Advertisement

ನಾಳೆಯಿಂದ ಎಸೆಸೆಲ್ಸಿ ಪರೀಕ್ಷೆ: ನಿರಾತಂಕವಾಗಿ ಪರೀಕ್ಷೆ ಬರೆಯಿರಿ; ಸಚಿವರಿಂದ ಪತ್ರ

12:07 AM Mar 27, 2022 | Team Udayavani |

ಪ್ರೀತಿಯ ವಿದ್ಯಾರ್ಥಿಗಳೇ,
ಹತ್ತನೇ ತರಗತಿ ಪರೀಕ್ಷೆಯು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವ ನದ ಪ್ರಮುಖ ಘಟ್ಟ. ಭವಿಷ್ಯದ ವೃತ್ತಿ ಜೀವನಕ್ಕೂ ಇದು ಮೆಟ್ಟಿಲಾಗುತ್ತದೆ. ಶ್ರದ್ಧೆಯಿಂದ ಓದಿ ಬರೆದರೆ ಯಶಸ್ಸು ಖಚಿತ.

Advertisement

ಪರೀಕ್ಷೆಗೆ ಹಾಜರಾಗುವ ಮಕ್ಕಳು ಮೊದಲು ಅರಿತು ಕೊಳ್ಳಬೇಕಿರುವ ಸಂಗತಿ ಎಂದರೆ, ಪರೀಕ್ಷೆ ಕುರಿತು ಯಾವುದೇ ಭಯ, ಆತಂಕ ಪಡದಿರುವುದು. ಭಯ, ಆತಂಕ ಇದ್ದರೆ ಉತ್ತಮವಾಗಿ ಬರೆಯಲು ಆಗುವುದಿಲ್ಲ. ಅದೇ ರೀತಿ ಪರೀಕ್ಷೆಯನ್ನು ಅತ್ಯಂತ ಲಘುವಾಗಿ ತೆಗೆದುಕೊಂಡರೂ ಯಶಸ್ಸು ದೊರೆಯದು. ಹೀಗಾಗಿ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಸಿದ್ಧತೆ ಮಾಡಿಕೊಂಡು ಶಾಂತ ಚಿತ್ತದಿಂದ ಎದುರಿಸಿ ಗುರಿ ತಲುಪುವ ದೃಢ ನಿರ್ಧಾರ ಮಾಡಿಕೊಳ್ಳಬೇಕು. ಇದು ನಿಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ.

ಕೊರೊನಾ ಕಾರಣ ಹಿಂದಿನ ಎರಡು ವರ್ಷಗಳಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನು ಸರಳಗೊಳಿಸಲಾಗಿತ್ತು. ಈ ಬಾರಿಯ ಪರೀಕ್ಷೆ ಕಷ್ಟ ಎನಿಸುವುದಿಲ್ಲ. ಆದರೆ, ಹಿಂದಿನ 2 ವರ್ಷಗಳ ಪರೀಕ್ಷೆಗಳಂತೆ ಸರಳವಾಗಿಯೂ ಇರುವುದಿಲ್ಲ. ಹೀಗಾಗಿ, ಚೆನ್ನಾಗಿ ಓದಬೇಕು. ಓದಿದ್ದನ್ನು ಬರೆದು ಅಭ್ಯಾಸ ಮಾಡಬೇಕು. ಈಗಾಗಲೇ ಎಸೆಸೆಲ್ಸಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಗಿದೆ. ಪತ್ರಿಕೆಗಳನ್ನು ನೋಡಿ ಪರೀಕ್ಷೆ ಕುರಿತು ಸ್ಪಷ್ಟ ಚಿತ್ರಣ ಪಡೆದುಕೊಂಡು ಪರೀಕ್ಷೆಗೆ ಸಿದ್ಧರಾಗಿರುವಿರಿ ಎಂದು ಭಾವಿಸಿದ್ದೇನೆ.

