ಪಿರಿಯಾಪಟ್ಟಣ: ಜಾತ್ಯಾತೀತೆ ಉಳಿಸಿ ಸಂವಿಧಾನ ಉಳಿಸಿ ಎಂಬ ಜನಾಂದೋಲನ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ವಿಧಾನಪರಿಷತ್ತು ಸದಸ್ಯ ಹಾಗೂ ಕಾಯಕ ಸಮಾಜಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಕೆ.ಸಿ.ಪುಟ್ಟಸಿದ್ದಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಉಪ್ಪಾರ, ವಿಶ್ವಕರ್ಮ, ಕುಂಬಾರ, ಗಾಣಿಗ, ಮಡಿವಾಳ, ತೆಲುಗು ಬಣಜಿಗ, ಕೊರಮಶೆಟ್ಟಿ, ಈಡಿಗ, ಹೀಗೆ ಅನೇಕ ತಳ ಸಮುದಾಯಗಳು ಸಂಘಟನೆಯಿಲ್ಲದೆ ಅಭಿವೃದ್ಧಿ ಹೊಂದಿಲ್ಲ. ಇಂತಹ ಸಮಾಜವನ್ನು ಬಲಿಷ್ಠವಾಗಿಸುವ ಮತ್ತು ರಾಜಕೀಯ ಶಕ್ತಿ ನೀಡುವ ಸಲುವಾಗಿ ಕಾಯಕ ಸಮುದಾಯಗಳ ಒಕ್ಕೂಟವನ್ನು ರಚಿಸಿಕೊಂಡಿದ್ದು ನಮ್ಮೊಂದಿಗೆ ನೀವು ನಿಮ್ಮೊಂದಿಗೆ ನಾವು ಎಂಬ ಘೋಷವಾಕ್ಯವನ್ನು ಸಂಘಟನೆಯು ಹೊಂದಿದೆ ಎಂದರು.
ಈ ಮೂಲಕ ಜೂ.19ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಜಾತ್ಯಾತೀತೆ ಉಳಿಸಿ ಸಂವಿಧಾನ ಉಳಿಸಿ ಎಂಬ ಜನಾಂದೋಲನ ಚಳವಳಿ ಹಮ್ಮಿಕೊಂಡಿದ್ದು ಇದರ ನೇತೃತ್ವವನ್ನು ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮತ್ತು ಹಿರಿಯ ಸಾಹಿತಿ ದೇವನೂರು ಮಹದೇವ ವಹಿಸಲಿದ್ಧಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅವಕಾಶಗಳಿಂದ ವಂಚಿತವಾಗುತ್ತಿರುವ ಸಮುದಾಯಗಳಿಗೆ ಜನಸಂಖ್ಯೆಯ ಆಧಾರದ ಮೇಲೆ ಒಳಮೀಸಲಾತಿಯನ್ನು ಜಾರಿಗೆ ತಂದು ಸ್ಥಾನಮಾನ ಕಲ್ಪಿಸಬೇಕು ಹಾಗೂ ಕಾಯಕ ಯೋಗಿಗಳು ಮಾಡುತ್ತಿರುವ ಕುಲಕಸುಬುಗಳಿಗೆ ಮಾರುಕಟ್ಟೆಯನ್ನು ಒದಗಿಸಬೇಕು ಮತ್ತು ಇಂತಹ ಕಾಯಕ ಮಾಡುವರರಿಗೆ ಮಾಸಿಕ ವೇತನ ನಿಗದಿಪಡಿಸಬೇಕು.
ಅಲ್ಲದೆ ಗೃಹ ಕೈಗಾರಿಕೆಗಳಿಗೆ ಶೇ.100 ರಷ್ಟು ಸಹಾಯಧನ ನೀಡಬೇಕು ಪ್ರತಿ ತಾಲೂಕುಗಳಲ್ಲಿ ಕೌಸಲ್ಯ ಅಭಿವೃದ್ಧಿ ತರಬೇತಿ ಕೇಂದ್ರವನ್ನು ಸ್ಥಾಪಿಸಬೇಕು. ಹಿಂದುಳಿದ ವರ್ಗಗಳ ಆಯೋಗದ ವರದಿ ಶೀಘ್ರದಲ್ಲೇ ಬಹಿರಂಗ ಪಡಿಸಬೇಕು ಮತ್ತು ಈ ಸಮಾಜದ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯಕಧನ ನೀಡಬೇಕು ಹೀಗೆ ಅನೇಕ ಹಕ್ಕೊತ್ತಾಯಗಳ ಮನವಿಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
ದಲಿತ ಮುಖಂಡ ಅಣ್ಣಯ್ಯ, ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಪ್ರಧಾನಕಾರ್ಯದರ್ಶಿ ಬೋರಪ್ಪಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಟ್ಟಣ್ಣಯ್ಯಚಾರ್, ಸಹಕಾರ್ಯದರ್ಶಿ ಲೋಕೇಶ್, ನಿರ್ದೇಶಕರಾದ ಗೋವಿಂದಶೆಟ್ಟಿ, ಲಕ್ಷ್ಮಣ್, ವೃಷಭೇಂದ್ರಪ್ಪ, ಈರಣ್ಣಯ್ಯ, ಚಂದ್ರು, ಹರೀಶ್, ನಿಶಾಂತ್ ಇತರರು ಇದ್ದರು.