Advertisement

ನಾಳೆ “ಮಹಾ ಚುನಾವಣೆ”

10:55 AM Oct 21, 2019 | Team Udayavani |

ಹೊಸದಿಲ್ಲಿ/ಮುಂಬಯಿ: ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ.

Advertisement

ಸೋಮವಾರ ಮತದಾನ ನಡೆಯಲಿದೆ. ಶನಿವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಕಳೆದ ಒಂದು ತಿಂಗಳು ಈ ಎರಡೂ ರಾಜ್ಯಗಳಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಹಿತ ಹಲವಾರು ಮಂದಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಜತೆಗೆ ಈ ಎರಡೂ ರಾಜ್ಯಗಳ ಚುನಾವಣೆಯಲ್ಲಿ ಅಭಿವೃದ್ಧಿಯ ಆಧಾರದಲ್ಲಿ ಮತ ಕೇಳಿದ್ದಕ್ಕಿಂತ ಬೇರೆ ವಿಚಾರಗಳೇ ಹೆಚ್ಚು ಸದ್ದಾಗಿದ್ದುದು ವಿಶೇಷ.

ಅದರಲ್ಲೂ ಮಹಾರಾಷ್ಟ್ರ ಬಿಜೆಪಿ ಸಾವರ್ಕರ್‌ಗೆ ಭಾರತರತ್ನ ನೀಡುವ ಬಗ್ಗೆ ಭರವಸೆ ನೀಡಿದ್ದು ಇಡೀ ದೇಶಾದ್ಯಂತ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಅಷ್ಟೇ ಅಲ್ಲ, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮಹಾರಾಷ್ಟ್ರದಲ್ಲಿ ಚುನಾವಣ ಪ್ರಚಾರ ನಡೆಸುವ ವೇಳೆ ನೆರೆ ರಾಜ್ಯಕ್ಕೆ ನೀರು ಬಿಡುವ ಬಗ್ಗೆ ಆಶ್ವಾಸನೆ ನೀಡಿದ್ದು ಸ್ಥಳೀಯ ಮಟ್ಟದಲ್ಲಿ ತೀವ್ರ ವಾಕ್ಸಮರಕ್ಕೂ ಕಾರಣವಾಗಿದೆ.

ಚರ್ಚೆಯಾದ ವಿಚಾರಗಳು
ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾದ ವಿಚಾರಗಳು ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ಸ್ಥಾನಮಾನ ರದ್ದು, ಸಾವರ್ಕರ್‌ಗೆ ಭಾರತರತ್ನ, ಆರ್ಥಿಕ ಕುಸಿತ ಮತ್ತು ಕರ್ತಾರ್ಪುರ ಕಾರಿಡಾರ್‌. ಅದರಲ್ಲೂ ಪ್ರಚಾರದ ಭರಾಟೆಯಲ್ಲಿ ಬಿಜೆಪಿಯೇ ತುಸು ಮುಂದೆ ಇದ್ದಂತೆ ಕಾಣಿಸಿತು. ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದತಿ ವಿಚಾರವನ್ನು ಪ್ರಧಾನಿ ಮೋದಿ ಅವರು, ಪ್ರಚಾರ ಮಾಡಿದ ಕಡೆಯಲ್ಲೆಲ್ಲ ಪ್ರಸ್ತಾವಿಸಿದರು. ಹಾಗೆಯೇ ಮಹಾರಾಷ್ಟ್ರ ಬಿಜೆಪಿ ಪರಿಣಾಮಕಾರಿಯಾಗಿ ಸಾವರ್ಕರ್‌ ಅವರ ಹೆಸರನ್ನು ಭಾರತರತ್ನಕ್ಕೆ ಶಿಫಾರಸು ಮಾಡುವ ಬಗ್ಗೆ ಪ್ರಸ್ತಾವಿಸಿ ಪ್ರಚಾರಕ್ಕೆ ಬಳಸಿಕೊಂಡಿತು. ಇದರ ನಡುವೆ ಕಾಂಗ್ರೆಸ್‌, ಕಾಶ್ಮೀರ ವಿಚಾರದಲ್ಲೂ ಮಾತನಾಡಲಾರದೆ, ಕೇವಲ ಆರ್ಥಿಕ ಕುಸಿತದಂಥ ವಿಚಾರಗಳ ಮೇಲೆ ಪ್ರಚಾರ ನಡೆಸಿತು.

ಕೊನೆಯ ದಿನವೂ ಭರ್ಜರಿ ಪ್ರಚಾರ
ಈ ಎರಡೂ ರಾಜ್ಯಗಳ ಚುನಾವಣೆಗಾಗಿ ಬಹಿರಂಗ ಪ್ರಚಾರ ಶನಿವಾರ ಸಂಜೆಗೆ ಅಂತ್ಯವಾಗಿದೆ. ರವಿವಾರವೇನಿದ್ದರೂ ಮನೆ ಮನೆ ಪ್ರಚಾರ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಬಿರುಸಿನ ಪ್ರಚಾರ ನಡೆಸಿದರು. ಹರಿಯಾಣದ ಎಲ್ಲೆನಾಬಾದ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಸಂವಿಧಾನದ 370ನೇ ವಿಧಿ ಹಾಗೂ ಕರ್ತಾರ್ಪುರ ಕಾರಿಡಾರ್‌ಗೆ ಸಂಬಂಧಿಸಿ ವಿಪಕ್ಷ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ಮುಂದುವರಿಸಿದ್ದು, ಆ ಪಕ್ಷದ ಕೆಟ್ಟ ನೀತಿಗಳು ಇಡೀ ದೇಶವನ್ನೇ ನಾಶ ಮಾಡಿತು ಎಂದು ಆರೋಪಿಸಿದ್ದಾರೆ.

