Advertisement

ನಾಳೆ ಆಗೋ ಬ್ರೇಕಪ್‌ ಇವತ್ತೇ ಆಗಿಬಿಡ್ಲಿ…

06:00 AM Dec 04, 2018 | Team Udayavani |

ನಿನ್ನ ಕನಸುಗಳನ್ನೆಲ್ಲ ನನಸು ಮಾಡೋದಿರಲಿ, ನಿನ್ನ ಅಪ್ಪ-ಅಮ್ಮನ ಪ್ರೀತಿಯಲ್ಲಿ ಕಾಲು ಭಾಗ ಕೊಡೋ ಸಾಮರ್ಥ್ಯವೂ ನನಗಿಲ್ಲ ಅನ್ಸುತ್ತೆ. ನಿನ್ನ ಮನೆಯವರು ಹುಡುಕಿದ ಹುಡುಗನನ್ನೇ ಮದುವೆಯಾಗಿ ಸುಖವಾಗಿ ಬಾಳು. 

Advertisement

ಹಾಯ… ಬಂಗಾರ ,
ಇದು ನಿನ್ನ ಜಾನೂ, ನಿಂಗೆ ಬರೀತಾ ಇರೋ ಕೊನೆಯ ಸಂದೇಶ… ನಿನ್‌ ಫ್ಯಾಮಿಲಿ ತುಂಬಾ ಒಳ್ಳೇದು. ನೀನಂದ್ರೆ ಜೀವ ಬಿಡೋ ಅಪ್ಪ-ಅಮ್ಮ, ಮುದ್ದು ಮಾಡೋ ಅಜ್ಜ-ಅಜ್ಜಿ, ಒಳ್ಳೆ ಅಣ್ಣ, ಚಿಕ್ಕಪ್ಪ-ಚಿಕ್ಕಮ್ಮ.. ನಿಜ್ವಾಗ್ಲೂ ಇಂಥ ಕುಟುಂಬಾನ ಪಡೆಯೋಕೆ ನೀನ್‌ ತುಂಬಾ ಪುಣ್ಯ ಮಾಡಿದ್ದೀಯ. ಅವರೆಲ್ಲರ ಪ್ರೀತಿ ಮುಂದೆ ನನ್‌ ಪ್ರೀತಿ ಏನೂ ಅಲ್ಲ! 

ನೀನ್‌ ಆಗಾಗ ಹೇಳ್ತಾ ಇದ್ದದ್ದು ನಿಜ. ನಾವಿಬ್ರೂ ನಮ… ಪ್ರೀತೀನ ಹೇಳ್ಕೊಬಾರ್ದಿತ್ತು. ಗೆಳೆತನದ ಹಾದಿಯಲ್ಲೇ ನಡೆದು, ನಮ್ಮ ನಾಲ್ಕು ವರ್ಷಗಳ ಎಂಜಿನಿಯರಿಂಗ್‌ ಮುಗಿಸಬಹುದಿತ್ತು. ನಿನ್ನನ್ನು ನಿನ್ನ ಫ್ಯಾಮಿಲಿಯಿಂದ ದೂರ ಮಾಡೋಕೆ ಖಂಡಿತಾ ನಂಗಿಷ್ಟವಿಲ್ಲ. ಈಗೇನೋ ಇಲ್ಲಿ ಇದೀಯ. ಓದು ಮುಗಿದ ಮೇಲೆ ನೀನು ಊರಿಗೆ ವಾಪಸ್‌ ಹೋಗ್ತಿಯ. ಆಮೇಲೆ ನಿನ್ನನ್ನ ಭೇಟಿಯಾಗೋದು ಹೇಗೆ? ಅಲ್ಲಿ ನೆಟ್ರ್ಕ್‌ ಬೇರೆ ಇಲ್ಲ ಅಂತೀಯ. ಅದಕ್ಕೇ ನಾಳೆ ಆಗೋ ಬ್ರೇಕಪ್‌ ಇವತ್ತೇ ಆಗಿಬಿಡಲಿ. ನಿನ್ನ ಬಿಟ್ಟು ಬದುಕೋ ಶಕ್ತಿ ಇದೆಯೋ, ಇಲ್ಲವೋ ಗೊತ್ತಿಲ್ಲ. ಇಬ್ಬರೂ ದೂರಾಗೋಣ ಅಂತ ನಿನ್ನೆದುರು ನಿಂತು ಹೇಳ್ಳೋಕೆ ಶಕ್ತಿ ಇಲ್ಲ. ಅದಕ್ಕೇ ಈ ಪತ್ರ.

ನಮ್ಮನ್ನು ಯಾರೂ ದೂರ ಮಾಡದೇ ಇರಲಿ ಅಂತಿದ್ಯಲ್ಲಾ, ದೂರ ಆಗೋ ಸಮಯ ಇಷ್ಟು ಬೇಗ ಬರುತ್ತೆ ಅಂತ ಇಬ್ಬರೂ ಅಂದುಕೊಂಡಿರಲಿಲ್ಲ ಅಲ್ವಾ? ಜೀವನ ಅಂದ್ರೆ ಇಷ್ಟೇ ಕಣೆ… ನಮ್ಮ ಪ್ರೀತಿಯನ್ನು ಮನೆಯವರು ಒಪ್ಪಿಕೊಳ್ಳೋದಿಲ್ಲ ಅಂತ ಗೊತ್ತಿದ್ರೂ, ಇಬ್ಬರೂ ಒಟ್ಟಿಗೇ ಬಾಳುವ ಕನಸು ಕಂಡಿದ್ವಿ. ಆ ಕನಸು ಈಗ ಕಣ್ಣೆದುರಿಗೇ ನುಚ್ಚು ನೂರಾಗಿ ಹೋಗ್ತಾ ಇದೆ. ನಿಂಗೆಷ್ಟು ದುಃಖ ಆಗ್ತಾ ಇದೆ ಅಂತ ನಂಗೊತ್ತು. ನಿನ್ನನ್ನು ಎದುರಿಸೋ ಶಕ್ತಿ ನನಗಿಲ್ಲ.

