Advertisement

ನಾಳೆ ಮೊಗೇರ ಸಮಾಜ ಬೃಹತ್‌ ಧರಣಿ

06:35 PM Jan 11, 2022 | Team Udayavani |

ಭಟ್ಕಳ: 1976ರಲ್ಲಿ ಪ್ರಾಂತೀಯ ನಿರ್ಬಂಧವನ್ನು ತೆಗೆದು ಹಾಕಿದ ನಂತರ ನಿರಂತರವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಬಂದಿದ್ದ ಉತ್ತರ ಕನ್ನಡ ಜಿಲ್ಲಾ ಮೊಗೇರ ಜನಾಂಗದವರಿಗೆ ಪ್ರಮಾಣ ಪತ್ರ ನೀಡುವಲ್ಲಿ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿರುವುದನ್ನು ವಿರೋಧಿಸಿ ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಜ. 12ರಿಂದ ಬೃಹತ್‌ ಸಂಖ್ಯೆಯಲ್ಲಿ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದ್ದು, ಯಾವುದೇ ಕಾರಣಕ್ಕೂ
ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಂ. ಕರ್ಕಿ ತಿಳಿಸಿದರು.

Advertisement

ಇಲ್ಲಿನ ವೆಂಕಟಾಪುರದ ಶ್ರೀನಿವಾಸ ಸಭಾಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮಾಜ 1970ರ ದಶಕದಲ್ಲಿ ಅತ್ಯಂತ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದು, ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಲು ಆರಂಭಿಸಿದ ನಂತರ ಸಾಮಾಜಿಕ ಜೀವನದಲ್ಲಿ ಸುಧಾರಣೆ ಕಂಡಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ನಮ್ಮ ಸಮಾಜಕ್ಕೆ ದೊರೆತ ಸೌಲಭ್ಯ ವಂಚಿಸಲು ಕೆಲವು ಸಂಘಟನೆಗಳು ಅಪಪ್ರಚಾರ ಆರಂಭಿಸಿ ಅಧಿಕಾರಿಗಳ ದಿಕ್ಕು ತಪ್ಪಿಸಿದ್ದಾರೆ.

ನಾವು ಮೀನುಗಾರಿಕೆ ಮಾಡಿ ಬದುಕುತ್ತೇವೆ ಎನ್ನುವುದು ಇದರಲ್ಲಿ ಮುಖ್ಯವಾಗಿದ್ದು, ಅಂದು ನಮಗೆ ಜೀವನೋಪಾಯಕ್ಕಾಗಿ ದೊರೆತಿದ್ದೇ ಮೀನುಗಾರಿಕೆಯಾಗಿತ್ತು. ಇತರೇ ಪರಿಶಿಷ್ಟ ಜಾತಿ/ ಪಂಗಡದಲ್ಲಿಯೂ ಮೂಲ ಕಸುಬನ್ನು ಬಿಟ್ಟು ಬೇರೆ ಕಸುಬನ್ನು ಮಾಡುತ್ತಿರುವ ಉದಾಹರಣೆ
ಇದೆ ಎಂದ ಅವರು, ಅದೇ ಮಾನದಂಡವಲ್ಲ ಎಂದರು.

ಉ.ಕ. ಜಿಲ್ಲೆಯ ಮೊಗೇರ ಜಾತಿಯ ಬಗ್ಗೆ ಈಗಾಗಲೇ ಕರ್ನಾಟಕದ ಉಚ್ಚ ನ್ಯಾಯಾಲಯ, ಸರ್ವೋತ್ಛ ನ್ಯಾಯಾಯಲ, ರಾಷ್ಟ್ರೀಯ ಪರಿಶಿಷ್ಟ ಜಾತಿಯ ಆಯೋಗ ತೀರ್ಪು ನೀಡಿದ್ದರೂ ಅಧಿಕಾರಿಗಳು ಗೊಂದಲ ಸೃಷ್ಟಿಸುವ ದಿನಕ್ಕೊಂದು ಆದೇಶ ಮಾಡುತ್ತಿದ್ದಾರೆ. ಜಾಲಿ ಪಪಂನಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಡಿಯಲ್ಲಿ ಚುನಾವಣೆಗೆ ನಿಂತವರ ಜಾತಿ ಪ್ರಮಾಣ ಪತ್ರವನ್ನೇ ರದ್ದು ಮಾಡಿದ ಜಿಲ್ಲಾಧಿಕಾರಿಗಳ ನಡೆ ಖಂಡನೀಯವಾಗಿದ್ದು, ಅಧಿಕಾರಿಗಳ ದರ್ಪ ಇದೇ ರೀತಿಯಾಗಿ ಮುಂದುವರಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು. ನಮ್ಮ ಸಮಾಜದವರ ಮೇಲೆ ಅನ್ಯಾಯವಾಗಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಹಾಗೂ ಪರಿಶಿಷ್ಟ ಜಾತಿಯ ಸೌಲಭ್ಯವನ್ನು ನ್ಯಾಯಯುತವಾಗಿ ಪಡೆಯಲು ನಮ್ಮ ಧರಣಿ ಸತ್ಯಾಗ್ರಹ ಅನಿವಾರ್ಯವಾಗಿದೆ ಎಂದರು.

ನಮ್ಮ ಸಮಾಜ ಜ. 12ರಂದು ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದು, ನಮ್ಮ ಪ್ರತಿಭಟನೆ ಸಮಾಜದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಕೋವಿಡ್‌ ನಿಯಮಾವಳಿಯ ನೆಪವೊಡ್ಡಿ ಅಧಿಕಾರಿಗಳು ನಮ್ಮನ್ನು ತಡೆಯಲು ಸಾಧ್ಯವಿಲ್ಲ.
ಕೆ.ಎಂ. ಕರ್ಕಿ,
ಮೊಗೇರ ಸಮಾಜ ಜಿಲ್ಲಾಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next