Advertisement

ನಾಳೆ ವಿನೋಬ ನಗರ ಗಣೇಶ ವಿಸರ್ಜನೆ

10:41 AM Sep 20, 2018 | Team Udayavani |

ದಾವಣಗೆರೆ: ಶುಕ್ರವಾರ ವಿನೋಬ ನಗರ 2ನೇ ಮುಖ್ಯ ರಸ್ತೆಯ ಶ್ರೀ ವೀರ ವರಸಿದ್ಧಿ ವಿನಾಯಕ ಮೂರ್ತಿ ವಿಸರ್ಜನಾ
ಕಾರ್ಯ ಶಾಂತಿಯುತವಾಗಿ ನೆರವೇರಲು ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ
ಆರ್‌. ಚೇತನ್‌ ತಿಳಿಸಿದ್ದಾರೆ. 

Advertisement

ವಿನಾಯಕ ಮೂರ್ತಿ ವಿಸರ್ಜನಾ ಕಾರ್ಯಕ್ರಮದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ
ಆಗದಂತೆ ಮತ್ತು ಶಾಂತಿಯುತವಾಗಿ ನಡೆಯುವಂತಾಗಲು ಹೆಚ್ಚಿನ ಸಿಬ್ಬಂದಿ ನಿಯೋಜನೆ, ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಒಳಗೊಂಡಂತೆ ಎಲ್ಲ ರೀತಿಯ ಅಗತ್ಯ ಭದ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆಯ ಬಂದೋಬಸ್ತ್ಗೆ ನಾಲ್ವರು ಡಿಎಸ್ಪಿ, 10 ಮಂದಿ ವೃತ್ತ ನಿರೀಕ್ಷಕರು, 30
ಪಿಎಸ್‌ಐ, 250 ಹೋಂ ಗಾರ್ಡ್ಸ್‌ ಜೊತೆಗೆ 75 ಜನ ಪ್ರೊಬೇಷನರಿ ಎಸ್‌ಐ, ಜಿಲ್ಲಾ ಸಶಸ್ತ್ರ ಮೀಸಲು 8 ಪಡೆ,
4 ಕೆಎಸ್‌ಆರ್‌ಪಿ ಪ್ಲಾಟೂನ್‌ ನಿಯೋಜಿಸಲಾಗಿದೆ.
 
ಅಂದು ದಾವಣಗೆರೆ ನಗರ ಮಾತ್ರವಲ್ಲ, ತಾಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಕುಡಿದು
ಮೆರವಣಿಗೆಯಲ್ಲಿ ಭಾಗವಹಿಸಿ ಅಶ್ಲೀಲ ವರ್ತನೆ, ಕಿರಿಕಿರಿ ಉಂಟು ಮಾಡುವರ ಬಗ್ಗೆ ನಿಗಾವಹಿಸುವುದಕ್ಕಾಗಿಯೇ
ವಿಶೇಷ ತಂಡ ರಚಿಸಲಾಗಿದೆ. ಅಂತಹ ವರ್ತನೆ ಕಂಡು ಬಂದ ತಕ್ಷಣಕ್ಕೆ ವಶಕ್ಕೆ ಪಡೆಯುವ ಜೊತೆಗೆ ಕಾನೂನು ಕ್ರಮ
ತೆಗೆದುಕೊಳ್ಳಲಾಗುವುದು. ಗಣೇಶೋತ್ಸವ ಸೇವಾ ಸಮಿತಿಯವರು ಸಹ ಸ್ವಯಂ ಸೇವಕರನ್ನು ನಿಯೋಜಿಸುವ ಜೊತೆಗೆ ಅಂತಹವರ ವಿರುದ್ಧ ಕ್ರಮಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ ಎಂದರು.

ಮೆರವಣಿಗೆ ಸಾಗುವ ಮಾರ್ಗದಲ್ಲಿ ಹೆಚ್ಚುವರಿಯಾಗಿ 175 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮೆರವಣಿಗೆಯಲ್ಲಿ
ಭಾಗವಹಿಸಲಿಕ್ಕೆ ಆಗಮಿಸುವಂತಹವರ ವಾಹನಗಳಿಗೆ ಹಳೆ ಪಿಬಿ ರಸ್ತೆಯ ತೋಟಗಾರಿಕಾ ಇಲಾಖೆ ಎದುರು ಇರುವ ಖಾಲಿ ಜಾಗ,  ನರಹರಶೇಠ್… ಸಭಾಭವನದ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆಯಾಗಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ, ಕಾರ್ಯಕ್ರಮ ಶಾಂತಯುತವಾಗಿ ನಡೆಯುವಂತಾಗಲು ಎಲ್ಲ ರೀತಿಯ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.

ಗಣೇಶ ಹಬ್ಬದ ಒಂದೂವರೆ ತಿಂಗಳ ಮುನ್ನವೇ 2011 ರಿಂದ ಈಚೆಗೆ ಕೋಮು ಗಲಭೆ ಇತರೆ ಚಟುವಟಿಕೆಗೆ ಸಂಬಂಧಿಸಿದಂತೆ ದೂರು ದಾಖಲಾದಂತಹ 70-80 ಜನರ ಪೆರೇಡ್‌ ನಡೆಸಿ, ಎಚ್ಚರಿಕೆ ನೀಡಲಾಗಿದೆ. ಮೆರವಣಿಗೆಯಲ್ಲಿ 4 ಸೌಂಡ್‌ ಬಾಕ್ಸ್‌ಗೆ ಅನುಮತಿ ನೀಡಲಾಗಿದೆ. ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಗರ ಪೊಲೀಸ್‌ ಉಪಾಧೀಕ್ಷಕ ಎಂ. ಬಾಬು, ಕೇಂದ್ರ ವೃತ್ತ ನಿರೀಕ್ಷಕ ಇ. ಆನಂದ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next