Advertisement

ನಾಳೆ “ದಂಡಿ’ಚಲನಚಿತ್ರ ಬೆಳ್ಳಿ ತೆರೆಗೆ

04:10 PM Apr 07, 2022 | Team Udayavani |

ಹೊನ್ನಾವರ: 1904ರಿಂದ 1940ರ ವರೆಗೆ ಸುದೀರ್ಘ‌ ಕಾಲ ನಡೆದ ಭಾರತದ ಸ್ವಾತಂತ್ರ್ಯ ಹೋರಾಟದ ಯಥಾವತ್‌ ಹೋರಾಟಗಳು ಉತ್ತರ ಕನ್ನಡದಲ್ಲೂ ನಡೆದವು. ಜಿಲ್ಲೆಯ ಸ್ವಾತಂತ್ರ್ಯ ಯೋಧರ, ತ್ಯಾಗ, ಬಲಿದಾನದ ಕಥೆ ಪುಸ್ತಕ ರೂಪದಲ್ಲಿ ಇರುವುದರ ಸಾರವನ್ನು ಚಲನಚಿತ್ರ ರೂಪದಲ್ಲಿ ಕಟ್ಟಿಕೊಡಲಾಗಿದ್ದು ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ನೆಲ ಅಂಕೋಲೆಯಲ್ಲಿ “ದಂಡಿ’ ಚಿತ್ರ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ವಿಶಾಲ ರಾಜ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Advertisement

136ಕ್ಕೂ ಹೆಚ್ಚು ಸ್ಥಳೀಯ ಕಲಾವಿದರು, ಹಿರಿಯ ಕಲಾವಿದರಾದ ತಾರಾ ಅನುರಾಧ, ಸುಚೇಂದ್ರ ಪ್ರಸಾದ ಮುಖ್ಯಭೂಮಿಕೆಯಲ್ಲಿದ್ದು ಯುವಾನ್‌ ದೇವ್‌ ಮತ್ತು ಶಾಲಿನಿ ಭಟ್‌ ನಾಯಕ, ನಾಯಕಿಯರಾಗಿ ಪಾತ್ರ ನಿರ್ವಹಿಸಿದ್ದಾರೆ. ರಾಗಂ ಅವರ ಕಾದಂಬರಿ “ದಂಡಿ’ ಆಧರಿಸಿ ಸ್ಥಳೀಯ ಲೇಖಕರ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಸಾರವನ್ನು ಎರಡು ತಾಸಿನ ಸಿನೇಮಾದಲ್ಲಿ ಅಳವಡಿಸಲಾಗಿದೆ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ 222 ಚಿತ್ರಗಳಲ್ಲಿ “ದಂಡಿ’ಗೆ ದ್ವಿತೀಯ ಪುರಸ್ಕಾರ ದೊರೆತಿರುವುದು ಹೆಮ್ಮೆಯ ಸಂಗತಿ. ಜಿಲ್ಲೆಯ ರಮಣೀಯ ದೃಶ್ಯಗಳನ್ನು ಸೆರೆಹಿಡಿಯಲಾಗಿದ್ದು ಹಸ್ಲರದೇವಿಯ ಕಥೆ, ಐವತ್ತು ಮೈಲು ನಡೆದು ಗೋಬ್ಯಾಕ್‌ ಎಂದು ಕಲೆಕ್ಟರ್‌ನಿಗೆ ಅವಮಾನ ಮಾಡಿದ ಕಥೆ, ಮೊದಲಾದ ಸತ್ಯಘಟನೆಗಳನ್ನು ಸಿನಿಮಾ ಒಳಗೊಂಡಿದ್ದು ನಾಯಕ ಹಿಂಸೆಯಿಂದ ಅಹಿಂಸೆಯತ್ತ ತಿರುಗಿ ಗಾಂಧಿ ಮಾರ್ಗದಲ್ಲಿ ಮುನ್ನಡೆಯುವ ಕಥೆಯನ್ನು ಚಿತ್ರ ಒಳಗೊಂಡಿದೆ. ವೆಂಕಟೇಶ ಬಾಬು ಅವರ ಸುಂದರ ಛಾಯಾಗ್ರಹಣ, ವಿಜಯ ಪ್ರಕಾಶ ಹಾಡಿದ “ಇದೋ ನಮ್ಮ ಹೋರಾಟ ಹಾಡು’ ಜನಮೆಚ್ಚುಗೆ ಗಳಿಸಿದೆ. ಪದ್ಮಶ್ರೀ ಸುಕ್ರೀ ಗೌಡ ಚಿತ್ರದಲ್ಲಿದ್ದಾರೆ ಎಂದು ಅವರು ಹೇಳಿದ್ದು ಯುವಕರು, ವಿದ್ಯಾರ್ಥಿಗಳು ಚಿತ್ರ ನೋಡಿ ಸ್ಫೂರ್ತಿ ಪಡೆದು ಉತ್ತರ ಕನ್ನಡದ ವೈಭವವನ್ನು ಉಳಿಸಬೇಕು ಎಂದರು.

