Advertisement

ಕಲಬುರಗಿ: ಕರ್ತವ್ಯಕ್ಕೆ ಹಾಜರಾದ ಸಾರಿಗೆ ನೌಕರರಿಗೆ ನಾಳೆಯೇ ಸಂಬಳ!

08:28 PM Apr 11, 2021 | Team Udayavani |

ಕಲಬುರಗಿ: ಮುಷ್ಕರದ ನಡುವೆಯೂ ಕರ್ತವ್ಯಕ್ಕೆ ಹಾಜರಾದ ಸಾರಿಗೆ ಸಿಬ್ಬಂದಿಗೆ ನಾಳೆಯೇ (ಸೋಮವಾರ) ಮಾರ್ಚ್ ತಿಂಗಳ ಸಂಬಳ ಪಾವತಿಸಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆದೇಶಿಸಿದೆ.

Advertisement

ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಲಾಗಿತ್ತು. ಇದರ ನಡುವೆಯೂ ಕರ್ತವ್ಯ ನಿಭಾಯಿಸಿ ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವಲ್ಲಿ ಬದ್ದತೆ ತೋರಿದ ಸಂಸ್ಥೆಯ ಸಿಬ್ಬಂದಿಗೆ ಮೊದಲ ಹಂತದಲ್ಲಿ ವೇತನವನ್ನು ಪಾವತಿಸಲಾಗುವು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮಾರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ, ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಸಿಬ್ಬಂದಿ ಮುಷ್ಕರಕ್ಕೆ ಪ್ರಚೋದನೆ ನೀಡುವುದು ಮತ್ತು ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಅಡ್ಡಿಪಡಿಸುತ್ತಿರುವವರ ವಿರುದ್ಧ ಈಗಾಗಲೇ ಕೊಪ್ಪಳ ಹಾಗೂ ಕಲಬುರಗಿ ವಿಭಾಗಗಳಲ್ಲಿ ಪೊಲೀಸ್ ಪ್ರಕರಣ ಕೂಡ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಈಶಾನ್ಯ ಸಾರಿಗೆ ಸಿಬ್ಬಂದಿಗೆ ಅನುಕೂಲವಾಗುವಂತೆ ಕರ್ತವ್ಯದ ಸ್ಥಳಗಳಲ್ಲೇ ಕೋವಿಡ್ ವ್ಯಾಕ್ಸಿನೇಷನ್ ಹಾಕುವ ವ್ಯವಸ್ಥೆ ಕಲ್ಪಿಸಲಾಗಿದೆ. ಮುಷ್ಕರದ ಮಧ್ಯೆಯೂ ಐದನೇ ದಿನವಾದ ರವಿವಾರ 451 ಬಸ್‌ಗಳು ಸಂಚರಿಸಿವೆ. ಇದು ಈಶಾನ್ಯ ಸಾರಿಗೆಯ ಶೇ.18ರಷ್ಟು ಕಾರ್ಯಾಚರಣೆಯಾಗಿದೆ. ನೌಕರರ ಮನವೊಲಿಸಿ ಹೊಸಪೇಟೆ ವಿಭಾಗದ ಹಡಗಲಿ ಘಟಕದಲ್ಲಿ ಶೇ.90ರಷ್ಟು, ಹಗರಿಬೊಮ್ಮನಹಳ್ಳಿ ಘಟಕದಲ್ಲಿ ಶೇ.62ರಷ್ಟು ಬಸ್ ಗಳು ರಸ್ತೆಗಿಳಿದಿವೆ. ಹೊಸಪೇಟೆ ವಿಭಾಗದ ಒಟ್ಟು 6 ಘಟಕಗಳಿಂದ ಒಟ್ಟು ಶೇ.56ರಷ್ಟು ಕಾರ್ಯಾಚರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬಳ್ಳಾರಿ ವಿಭಾಗದ ಬಳ್ಳಾರಿ ಘಟಕ-1ರಲ್ಲಿ ಶೇ.53ರಷ್ಟು ಕಾರ್ಯಾಚರಣೆ ಮಾಡಲಾಗಿದೆ. ಹಾಗೆ ಎಲ್ಲ ವಿಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಸ್ವಇಚ್ಛೆಯಿಂದ ಕರ್ತವ್ಯಕ್ಕೆ ಹಾಜರಾಗುತ್ತಿರುವುದರಿಂದ ಸೋಮವಾರದಿಂದಲೇ ಹೆಚ್ಚಿನ ಕಾರ್ಯಾಚರಣೆ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next