Advertisement

ನಾಳೆ ಅಂತಿಮ? ವಿಶ್ವಾಸ‌ದ ಆತಂಕದ ನಡುವೆ ಅತೃಪ್ತರ ಮನವೊಲಿಕೆ ಯತ್ನ

02:46 AM Jul 21, 2019 | Sriram |

ಬೆಂಗಳೂರು: ಸೋಮವಾರದ ವಿಶ್ವಾಸಮತ ಆತಂಕದ ನಡುವೆಯೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಮುಂಬೈನಲ್ಲಿರುವ ಅತೃಪ್ತ ಶಾಸಕರ ಮನವೊಲಿಕೆಯ ಕೊನೇ ಪ್ರಯತ್ನದಲ್ಲಿ ಶನಿವಾರ ನಿರತರಾಗಿದ್ದರು.

Advertisement

ಬೆಂಗಳೂರಿನ ನಾಲ್ವರು ಶಾಸಕರು ವಾಪಸ್‌ ಬಂದರೆ ಸರ್ಕಾರ ಸೇಫ್ ಆದಂತೆಯೇ ಎಂಬ ತೀರ್ಮಾನಕ್ಕೆ ಬಂದಿರುವ ದೋಸ್ತಿ ನಾಯಕರು ಅವರನ್ನು ವಾಪಸ್‌ ಕರೆಸುವ ಮಾರ್ಗೋಪಾಯಗಳ ಬಗ್ಗೆ ನಿರಂತರ ಸಮಾಲೋಚನೆ ಹಾಗೂ ರಹಸ್ಯ ಕಾರ್ಯತಂತ್ರಗಳಲ್ಲಿ ಮುಳುಗಿದ್ದರು.

ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ಹಿರಿಯ ಶಾಸಕ ರಾಮಲಿಂಗಾರೆಡ್ಡಿಯವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸುಮಾರು ಒಂದು ಗಂಟೆ ಕಾಲ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಹಾಜರಿದ್ದರು. ಮುಂಬೈ ಸೇರಿರುವ ಎಸ್‌.ಟಿ.ಸೋಮಶೇಖರ್‌, ಮುನಿರತ್ನ, ಬೈರತಿ ಬಸವರಾಜ್‌, ಗೋಪಾಲಯ್ಯ ಅವರನ್ನು ವಾಪಸ್‌ ಕರೆಸಿ, ನಿಮ್ಮ ಮಾತು ಕೇಳಬಹುದು ಎಂದು ದೇವೇಗೌಡರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಅತೃಪ್ತ ಶಾಸಕರ ಸಮಸ್ಯೆಗಳೇನೇ ಇದ್ದರೂ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಸೋಮವಾರದ ಅಧಿವೇಶನಕ್ಕೆ ಅವರು ಬರುವಂತೆ ಮಾಡಿ ಎಂದು ಕೇಳಿದರು ಎಂದು ಹೇಳಲಾಗಿದೆ.

ಆದರೆ, ರಾಮಲಿಂಗಾರೆಡ್ಡಿಯವರು, ಈಗ ನನಗೂ ಆ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ. ಆದರೂ ಪ್ರಯತ್ನಪಡುತ್ತೇನೆ ಎಂದಿದ್ದಾರೆ. ಸಾಧ್ಯವಾದರೆ, ರಾಮಲಿಂಗಾರೆಡ್ಡಿ ಅವರನ್ನು ಭಾನುವಾರ ಮುಂಬೈಗೆ ಕಳುಹಿಸುವ ಬಗ್ಗೆಯೂ ಕಾಂಗ್ರೆಸ್‌ ನಾಯಕರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸಹ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚರ್ಚಿಸಿದರು. ನಂತರ ಸಚಿವ ಡಿ.ಕೆ.ಶಿವಕುಮಾರ್‌ ಸಹ ಸಮಾಲೋಚನೆ ನಡೆಸಿದರು.

Advertisement

ಇತ್ತ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಶಾಸಕರು ಉಳಿದುಕೊಂಡಿರುವ ತಾಜ್‌ ವಿವಾಂತ ಹೋಟೆಲ್ಗೆ ಹೋಗಿ ಶಾಸಕರ ಜತೆ ಸಮಾಲೋಚನೆ ನಡೆಸಿದರು. ಜತೆಗೆ, ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರು.

ಇದರ ನಡುವೆ, ಶುಕ್ರವಾರ ಮಧ್ಯರಾತ್ರಿ ಸಚಿವ ಜಮೀರ್‌ ಆಹಮದ್‌ ಅವರು ಹೃದಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರನ್ನು ಭೇಟಿ ಮಾಡಿ ಸೋಮವಾರ ವಿಶ್ವಾಸಮತ ಸಂದರ್ಭದಲ್ಲಿ ಸದನಕ್ಕೆ ಆಗಮಿಸುವಂತೆ ಮನವಿ ಮಾಡಿದರು.

