ಕು ಪುಟಗಳ ಅಂಶವನ್ನು ಎಐಸಿಸಿಯ ಸಂಶೋಧನ ವಿಭಾಗ ಸಿದ್ಧಪಡಿಸಿದೆ ಎಂದು ಅದರಲ್ಲಿ ಮುದ್ರಿಸಲಾಗಿದೆ.
ಈ ಬಗ್ಗೆ ಕಟುವಾಗಿ ಟೀಕಿಸಿರುವ ಬಿಜೆಪಿ ವಕ್ತಾರ ಸಂಭೀತ್ ಪಾತ್ರಾ, ಕಾಂಗ್ರೆಸ್ ಸೋಂಕಿನಿಂದ ನೊಂದವರಿಗೆ ನೆರವಾಗುವ ಬದಲು ತನ್ನ ನಿಕಟವರ್ತಿ ಪತ್ರಕರ್ತರು ಮತ್ತು ಪ್ರಭಾವಿಗಳ ಜತೆಗೆ ಸೇರಿ ಸಾರ್ವಜನಿಕ ಸಂಪರ್ಕ ಹೆಚ್ಚಿಸುವಲ್ಲಿ ಆಸಕ್ತಿ ವಹಿಸಿದೆ ಎಂದಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದಿರುವ ಸಂಭೀತ್, “ಸೋಂಕಿನ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಪ್ರಧಾನಿ ಮೋದಿಯವರ ವರ್ಚಸ್ಸಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ’ ಎಂದು ದೂರಿದ್ದಾರೆ. ವಿದೇಶಿ ಪತ್ರಕರ್ತರ ಜತೆ ಸೇರಿ ದೇಶದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡ “ಕಾಂಗ್ರೆಸ್ ಏನು ಮಾಡುತ್ತಿದೆ ಎನ್ನುವುದು ದೇಶಕ್ಕೆ ಗೊತ್ತಿದೆ. ದೇಶ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿದೆ. ಕಾಂಗ್ರೆಸ್ ಟೂಲ್‌ಕಿಟ್‌ನ ಆಚೆ ಧನಾತ್ಮಕ ಚಟುವಟಿಕೆಗಳ ಬಗ್ಗೆ ಯೋಚಿಸಬೇಕು’ ಎಂದಿದ್ದಾರೆ.
ಕಪೋಲ ಕಲ್ಪಿತ: ಕಾಂಗ್ರೆಸ್
ಟ್ವಿಟರ್ ಸಹಿತ ಹಲವು ಜಾಲತಾಣಗಳಲ್ಲಿ ವೈರಲ್ ಆಗಿರುವ “ಟೂಲ್‌ಕಿಟ್’ ಆರೋಪ ವನ್ನು ಕಾಂಗ್ರೆಸ್ ಸಾರಾಸಗಟಾಗಿ ತಿರಸ್ಕರಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಪ್ರೊ| ರಾಜೀವ್ ಗೌಡ, “ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರಕಾರ ವಿಫಲವಾಗಿದೆ. ಹೀಗಾಗಿ ಬಿಜೆಪಿ ಟೂಲ್ ಕಿಟ್ ವಿವಾದ ವನ್ನು ಮುನ್ನೆಲೆಗೆ ತಂದಿದೆ’ ಎಂದಿದ್ದಾರೆ. “ಎಐಸಿಸಿ ಸಂಶೋಧನ ವಿಭಾಗ ದಲ್ಲಿ ಅದನ್ನು ಸಿದ್ಧ ಪಡಿಸಲಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಬಿಜೆಪಿ ಅಧ್ಯಕ್ಷ ನಡ್ಡಾ, ವಕ್ತಾರ ಸಂಭೀತ್ ಪಾತ್ರ ವಿರುದ್ಧ ವಂಚನೆ ಕೇಸು ದಾಖಲಿಸು ತ್ತೇವೆ’ ಎಂದು ಗೌಡ ಟ್ವೀಟ್ ಮಾಡಿದ್ದಾರೆ.