Advertisement

ನಾಳೆಯಿಂದ ಬದಲಾವಣೆಯ ಪರ್ವ: ಏನೇನು ಬದಲಾವಣೆ? ಇಲ್ಲಿದೆ ವಿವರ

12:27 AM Mar 31, 2023 | Team Udayavani |

ನಾಳೆ ಎಪ್ರಿಲ್‌ 1ರಿಂದ ಅಂದರೆ ಶನಿವಾರದಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದೆ. ಫೆ.1ರ ಬಜೆಟ್‌ನಲ್ಲಿ ಕೇಂದ್ರ ಸರಕಾರ ಘೋಷಿಸಿರುವ ಆದಾಯ ತೆರಿಗೆ ಸಹಿತ ಹಲವು ನಿಯಮಗಳು ಹೊಸ ವಿತ್ತ ವರ್ಷದಿಂದ ಜಾರಿಯಾಗಲಿವೆ. ಇವುಗಳು ದೇಶವಾಸಿಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರಲಿವೆ. ನಾಳೆಯಿಂದ ಜಾರಿಯಾಗಲಿರುವ ನಿಯಮಗಳು ಇಂತಿವೆ

Advertisement

ಹೊಸ ತೆರಿಗೆ ಪದ್ಧತಿ
ಹೊಸ ಹಣಕಾಸು ವರ್ಷದಿಂದ ತೆರಿಗೆ ರಿಟರ್ನ್ಸ್ ಸಲ್ಲಿಕೆ ವೇಳೆ ಹೊಸ ತೆರಿಗೆ ಪದ್ಧತಿಯೇ “ಡಿಫಾಲ್ಟ್’ ಆಗಿ ಕಾಣಿಸಿಕೊಳ್ಳಲಿದೆ. ಆದರೆ ಹೊಸ ತೆರಿಗೆ ಪದ್ಧತಿ ಬೇಡ ಎಂದವರು, ಹಳೆಯದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇರಲಿದೆ.

ವಿನಾಯಿತಿ ಮಿತಿ ಹೆಚ್ಚಳ
ಬಜೆಟ್‌ನಲ್ಲಿ ಘೋಷಿಸಿರುವಂತೆ ಎ.1ರಿಂದ ತೆರಿಗೆ ರಿಬೇಟ್‌ ಮಿತಿ ಹೆಚ್ಚಳವಾಗಲಿದೆ. ಈಗ ಇರುವ 5 ಲಕ್ಷ ರೂ.ಗಳಿಂದ 7 ಲಕ್ಷ ರೂ.ಗೆ ಏರಿಕೆಯಾಗಲಿದೆ. ಅಂದರೆ ವರ್ಷಕ್ಕೆ 7 ಲಕ್ಷ ರೂ.ಗಿಂತ ಕಡಿಮೆ ವೇತನ ಇರುವ ವ್ಯಕ್ತಿಯು, ತೆರಿಗೆ ವಿನಾಯಿತಿ ಪಡೆಯಲು ಹೂಡಿಕೆಗಳ ಮೊರೆ ಹೋಗಬೇಕಾಗಿಲ್ಲ.

ಸ್ಟಾಂಡರ್ಡ್‌ ಡಿಡಕ್ಷನ್‌
ಹಳೆಯ ತೆರಿಗೆ ಪದ್ಧತಿಯಲ್ಲಿದ್ದ 50 ಸಾವಿರ ರೂ.ಗಳ ಸ್ಟಾಂಡರ್ಡ್‌ ಡಿಡಕ್ಷನ್‌ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಆದರೆ ಈ ಸೌಲಭ್ಯವನ್ನು ಹೊಸ ತೆರಿಗೆ ಪದ್ಧತಿಗೂ ವಿಸ್ತರಿಸಲಾಗಿದೆ. ವಾರ್ಷಿಕ 5.15 ಲಕ್ಷ ರೂ.ಗಿಂತ ಹೆಚ್ಚು ವೇತನ ಪಡೆಯುವ ವ್ಯಕ್ತಿಗೆ 52,500 ರೂ. ಉಳಿತಾಯವಾಗಲಿದೆ.