ಅಂತಿಮ ಲೆಕ್ಕಾಚಾರ: ಮುಂಬೈ ಸೇರಿರುವ ಹದಿನೈದು ಜನ ಶಾಸಕರನ್ನು ಹೇಗಾದರೂ ಮಾಡಿ ಸಂಪರ್ಕಿಸಿ ವಾಪಸ್‌ ಕರೆಸಬೇಕು. ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್‌ ಪಡೆದಿರುವುದರಿಂದ ಅವರ ಮೂಲಕ ಬೆಂಗಳೂರಿನ ಶಾಸಕರನ್ನು ವಾಪಸ್‌ ಕರೆಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ ನಾಯಕರದು.

ಈ ನಡುವೆ ರೆಸಾರ್ಟ್‌ನಿಂದ ಮತ್ತೆ ನಗರದಲ್ಲಿ ತಾಜ್‌ ವಿವಾಂತ್‌ ಹೊಟೇಲ್ಗೆ ಕಾಂಗ್ರೆಸ್‌ ಶಾಸಕರು ಸ್ಥಳಾಂತರಗೊಂಡಿದ್ದಾರೆ. ಬಹುತೇಕ ಶಾಸಕರು ಹೊಟೇಲ್ನಲ್ಲಿ ಉಳಿದುಕೊಳ್ಳಲು ಆಕ್ಷೇಪ ವ್ಯಕ್ತಪಡಿಸಿ, ಹೋಗುವವರು ಎಷ್ಟೇ ಕಾಯ್ದರೂ ಹೋಗುತ್ತಾರೆ. ನಾವ್ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಕಳೆದ ಹತ್ತು ದಿನಗಳಿಂದ ಕ್ಷೇತ್ರಗಳಿಗೆ ತೆರಳಿಲ್ಲ. ಕ್ಷೇತ್ರಕ್ಕೆ ಹೋಗಿ ಬರಲು ಅವಕಾಶ ನೀಡುವಂತೆ ಕೆಲವು ಶಾಸಕರು ಪಕ್ಷದ ನಾಯಕರಿಗೆ ಮನವಿ ಮಾಡಿಕೊಂಡು ತಮ್ಮ ಕ್ಷೇತ್ರಗಳಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 20 ರಿಂದ 25 ಕಾಂಗ್ರೆಸ್‌ ಶಾಸಕರು ಮಾತ್ರ ಹೊಟೇಲ್ನಲ್ಲಿ ಉಳಿದುಕೊಂಡಿದ್ದಾರೆ.

ಸುಪ್ರೀಂನತ್ತಲೂ ಕಾಂಗ್ರೆಸ್‌ ಕಣ್ಣು

ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆಗೆ ಸೋಮವಾರ ಅಂತಿಮ ದಿನವಾದರೂ, ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ರಾಜ್ಯಪಾಲರ ಹಸ್ತಕ್ಷೇಪದ ಅರ್ಜಿ ಹಾಗೂ ಶಾಸಕರ ವಿಪ್‌ ಉಲ್ಲಂಘನೆ ಅರ್ಜಿ ವಿಚಾರಣೆಯ ಮೇಲೆ ಕಾಂಗ್ರೆಸ್‌ ನಾಯಕರು ಕಣ್ಣಿಟ್ಟು ಕುಳಿತಿದ್ದಾರೆ. ಶನಿವಾರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಅವರ ನಿವಾಸ ಕಾವೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಅನೌಪಚಾರಿಕ ಸಭೆ ನಡೆಸಿ, ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸಲ್ಲಿಸಿರುವ ವಿಪ್‌ ಉಲ್ಲಂಘನೆ ಅರ್ಜಿ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಸಲ್ಲಿಸಿರುವ ರಾಜ್ಯಪಾಲರು ವಿಧಾನಸಭೆಯ ಕಾರ್ಯ ಕಲಾಪದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಲ್ಲಿಸಿರುವ ಅರ್ಜಿಗಳನ್ನು ಸೋಮವಾರ ಸುಪ್ರೀಂ ವಿಚಾರಣೆಗೆ ಕೈಗೆತ್ತಿಕೊಳ್ಳುವ ವಿಶ್ವಾಸದಲ್ಲಿ ಕಾಂಗ್ರೆಸ್‌ ನಾಯಕರಿದ್ದಾರೆ.

ಬಿಜೆಪಿ ಕಾರ್ಯತಂತ್ರ

ಅತೃಪ್ತ ಶಾಸಕರು ಕಾಂಗ್ರೆಸ್‌ ನಾಯಕರ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳುವುದು ಹಾಗೂ ರಿವರ್ಸ್‌ ಆಪರೇಷನ್‌ ಆಗದಂತೆ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ನಾಯಕರು ಕಾರ್ಯತಂತ್ರ ರೂಪಿಸಿದ್ದಾರೆ. ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಶನಿವಾರವೂ ಬಿಜೆಪಿ ಶಾಸಕರು ಉಳಿದುಕೊಂಡಿರುವ ರೆಸಾರ್ಟ್‌ಗೆ ಭೇಟಿ ನೀಡಿದ್ದರು. ಸೋಮವಾರ ವಿಶ್ವಾಸಮತ ಸಾಬೀತು ಮಾಡುವುದಾಗಿ ಖುದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದರಿಂದ ಅಲ್ಲಿಯವರೆಗೆ ಕಾದು ನೋಡಲು ಬಿಜೆಪಿ ತೀರ್ಮಾನಿಸಿದೆ.