ಅದಕ್ಕೇ ಮುಂದಿನ ಸೆಮಿಸ್ಟರ್‌ಗೆ ಬೆಂಗಳೂರು ಎಂಜಿನಿಯರಿಂಗ್‌ ಕಾಲೇಜಿಗೆ ಸೇರ್ತಾ ಇದೀನಿ. ನೀನು ಇಲ್ಲೇ ಚೆನ್ನಾಗಿ ಓದ್ಕೋ.
ಮೋಸಗಾರ, ನನ್ನನ್ನು ಬಿಟ್ಟು ಬೇರೆ ಹುಡುಗಿ ಹಿಂದೆ ಬಿದ್ದಿದ್ದಾನೆ ಅಂತೆಲ್ಲಾ ಪ್ಲೀಸ್‌ ಅಂದ್ಕೊಬೇಡ. ನನ್ನ ಹೃದಯದಲ್ಲಿ ಯಾವತ್ತೂ ನೀನೂ, ನಿನ್ನ ನೆನಪೂ ಶಾಶ್ವತ.

Advertisement

ಸ್ವಲ್ಪ ಧೈರ್ಯ ಜಾಸ್ತಿ ಮಾಡ್ಕೊ. ಅಳುಮುಂಜಿಯಾಗಬೇಡ. ನಿನ್‌ ಜೊತೆ ಕೊನೆಯವರೆಗೂ ಇದ್ದು, ನಿನ್ನ ಗುಬ್ಬಿಮರಿಯಂತೆ ಕಾಪಾಡಿಕೋಬೇಕು ಅಂತ ಕನಸು ಕಂಡಿದ್ದೆ. ಆದರೆ, ಅದು ಸಾಧ್ಯವಿಲ್ಲ. ಅದಕ್ಕೇ ಹೇಳ್ತಾ ಇದೀನಿ, ಗಟ್ಟಿಗಿತ್ತಿಯಾಗು ಅಂತ. ನಿನ್ನ ಮದುವೆ ಬಗ್ಗೆ ನೀನೂ, ನಿನ್ನ ಹೆತ್ತವರೂ ಮೂಟೆಗಟ್ಟಲೆ ಕನಸು ಕಂಡಿದ್ದೀರಿ. ರಾಜಕುಮಾರನಂಥ ಹುಡುಗನ ಕೈ ಹಿಡೀತಾಳೆ ನನ್ನ ಕೂಸು ಅಂತ ಅಜ್ಜ-ಅಜ್ಜಿ ಆಶೀರ್ವಾದ ಮಾಡಿದ್ದಾರೆ. ನಾನಂಥ ಹುಡುಗ ಅಲ್ಲ. ನಿನ್ನ ಕನಸುಗಳನ್ನೆಲ್ಲ ನನಸು ಮಾಡೋದಿರಲಿ, ನಿನ್ನ ಅಪ್ಪ-ಅಮ್ಮನ ಪ್ರೀತಿಯಲ್ಲಿ ಕಾಲು ಭಾಗ ಕೊಡೋ ಸಾಮರ್ಥ್ಯವೂ ನನಗಿಲ್ಲ ಅನ್ಸುತ್ತೆ. ನಿನ್ನ ಮನೆಯವರು ಹುಡುಕಿದ ಹುಡುಗನನ್ನೇ ಮದುವೆಯಾಗಿ ಸುಖವಾಗಿ ಬಾಳು. 

ಇಷ್ಟನ್ನೆಲ್ಲಾ ಬರೆಯುವಾಗ ನಾನು ಮಾತ್ರ ಅಲ್ಲ, ನನ್ನ ಹೃದಯವೂ ನೋವಿನಿಂದ ಚೀರುತ್ತಿದೆ. ಆದ್ರೆ, ಈ ನೋವು ಇಂದಲ್ಲದಿದ್ದರೆ ನಾಳೇನಾದ್ರೂ ಆಗಬೇಕಾಗಿದ್ದೆ. ಮುಂದಾಗೋದು ಇಂದೇ ಆಗಿಬಿಡಲಿ. ಜೀವನದಲ್ಲಿ ಯಾವಾಗ್ಲಾದ್ರೂ ಕಷ್ಟ ಅಂತ ಬಂದ್ರೆ (ಬಾರದೇ ಇರಲಿ) ನನ್ನ ನೆನಪು ಮಾಡ್ಕೊ. ಒಬ್ಬ ಒಳ್ಳೆಯ ಗೆಳೆಯನಾಗಿ ಸಹಾಯಕ್ಕೆ ಬರ್ತೇನೆ. ಜೀವನದಲ್ಲಿ ಸದಾ ಖುಷಿ ತುಂಬಿರ್ಲಿ ಅಂತ ಹಾರೈಸುವ 

ನಿನ್ನವನಲ್ಲದ

ಮಹಮ್ಮದ್‌ ಅಲ್ಫಾಜ್‌, ಕಾರ್ಕಳ.

Advertisement

Udayavani is now on Telegram. Click here to join our channel and stay updated with the latest news.

Next