ಹಿರಿಯ ನಾಗರಿಕರಿಗೆ ಅನುಕೂಲ
ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಇದ್ದ ಗರಿಷ್ಠ ಠೇವಣಿ ಮಿತಿಯನ್ನು (ಮಾಸಿಕ ಆದಾಯ ಯೋಜನೆ) 15 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗೆ, 4.5 ಲಕ್ಷ ರೂ.ಗಳಿಂದ 9 ಲಕ್ಷ ರೂ.ಗೆ ಮತ್ತು 7.5 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗೆ ಏರಿಕೆ ಇದೇ ಶನಿವಾರದಿಂದ ಅನ್ವಯವಾಗಲಿದೆ.

Advertisement

ಯುಪಿಐ ಪಾವತಿಗೆ ವಿನಿಮಯ ಶುಲ್ಕ
ಎ.1ರಿಂದ ವ್ಯಾಲೆಟ್‌ ಸಹಿತ ಪ್ರೀಪೇಯ್ಡ ವ್ಯವಸ್ಥೆಯ ಮೂಲಕ ಮಾಡಲಾಗುವ ಕೆಲವು ನಿರ್ದಿಷ್ಟ ಮರ್ಚೆಂಟ್‌ ಪಾವತಿಗಳ ಮೇಲೆ ಶೇ.1.1ರಷ್ಟು ಶುಲ್ಕ ವಿಧಿಸಲಾಗುತ್ತದೆ. 2 ಸಾವಿರ ರೂ.ಗಳಿಗಿಂತ ಹೆಚ್ಚಿನ ಪಾವತಿಗೆ ಮಾತ್ರ ಇದು ಅನ್ವಯ. ಆದರೆ ಗ್ರಾಹಕರ ಮೇಲೆ ಅಥವಾ ವ್ಯಕ್ತಿಯಿಂದ ವ್ಯಕ್ತಿಗೆ, ವ್ಯಕ್ತಿಯಿಂದ ಬ್ಯಾಂಕ್‌ಗೆ ಆಗುವ ವಹಿವಾಟಿಗೆ ಯಾವುದೇ ಶುಲ್ಕವಿರುವುದಿಲ್ಲ. ಉದಾ- ನೀವು ಮಾಲ್‌ಗೆ ಹೋಗಿ ಪೇಟಿಎಂ, ಫೋನ್‌ಪೇ, ಅಮೆಜಾನ್‌ ಪೇ, ಮೊಬಿಕ್ವಿಕ್‌, ಸೋಡೆಕ್ಸ್‌ ವೋಚರ್‌ ಮುಂತಾದ ವ್ಯಾಲೆಟ್‌ಗಳ ಮೂಲಕ 2 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸುತ್ತೀರಿ. ಆಗ ಆ ಮಾಲ್‌ನವರು (ವ್ಯಾಪಾರಿ) ಪಾವತಿ ಸೇವಾದಾರರಿಗೆ(ಫೋನ್‌ಪೇ, ಅಮೆಜಾನ್‌ ಪೇ ಇತ್ಯಾದಿ) ವಿನಿಮಯ ಶುಲ್ಕವೆಂದು ಶೇ.1.1ರಷ್ಟನ್ನು ಪಾವತಿಸಬೇಕಾಗುತ್ತದೆ.

ಚಿನ್ನದ ಪರಿವರ್ತನೆ
ಇನ್ನು ಮುಂದೆ ಭೌತಿಕ ಚಿನ್ನವನ್ನು ಎಲೆಕ್ಟ್ರಾನಿಕ್‌ ಚಿನ್ನದ ರಸೀದಿ(ಇಜಿಆರ್‌) ಆಗಿ ಪರಿವರ್ತಿಸಿದರೆ ಅದರಿಂದ ಬರುವ ಲಾಭಕ್ಕೆ ತೆರಿಗೆ ಇರುವುದಿಲ್ಲ.