Advertisement

ಬಿ.ಆರ್‌. ಅಂಬೇಡ್ಕರ್‌ ಅವರೇ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತಾತ್ಕಾಲಿಕ ಎಂದು ಕರೆದಿ ದ್ದರು. ಆದರೂ ಅದು 70 ವರ್ಷಗಳ ಕಾಲ ಮುಂದು ವರಿದರೂ ಕಾಂಗ್ರೆಸ್‌ ಏನೂ ಮಾಡಲಿಲ್ಲ. ಕಾಂಗ್ರೆಸ್‌ನ ನೀತಿಗಳಿಂದ ದೇಶ ನಾಶವಾಯಿತು ಎಂದಿದ್ದಾರೆ.  ಜತೆಗೆ, ದೇಶ ವಿಭಜನೆ ಕಾಲದಲ್ಲಿ ಕರ್ತಾರ್ಪುರ ಗುರುದ್ವಾರವನ್ನು ಭಾರತದ ಭೂಪ್ರದೇಶದೊಳಕ್ಕೆ ತರುವಲ್ಲಿ ಕಾಂಗ್ರೆಸ್‌ ವಿಫ‌ಲವಾಯಿತು. ಭಕ್ತರನ್ನು ಗುರುವಿನಿಂದ ಬೇರ್ಪಡಿಸಬಾರದು ಎಂಬುದನ್ನೂ ಅರ್ಥಮಾಡಿಕೊಳ್ಳಲಿಲ್ಲ ಎಂದೂ ಕಿಡಿಕಾರಿದ್ದಾರೆ.

ರಾಹುಲ್‌ಗೆ ಶಾ ಸವಾಲು
ಮಹಾರಾಷ್ಟ್ರದ ನವಪುರ್‌ನಲ್ಲಿ ಶನಿವಾರ ರ್ಯಾಲಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಧೈರ್ಯವಿದ್ದರೆ, ಅಧಿಕಾರಕ್ಕೆ ಬಂದರೆ 370ನೇ ವಿಧಿಯನ್ನು ಮರುಜಾರಿ ಮಾಡುವುದಾಗಿ ರಾಹುಲ್‌ ಗಾಂಧಿ ಘೋಷಿಸಲಿ ಎಂದು ಸವಾಲು ಹಾಕಿದರು.

ಹಣ ಹಂಚಿಕೆ ಕೇಸು
ಬಿಜೆಪಿ ಸಚಿವ ಪರಿಣಯ್‌ ಸಂಬಂಧಿಯೊಬ್ಬರು ನಾಗ್ಪುರದ ಸಕೋಲಿಯಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದು, 18 ಲಕ್ಷ ರೂ. ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ,

ಜಾಮರ್‌ ಅಳವಡಿಕೆಗೆ ಕೋರಿಕೆ
ಮಹಾರಾಷ್ಟ್ರದ ಭೀಡ್‌ ಜಿಲ್ಲೆಯ ಪಾರ್ಲಿ ಕ್ಷೇತ್ರದಲ್ಲಿ ಇವಿಎಂ ಸ್ಟ್ರಾಂಗ್‌ರೂಂ ಸುತ್ತಲೂ ಮೊಬೈಲ್‌ ಜಾಮರ್‌ ಅಳವಡಿಸುವಂತೆ ಕೋರಿ ಚುನಾವಣ ಅಧಿಕಾರಿಗಳಿಗೆ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎನ್‌ಸಿಪಿ ನಾಯಕ ಧನಂಜಯ್‌ ಮುಂಡೆ ಪತ್ರ ಬರೆದಿದ್ದಾರೆ.

ದಿಲ್ಲಿ-ಹರಿಯಾಣ ಗಡಿಯಲ್ಲಿ ಬಿಗಿ ಭದ್ರತೆ
ಹರಿಯಾಣ, ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ಮತದಾನ ಸೋಮವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹರಿಯಾಣ- ದಿಲ್ಲಿ ಗಡಿಯಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಅಕ್ರಮ ಮದ್ಯ ಸರಬರಾಜು ತಡೆ ನಿಟ್ಟಿನಲ್ಲೂ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದಿದ್ದಾರೆ.

ಸಿಬಲ್‌ ತಿರುಗೇಟು
370ನೇ ವಿಧಿ ರದ್ದು ಕುರಿತು ಮಾತನಾಡುತ್ತಿರುವ ಮೋದಿ, ಪಾಕಿಸ್ಥಾನದ ಅವಿಭಾಜ್ಯ ಅಂಗವನ್ನು ಆ ದೇಶದಿಂದ ಬೇರ್ಪಡಿಸಿದ್ದು ಕಾಂಗ್ರೆಸ್‌ ಎಂಬ ವಿಚಾರವನ್ನೂ ಹೇಳಬೇಕು ಎಂದು ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಹೇಳಿದ್ದಾರೆ. ಪಾಕಿಸ್ಥಾನವನ್ನು ವಿಭಜಿಸಿದ್ದು ಯಾವಾಗ ಮತ್ತು ಯಾರು ಎಂಬುದು ಮೋದಿಗೆ ಗೊತ್ತಿಲ್ಲ. ಇದನ್ನೂ ತಿಳಿಸಲಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next