Advertisement

ಬದಲಾಗಿದೆ ಖುಷಿಯ ಪರಿ

03:50 AM Mar 14, 2017 | |

ಈ ಹಿಂದೆಲ್ಲಾ ಟಿ.ವಿ ನೋಡುವುದು, ಫ್ರೆಂಡ್ಸ್‌ ಜೊತೆ ಸುತ್ತುವುದು, ಫೋನ್‌ನಲ್ಲಿ ಗಂಟೆಗಟ್ಟಲೆ ಹರಟುವುದರಲ್ಲಿಯೇ ಬದುಕಿನ ಖುಷಿಯಿದೆ ಅನ್ನಿಸುತ್ತಿತ್ತು. ಆದರೆ ಈಗ ಪುಸ್ತಕ ಓದುವುದು, ಬರೆಯುವುದು, ಹಾಡು ಕೇಳುವುದು, ಗೆಳೆಯರು-  ಅಧ್ಯಾಪಕರೊಂದಿಗೆ ಚರ್ಚಿಸುವುದರಲ್ಲಿ ಹೆಚ್ಚಿನ ಖುಷಿ ಇದೆ ಅನ್ನಿಸುತ್ತಿದೆ.

Advertisement

ಪಿಯುಸಿ ಮುಗಿಯಿತು, ಮುಂದೆ ಏನ್‌ ಮಾಡ್ಲಿ? ಡಾಕ್ಟರ್‌, ಇಂಜಿನಿಯರ್‌ ಓದೋದಕ್ಕೆ ಆಗೋದಿಲ್ಲ. ಕಾರಣ, ನಾನು ಪಿಯುಸಿ
ಮುಗಿಸಿದ್ದು ಕಾಮರ್ಸ್‌ ವಿಭಾಗದಲ್ಲಿ. ಎಲ್ಲರಂತೆ ಬಿ.ಕಾಂ ಮಾಡ್ಲಾ? ಇಲ್ಲಾ ಬಿ.ಬಿ.ಎಂ ಮಾಡ್ಲಾ? ಅಂತ ಯೋಚನೆ ಮಾಡೋಕೆ ಸಮಯಾನೇ ಕೊಡ್ಲಿಲ್ಲ. ಯಾಕಂದ್ರೆ, ನನ್ನ ಮನಸಿಗೆ ಮೊದಲೇ ಹೊಸತಾಗಿ, ಕುತೂಹಲಕಾರಿಯಾಗಿ ಕಂಡದ್ದು ಪತ್ರಿಕೋದ್ಯಮ. ಇದೊಂದೇ ನನ್ನ ಮನಸಲ್ಲಿ ಇದ್ದುದರಿಂದ ಪಿಯುಸಿ ಮುಗೀತಿದ್ದ ಹಾಗೆ ಬಿ.ಎ ಪತ್ರಿಕೋದ್ಯಮ ಮಾಡಬೇಕೆಂದು ನಮ್ಮ ಊರಿಂದ, ದೂರದ ಉಜಿರೆಗೆ ಬಂದೆ. ಹೇಗೋ ಆಡ್ಮಿಶನ್‌ ಎಲ್ಲಾ ಮುಗಿದು ಜೂನ್‌ 20ಕ್ಕೆ ಕಾಲೇಜು ಆರಂಭವಾಯಿತು.

ಹಾಸ್ಟೆಲ್‌ನಲ್ಲಿ ಇರಬೇಕಾದ ಅನಿವಾರ್ಯತೆ ಇದ್ದುದರಿಂದ ಮೊದಲ ಬಾರಿ ಹಾಸ್ಟೆಲ್‌ ಜೀವನ ಪ್ರಾರಂಭಿಸಿದೆ. ಮನೆಯಿಂದ ದೂರವಿದ್ದ
ಕಾರಣ ಮನಸ್ಸು ಪದೇ ಪದೆ ಮನೆಯೆಡೆಗೆ ವಾಲುತಿತ್ತು. ಅಂದು ಕಾಲೇಜಿನ ಮೊದಲ ದಿನ. ಹೊರಗಡೆಯಿಂದ ಕಾಲೇಜು ನೋಡಿ, 
ಅಬ್ಟಾ, ಎಷ್ಟು ದೊಡ್ಡ, ಚೆಂದದ ಕಾಲೇಜು ಎನ್ನುತ್ತಿದ್ದ ನನಗೆ ಆ ದಿನ ನಾನು ಈ ಕಾಲೇಜಿನ ವಿದ್ಯಾರ್ಥಿಯೆಂದು ತೃಪ್ತಿಯಾಯಿತು.