ಮ್ಯೂಚುವಲ್‌ ಫ‌ಂಡ್‌
ಡೆಟ್‌ ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹೂಡಿಕೆ ಮಾಡಿದವರಿಗೆ ಅಲ್ಪಾವಧಿ ಬಂಡವಾಳ ಹೂಡಿಕೆಯಲ್ಲಿನ ಲಾಭದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಜತೆಗೆ ದೀರ್ಘಾವಧಿ ಹೂಡಿಕೆಯಲ್ಲಿ ಸಿಗುತ್ತಿದ್ದ ತೆರಿಗೆ ವಿನಾಯಿತಿಯ ಲಾಭವೂ ಇನ್ನು ಸಿಗುವುದಿಲ್ಲ. ಯುಡಿಐಡಿ ಕಡ್ಡಾಯ ಇನ್ನು ಮುಂದೆ ಸರಕಾರದ ವಿವಿಧ ಯೋಜನೆಗಳ ಲಾಭ ಪಡೆಯಬೇಕೆಂದರೆ ದಿವ್ಯಾಂಗರು ವಿಶೇಷ ಗುರುತಿನ ಚೀಟಿ(ಯುಡಿಐಡಿ) ಹೊಂದಿರಬೇಕಾದ್ದು ಕಡ್ಡಾಯ.

ಡಿಮ್ಯಾಟ್‌ ನಾಮಿನಿ
ಎ.1ರ ಮೊದಲೇ ನಿಮ್ಮ ಡಿಮ್ಯಾಟ್‌ ಖಾತೆಗೆ ನಾಮಿನೇಶನ್‌ ಸಲ್ಲಿಸಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ಡಿಮ್ಯಾಟ್‌ ಅಕೌಂಟ್‌ ಸ್ತಂಭನಗೊಳ್ಳಲಿದೆ.

ಔಷಧ ದುಬಾರಿ
ಅತ್ಯಗತ್ಯ ಔಷಧಗಳ ದರವು ಎ.1ರಿಂದ ದುಬಾರಿಯಾಗಲಿದೆ. ನೋವು ನಿವಾರಕ ಮಾತ್ರೆಗಳು, ಆ್ಯಂಟಿ ಬಯಾಟಿಕ್ಸ್‌, ಸೋಂಕು ನಿವಾರಕ ಮಾತ್ರೆಗಳು, ಎದೆನೋವಿನ ಔಷಧಗಳು ಸಹಿತ ಅಗತ್ಯ ಔಷಧಗಳ ಬೆಲೆಯು ಶೇ.12ರಷ್ಟು ಹೆಚ್ಚಳವಾಗಲಿದೆ.

ಎಲ್‌ಪಿಜಿ ದರ ಪರಿಷ್ಕರಣೆ
ಪ್ರತೀ ತಿಂಗಳ ಆರಂಭದಲ್ಲೂ ಅಡುಗೆ ಅನಿಲ ಸಿಲಿಂಡರ್‌ ದರ ಪರಿಷ್ಕರಣೆಯಾಗಲಿದೆ. ಅದರಂತೆ ಶನಿವಾರ ಎಲ್‌ಪಿಜಿ ದರ ಏರಿಕೆಯೂ ಆಗಬಹುದು, ಇಳಿಕೆಯೂ ಆಗಬಹುದು.

