ಹೊಸದಿಲ್ಲಿ: ವಿಶ್ವದಲ್ಲೇ 150 ವರ್ಷಗಳ ಬಳಿಕ ಕಾಣಿಸಿಕೊಳ್ಳುತ್ತಿರುವ ‘ಬೆಂಕಿಯ ಉಂಗುರ’ (ಕಂಕಣ) ಸೂರ್ಯಗ್ರಹಣಕ್ಕೆ 1 ದಿನ ಮಾತ್ರ ಬಾಕಿ ಇದೆ. ಬೆಂಗಳೂರು, ಮಂಗಳೂರು, ಕೊಯಮತ್ತೂರು, ದಿಂಡಿಗಲ್ ಸೇರಿದಂತೆ ದಕ್ಷಿಣ ಭಾರತದಲ್ಲಿ ಬಹುತೇಕ ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರಿಸಲಿದೆ.
ಅಂದು ಚಂದ್ರನು ಸೂರ್ಯ, ಭೂಮಿ ನಡುವಣ ರೇಖೆಗೆ ಬಂದರೆ ಪೂರ್ಣ ಪ್ರಮಾಣದಲ್ಲಿ ಸೂರ್ಯ ಗ್ರಹಣ ಕಾಣಿಸಿಕೊಳ್ಳುವುದಿಲ್ಲ. ಚಂದ್ರನು ಸೂರ್ಯನ ಕೇಂದ್ರೀಯ ಭಾಗವನ್ನು ಆವರಿಸಲಿದೆ. ಭಾಗಶಃ ಸೂರ್ಯಗ್ರಹಣ ಹಾಗೂ ಬೆಂಕಿಯ ಉಂಗುರ ಗೋಚರಿಸಲಿದೆ.
ಬೆಂಗಳೂರಿನಲ್ಲಿ ಶೇ.89.4, ಚೆನ್ನೈನಲ್ಲಿ ಶೇ. 78.8, ಮುಂಬಯಿ (74.3), ಹೈದರಾ ಬಾದ್ (66), ಅಹಮದಾಬಾದ್(44.7) ದಿಲ್ಲಿ (44.7), ಕೋಲ್ಕತಾದಲ್ಲಿ ಶೇ.45.1ರಷ್ಟು ಕಾಣಿಸಿಕೊಳ್ಳಲಿದೆ ಎಂದು ಬಿರ್ಲಾ ಇಂಡಸ್ಟ್ರಿಯಲ್ ಆ್ಯಂಡ್ ಟೆಕ್ನಾಲಜಿ ಮ್ಯೂಸಿಯಂ ತಿಳಿಸಿದೆ.
ಭಾರತದಲ್ಲಿ ಬೆಳಗ್ಗೆ 7.59ರಿಂದ ಸೂರ್ಯ ಗ್ರಹಣ ಶುರುವಾಗಲಿದೆ. 10.47ಕ್ಕೆ ಗರಿಷ್ಠ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದೆ. ಸೌದಿ ಅರೇಬಿಯಾ, ಖತಾರ್, ಯುಎಇ, ಒಮನ್, ಶ್ರೀಲಂಕಾ, ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪುರ ಮತ್ತಿತರ ದೇಶಗಳಲ್ಲಿ ಸೂರ್ಯ ಗ್ರಹಣ ಕಾಣಿಸಿಕೊಳ್ಳಲಿದೆ. ಯುಎಇನಲ್ಲಿ ಅಂದು ಮಸೀದಿಗಳಲ್ಲಿ ಬೆಳಗ್ಗೆ ಪ್ರಾರ್ಥನೆಗಳು ನಡೆಯಲಿವೆ. ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ಗುರುವಾರ ಶಾಲೆ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.