ಅರ್ಜೆಂಟ್ ಏಕಿಲ್ಲ?

ಕಾಂಗ್ರೆಸ್‌ ನಾಯಕರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೂ, ತಕ್ಷಣವೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂಬ ಒತ್ತಡವನ್ನೇನು ಮಾಡದಿರುವುದು ಕುತೂಹಲ ಮೂಡಿಸಿದೆ. 2018 ರಲ್ಲಿ ಬಿಜೆಪಿಗೆ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಹದಿನೈದು ದಿನ ಬಹುಮತ ಸಾಬೀತಿಗೆ ಅವಕಾಶ ಕೊಟ್ಟಿದ್ದನ್ನು ವಿರೋಧಿಸಿ ರಾತ್ರೋರಾತ್ರಿ ಸುಪ್ರೀಂಕೋರ್ಟ್‌ ಕದ ತಟ್ಟಿ 24 ಗಂಟೆಗಳಲ್ಲಿ ವಿಶ್ವಾಸಮತ ಪಡೆಯಬೇಕು ಎಂಬ ತೀರ್ಪು ಪಡೆದು ಬಂದಿದ್ದರು. ಆದರೆ, ಈಗ ಸುಪ್ರೀಂಗೆ ಅರ್ಜಿ ಸಲ್ಲಿಸಿ ಏನಾಗುವುದೋ ಕಾದು ನೋಡೋಣ ಎಂದು ಸುಮ್ಮನಿದ್ದಾರೆ ಎಂದು ಮಾತುಗಳು ಕೇಳಿಬರುತ್ತಿವೆ. ಇದರ ನಡುವೆ ಸೋಮವಾರ ಸಂಜೆಯವರೆಗೂ ಸುಪ್ರೀಂ ಕೋರ್ಟ್‌ ವಿಚಾರಣೆಯ ನೆಪದಲ್ಲಿ ವಿಧಾನಸಭೆಯ ಕಲಾಪವನ್ನು ಸಂಜೆವರೆಗೂ ಕಾಲಹರಣ ಮಾಡುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ನನಗೆ ಉಪ ಮುಖ್ಯಮಂತ್ರಿ ಹುದ್ದೆ ಬೇಡ. ದೇವೇಗೌಡರ ಜತೆಯಲ್ಲಿ ಆ ಬಗ್ಗೆ ಚರ್ಚೆಯೂ ಆಗಿಲ್ಲ. ಅತೃಪ್ತರು ನನ್ನ ಸಂಪರ್ಕಕ್ಕೆ ಸಿಗ್ತಿಲ್ಲ. ನಾವು ಒಟ್ಟಾಗಿ ರಾಜೀನಾಮೆ ಕೊಟ್ಟಿದ್ದು ನಿಜ. ಆದರೆ, ನಮ್ಮ ನಾಯಕರ ಒತ್ತಡ , ಜನರ ಒತ್ತಡದಿಂದ ರಾಜೀನಾಮೆ ವಾಪಸ್‌ ಪಡೆದೆ. ಎಸ್‌.ಟಿ. ಸೋಮಶೇಖರ್‌ ಹೇಳಿದ್ದು ನಿಜ, ಎಂಟಿಬಿ ನಾಗರಾಜ್‌ ಹೇಳಿಕೆಗೂ ನನಗೂ ಸಂಬಂಧವಿಲ್ಲ.
-ರಾಮಲಿಂಗಾರೆಡ್ಡಿ, ಕಾಂಗ್ರೆಸ್‌ ನಾಯಕ

ಸೋಮವಾರ ವಿಶ್ವಾಸ ಮತಯಾಚನೆ ಇದೆ. ಸರ್ಕಾರಕ್ಕೆ ವಿಶ್ವಾಸವಿದ್ದ ಕಾರಣಕ್ಕೆ ವಿಶ್ವಾಸ ಮತ ಯಾಚನೆ ಮಾಡಿದ್ದೇವೆ. ಬಿಜೆಪಿಯವರು ಯಾಕೆ ಖುಷಿಪಡುತ್ತಾರೋ ಗೊತಿಲ್ಲ. ಅಧಿಕಾರ ಇದ್ದರೂ ಕೆಲಸ ಮಾಡಬೇಕು. ಅಧಿಕಾರ ಹೋದರೂ ಕೆಲಸ ಮಾಡಬೇಕು.
-ಯು.ಟಿ. ಖಾದರ್‌, ನಗರಾಭಿವೃದ್ಧಿ ಸಚಿವ
Advertisement

Udayavani is now on Telegram. Click here to join our channel and stay updated with the latest news.

Next