ದುಬಾರಿ-ಅಗ್ಗ
ಸಿಗರೇಟ್‌, ಬೆಳ್ಳಿ, ಚಿನ್ನದ ಗಟ್ಟಿಯಿಂದ ಮಾಡಿದ ವಸ್ತುಗಳು, ಪ್ಲಾಟಿನಂ, ಎಲೆಕ್ಟ್ರಿಕ್‌ ಚಿಮಿಣಿಗಳು, ಆಮದು ಮಾಡಲಾದ ಆಟಿಕೆಗಳು, ಬೈಸಿಕಲ್‌, ಆಮದು ಮಾಡಲಾದ ಇ-ವಾಹನಗಳು ದುಬಾರಿಯಾಗಲಿವೆ. ಭಾರತದಲ್ಲೇ ತಯಾರಾದಂಥ ಇವಿ ವಾಹನ, ಮೊಬೈಲ್‌ ಫೋನ್‌ಗಳು, ಟಿವಿ, ಬೈಸಿಕಲ್‌, ಕೆಮೆರಾ ಲೆನ್ಸ್‌, ಪ್ರಯೋಗಾಲಯದಲ್ಲಿ ತಯಾರಿಸಿದ ವಜ್ರ, ಲೀಥಿಯಂ ಅಯಾನ್‌ ಬ್ಯಾಟರಿಗಳು ಅಗ್ಗವಾಗಲಿವೆ.

ಜೀವ ವಿಮೆ
ವಾರ್ಷಿಕ 5 ಲಕ್ಷ ರೂ.ಗಳಿಗಿಂತ ಹೆಚ್ಚಿನ ಪ್ರೀಮಿಯಂ ಹೊಂದಿರುವಂಥ ಜೀವವಿಮೆಗಳಿಂದ ಬರುವ ಆದಾಯವು ಎ.1ರಿಂದ ತೆರಿಗೆಗೆ ಒಳಪಡಲಿದೆ.

ವಾಹನಗಳ ದರವೂ ಹೆಚ್ಚಳ
ಎ.1ರಿಂದ ದೇಶದ ಎಲ್ಲ ಆಟೋಮೊಬೈಲ್‌ ಕಂಪೆನಿಗಳು ಬಿಎಸ್‌6 ಹಂತ-2ಕ್ಕೆ ಪರಿವರ್ತನೆಗೊಳ್ಳುವುದನ್ನು ಸರಕಾರ ಕಡ್ಡಾಯ ಮಾಡಿದೆ. ಕಠಿನ ಹೊರಸೂಸುವಿಕೆ ನಿಯಮ ಪಾಲಿಸುವುದು ಕಡ್ಡಾಯವಾದ ಕಾರಣ, ವಾಹನಗಳ ತಯಾರಿಕೆ ವೆಚ್ಚ ಏರಿಕೆಯಾಗಲಿದೆ. ಹೀಗಾಗಿ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್‌, ಹೋಂಡಾ ಸಹಿತ ಬಹುತೇಕ ಕಂಪೆನಿಗಳು ತಮ್ಮ ಕಾರುಗಳ ದರವನ್ನು ಶೇ.1ರಿಂದ 5ರಷ್ಟು ಹೆಚ್ಚಳ ಮಾಡಿವೆ.

ಮಹಿಳಾ ಸಮ್ಮಾನ್‌
ಬಜೆಟ್‌ನಲ್ಲಿ ಘೋಷಿಸಲಾದ ಮಹಿಳಾ ಸಮ್ಮಾನ್‌ ಉಳಿತಾಯ ಪತ್ರ ಯೋಜನೆ ಶನಿವಾರದಿಂದ ಚಾಲ್ತಿಗೆ ಬರಲಿದೆ. ಅದರಂತೆ ಮಹಿಳೆಯರು 2 ವರ್ಷಗಳ ಅವಧಿಗೆ ಇದರಲ್ಲಿ ಹೂಡಿಕೆ ಮಾಡಬಹುದು. ವಾರ್ಷಿಕ ಶೇ.7.5ರ ಬಡ್ಡಿ ದರ ಸಿಗಲಿದೆ ಮಾತ್ರವಲ್ಲ, ಈ ಬಡ್ಡಿಯು ರೆಪೋ ದರಕ್ಕೆ ಅನುಗುಣವಾಗಿ ಬದಲಾಗದೇ ಸ್ಥಿರವಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next