ಚಿತ್ರದ ನಿರ್ಮಾಪಕಿ ಉಷಾ ರಾಣಿ ಮಾತನಾಡಿ, ಚಿತ್ರೀಕರಣಕ್ಕೆ ಬಂದಾಗ ಜಿಲ್ಲೆಯ ಜನ ಸಹಕಾರ ನೀಡಿದ್ದಾರೆ. ಚಿತ್ರ ಸಿದ್ಧಪಡಿಸಿಕೊಂಡು ಬಂದಾಗ ನಿರೀಕ್ಷೆಗೂ ಮೀರಿ ಪ್ರೀತಿ ತೋರಿದ್ದಾರೆ. ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ್‌, ಶಾಸಕರಾದ ಸುನೀಲ ನಾಯ್ಕ ಸ್ವಾಗತಿಸಿದ್ದಾರೆ.

ಕಾರವಾರ ಶಾಸಕಿ ರೂಪಾಲಿ ನಾಯ್ಕ ನನ್ನ ಕ್ಷೇತ್ರದ ಕಥೆಯಾದ ಕಾರಣ ಅಂಕೋಲೆಯಲ್ಲಿಯೇ ಪ್ರಥಮ ಕಾರ್ಯಕ್ರಮ ನಡೆಯಬೇಕು ಎಂದು ಒತ್ತಾಯಿಸಿದ ಕಾರಣ ಅಂದು ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಯಲ್ಲಿ ತೆರಳಿ ಚಿತ್ರ ಉದ್ಘಾಟನೆ ನಡೆಯಲಿದೆ.

Advertisement

ಶಾಸಕಿ ಹಾಗೂ ಉಸ್ತುವಾರಿ ಸಚಿವರು ಸ್ವಾತಂತ್ರ್ಯ ಯೋಧರ ಕುಟುಂಬದ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಶಾಸಕ ದಿನಕರ ಶೆಟ್ಟಿ ಹೊನ್ನಾವರದಲ್ಲಿ ಏ.9 ರಂದು ಬೆಳಗ್ಗೆ 10:30ಕ್ಕೆ ಚಿತ್ರ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಪಪಂದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಯಲ್ಲಿ ಬಂದು ಆಮಂತ್ರಿತರೊಂದಿಗೆ ಚಲನಚಿತ್ರ ವೀಕ್ಷಿಸುವರು. ಭಾವನಾ ವಾಹಿನಿಯ ಭವಾನಿಶಂಕರ, ಹಿರಿಯ ಪತ್ರಕರ್ತ ಜಿ.ಯು. ಭಟ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಪತ್ರಕರ್ತ ವೆಂಕಟೇಶ ಮೇಸ್ತ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next