ಮೊದಲ ದಿನ ನಮ್ಮ ಕಾಲೇಜಿನ ಇಂದ್ರಪ್ರಸ್ಥ ಆಡಿಟೋರಿಯಂನಲ್ಲಿ ಕಾಲೇಜಿನ ಸಂಪೂರ್ಣ ಚಿತ್ರಣ ತಿಳಿಸಿದರು. ಕಾರ್ಯಕ್ರಮ ಮುಗಿದ ಮೇಲೆ ಮತ್ತೆ ಹಾಸ್ಟೆಲ್‌. ಮಾರನೇ ದಿನ ಹೊಸ, ಹೊಸ ಮುಖಗಳು, ನಗುವಿನ ಮೂಲಕ ಸ್ನೇಹ ವಿನಿಮಯ, ಮಾತಿನಿಂದ ಪರಸ್ಪರ ಸ್ನೇಹ, ಊರು, ಕಾಲೇಜು, ಹೀಗೆ ಹೊಸ ಸ್ನೇಹಿತರ ಬಳಗ ಕಟ್ಟುವಾಗ ಆಡದ ಮಾತುಗಳಿಲ್ಲ, ಪಡದ ಖುಷಿಗಳಿಲ್ಲ.

ಹೀಗೇ ದಿನ ಕಳೆಯಿತು, ಎರಡು ವಾರಗಳಿಗೊಮ್ಮೆ ಮನೆಗೆ ಹೋಗುವುದು, ಬರುವಾಗ ಬೇಸರದಿಂದ ಅಳುವುದು ನನ್ನ ಹೊಸ ಬದುಕಿನ ಭಾಗವಾಯಿತು. ಬರಬರುತ್ತಾ ಹಾಸ್ಟೆಲ್‌ ಕೂಡ ಇಷ್ಟವಾಗಿ ಹತ್ತಿರವಾಯಿತು. ಹೊಸ ಮುಖಗಳು ಹಳೆಯದಾದವು.
ಮಾತನಾಡಲು ಹೆದರುತ್ತಿದ್ದ ಅಧ್ಯಾಪಕರೊಂದಿಗೆ ಈಗ ಹೊಸ ಬಾಂಧವ್ಯ. ದೂರದಲ್ಲಿರುವ ತಂದೆ- ತಾಯಿಗೆ ಹಂಬಲಿಸುತಿದ್ದ ಈ
ಮನಸ್ಸಿಗೆ ಈಗ ಏನೇ ವಿಷಯವಿದ್ದರೂ ಇಷ್ಟದ ಅಧ್ಯಾಪಕರಲ್ಲಿ ಹೇಳಿಕೊಳ್ಳುವ ಹೊಸ ಖುಷಿ. ಇನ್ನು ಮನೆಯವರಂತೆ ಪರಸ್ಪರ
ಸುಖ- ದುಃಖ ವಿಚಾರಿಸುವ, ದಿನದ ಬಹಳ ಸಮಯವನ್ನು ನನ್ನೊಂದಿಗೆ ಕಳೆಯುವ ನನ್ನ ರೂಮ್‌ಮೇಟ್ಸ್‌.

Advertisement

ಹೀಗೇ ಜೀವನ ಬದಲಾಗುತ್ತಿದೆ. ಪಿಯುಸಿಯಲ್ಲಿ ಬಾಯಿಗೆ ಬೀಗ ಹಾಕದೆ ಮಾತನಾಡುತ್ತಿದ್ದ ನಾನು ಈಗ ಬೆರಳೆಣಿಕೆಯಷ್ಟು ಮಾತ್ರ ಮಾತಾಡುತ್ತಿದ್ದೇನೆ. ಹೊಸ, ಉತ್ತಮ ಅಭ್ಯಾಸಗಳು ರೂಢಿಯಾಗಿವೆ. ಒಮ್ಮೊಮ್ಮೆ ಮತ್ತೆ ಅದೇ ಪಿಯುಸಿ ಜೀವನ ಬೇಕೆನಿಸುತ್ತದೆ. ಆದರೆ ಪ್ರಸ್ತುತ ಕಾಲೇಜಿನ ಸ್ನೇಹಿತರು, ಅಧ್ಯಾಪಕರು ಈ ವಿಚಾರವನ್ನು ನನ್ನ ತಲೆಯಲ್ಲಿ ಹೆಚ್ಚು ಹೊತ್ತು ಉಳಿಯುವಂತೆ ಮಾಡುವುದಿಲ್ಲ. ಜೀವನ ಉತ್ತಮ ದಾರಿಯೆಡೆಗೆ ಸಾಗುತ್ತಿದೆ ಎಂಬ ತೃಪ್ತಿ ನನ್ನಲ್ಲಿದೆ. ಮೊದಲೆಲ್ಲಾ ಟಿ.ವಿ, ಫೋನ್‌, ಫ್ರೆಂಡ್ಸ್‌
ಕೊಡುತ್ತಿದ್ದ ಖುಷಿಗಳನ್ನು ಈಗ ಪುಸ್ತಕ ಓದೋದು, ಹಾಡು ಕೇಳುವುದು, ಬರೆಯುವುದು, ಚರ್ಚೆ, ಆಟಗಳು ನೀಡುತ್ತಿವೆ. ಈ ಖುಷಿ,. ಬದುಕು ಹೀಗೇ ಇರಲಿ…

ಮಲ್ಲಿಕಾ ಪೂಜಾರಿ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next