ಬೆಂಗಳೂರು: ಬಿಬಿಎಂಪಿ 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಚುನಾವಣೆ ಶುಕ್ರವಾರ (ನ.10) ನಡೆಯಲಿದ್ದು, ಗುರುವಾರ ಬೆಳಗ್ಗೆ 10.30 ರಿಂದ ಸಂಜೆ 5 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರ ಬೆಳಗ್ಗೆ 11.30ಕ್ಕೆ ಚುನಾವಣಾ ಸಭೆ ನಡೆಯಲಿದ್ದು, ಗುರುವಾರ ಸಂಜೆ 5ರೊಳಗೆ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬೇಕು. ಸಲ್ಲಿಕೆಯಾಗುವ ನಾಮಪತ್ರಗಳನ್ನು ಅದೇ ದಿನ ಸಂಜೆ 5.30ರ ನಂತರ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಚುನಾವಣಾ ಸಭೆಗೆ ಅಧಿಕಾರಿಗಳು ಅಗತ್ಯ ಸಿದ್ಧತೆ ನಡೆಸಿದ್ದಾರೆ.
ಚುನಾವಣಾ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮೈತ್ರಿ ಪಕ್ಷ ಜೆಡಿಎಸ್ ತನ್ನ ಪಾಲಿಕೆಗೆ ಸಿಗಲಿರುವ ನಾಲ್ಕು ಸ್ಥಾಯಿ ಸಮಿತಿಗೆ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದು, ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಗೆ ಯಾರು ನಾಮಪತ್ರ ಸಲ್ಲಿಸಬೇಕು ಹಾಗೂ ಅಧ್ಯಕ್ಷರು ಯಾರಾಗಬೇಕು ಎಂಬ ಮಾಹಿತಿಯುಳ್ಳು ಲಕೋಟೆಯನ್ನು ವಿಕಾಸ ಯಾತ್ರೆಯಲ್ಲಿ ಪಾಲ್ಗೊಂಡಿರುವ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಮುಖಂಡರಿಗೆ ಕಳುಹಿಸಿದ್ದಾರೆ. ಇನ್ನು ಚುನಾವಣೆಗೆ ಒಂದು ದಿನ ಬಾಕಿ ಇರುವಾಗಲೂ ಕಾಂಗ್ರೆಸ್‌ನಿಂದ ಸದಸ್ಯ ಸ್ಥಾನಕ್ಕೆ ಯಾರು ಉಮೇದುವಾರಿಕೆ ಸಲ್ಲಿಸಬೇಕು ಮತ್ತು ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ.
ಬುಧವಾರ ನೋಟ್ ಬ್ಯಾನ್ ವಿರುದ್ಧದ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡರು, ಗುರುವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿ ಅಧ್ಯಕ್ಷರು ಯಾರಾಗಬೇಕು ಎಂಬುದನ್ನು ಅಂತಿಮಗೊಳಿಸಲಿದ್ದಾರೆ. ಅದರ ಜತೆಗೆ 7 ಪಕ್ಷೇತರ ಸದಸ್ಯರಲ್ಲಿ ಯಾರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬುದನ್ನು ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ.
ಸ್ಥಾಯಿ ಸಮಿತಿ ಚುನಾವಣೆ ವಿಚಾರದಲ್ಲಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷದ ಪಾಲಿಕೆ ಸದಸ್ಯರು ಗುರುವಾರ ಬೆಳಗ್ಗೆ 9.30ಕ್ಕೆ ನಾಮಪತ್ರ ಸಲ್ಲಿಸಲಿದ್ದು, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಲಕೋಟೆಯಲ್ಲಿ ಯಾರು ನಾಮಪತ್ರ ಸಲ್ಲಿಸಬೇಕು ಎಂಬುದನ್ನು ಕಳುಹಿಸಿದ್ದಾರೆ.
●ಟಿ.ಎ.ಶರವಣ, ವಿಧಾನ ಪರಿಷತ್ ಸದಸ್ಯ