ಪ್ರಶ್ನೆಗಳಿಗೆ ದೀರ್ಘ‌ವಾದ ಉತ್ತರ ಬರೆದರೆ ಹೆಚ್ಚು ಅಂಕ ಸಿಗುತ್ತವೆ ಎಂದು ಭಾವಿಸುವ ಮಕ್ಕಳಿದ್ದಾರೆ. ಆದರೆ, ಪ್ರಶ್ನೆಗಳಿಗೆ ನಿಖರವಾದ ಉತ್ತರ ಇರಬೇಕು. ಉತ್ತರಗಳನ್ನು ಸಮರ್ಥ ರೀತಿಯಲ್ಲಿ ಬರೆಯಲು ಇದೊಂದು ಅತ್ಯುತ್ತಮ ಕ್ರಮ.

ನಿಗದಿತ ಪತ್ರಿಕೆಯ ಪರೀಕ್ಷೆ ಇರುವ ಕೆಲವು ತಾಸುಗಳ ಮೊದಲು ಓದಿದ್ದನ್ನು ಪುನರ್‌ಮನನ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಆದರೆ, ಗೊಂದಲಕ್ಕೆ ಒಳಗಾಗಬಾರದು. ಸಣ್ಣ ಸಣ್ಣ ವಿಚಾರಗಳನ್ನೂ ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪುವುದು, ಪ್ರವೇಶಪತ್ರ, ಪೆನ್‌ ಸಹಿತ ಅಗತ್ಯ ವಸ್ತುಗಳನ್ನು ತಪ್ಪದೇ ಇಟ್ಟುಕೊಂಡಿರಬೇಕು. ಕೊನೇ ಹಂತದ ಸಿದ್ಧತೆಗಳು ಮಾಡಿಕೊಳ್ಳಲು ಹೋಗಿ ಗಡಿಬಿಡಿ ಉಂಟಾದರೆ ಪರೀಕ್ಷೆ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಹೀಗಾಗಿ, ಪರೀಕ್ಷೆಯ ಸಾಮಾನ್ಯ ಪೂರ್ವಸಿದ್ಧತೆಗಳ ಬಗ್ಗೆ ಎಚ್ಚರ ಇರಲಿ.

Advertisement

ಪ್ರಶ್ನೆ ಪತ್ರಿಕೆ ಓದಿಕೊಳ್ಳಲು 15 ನಿಮಿಷ ಸಮಯಾವಕಾಶ ಇರುತ್ತದೆ. ಪ್ರಶ್ನೆಗಳನ್ನು ಸರಿಯಾಗಿ ಓದಿ, ಅರ್ಥ ಮಾಡಿಕೊಂಡು ಉತ್ತರ ಬರೆಯಿರಿ. ಪರೀಕ್ಷಾ ಕೊಠಡಿಯ ಪ್ರತಿ ನಿಮಿಷವೂ ಅತ್ಯಮೂಲ್ಯ. ಹೀಗಾಗಿ, ಅದನ್ನು ಸದುಪಯೋಗ ಮಾಡಿಕೊಳ್ಳಬೇಕು.

ಪರೀಕ್ಷೆಗಳು ಶೈಕ್ಷಣಿಕ ಜೀವನದ ಮಹತ್ವದ ಘಟ್ಟವೇ ಆಗಿದ್ದರೂ ಪರೀಕ್ಷೆಗಳಲ್ಲಿ ಗಳಿಸುವ ಗ್ರೇಡ್‌/ ರ್‍ಯಾಂಕಿಂಗ್‌ನಿಂದಲೇ ಎಲ್ಲವೂ ನಿರ್ಧಾರವಾಗುವುದಿಲ್ಲ. ಪರೀಕ್ಷೆಯಲ್ಲಿ ಗಳಿಸುವ ಅಂಕ, ಗ್ರೇಡ್‌ಗಳನ್ನು ಹೊರತಾದ ವಿಶಾಲವಾದ ಅವಕಾಶಗಳ ಜಗತ್ತು ನಿಮಗಿದೆ. ಹೀಗಾಗಿ, ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ. ಪರೀಕ್ಷೆ ಬರೆಯುತ್ತಿರುವ ಎಲ್ಲ ಮಕ್ಕಳಿಗೂ ಶುಭ ಹಾರೈಸುತ್ತೇನೆ.
– ಬಿ.ಸಿ.ನಾಗೇಶ್‌, ಶಿಕ್ಷಣ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next