ಬೆಂಗಳೂರು: ಟೊಮಾಟೊ ಬೆಲೆ ಕೆ.ಜಿ.ಗೆ ನೂರು ದಾಟಿರುವ ಹಿನ್ನೆಲೆಯಲ್ಲಿ ರೈತರು ಹಗಲು- ರಾತ್ರಿಯೆನ್ನದೆ ಹೊಲದಲ್ಲಿ ಬೆಳೆ ಕಾಯುತ್ತಿದ್ದಾರೆ. ಆದರೆ, ರಂಗೋಲಿ ಕೆಳಗೆ ತೂರುವ ಕಳ್ಳರು ಟೊಮಾಟೊ ತುಂಬಿದ ಗೂಡ್ಸ್ ವಾಹನ ವನ್ನೇ ಕದ್ದು ಮಾರಿ ನಗರ ಪೊಲೀಸರ ಅತಿಥಿಯಾಗಿದ್ದಾರೆ.
ಕಾರು ಅಪಘಾತದ ಸೋಗಿ ನಲ್ಲಿ ಗೂಡ್ಸ್ ವಾಹನ ಸಮೇತ ಎರಡು ಟನ್ ಟೊಮಾಟೊ (ಸುಮಾರು 20 ಲಕ್ಷ ರೂ. ಮೌಲ್ಯ) ಕದ್ದು ಮಾರಾಟ ಮಾಡಿದ್ದ ತಮಿಳನಾಡು ಮೂಲದ ದಂಪತಿ ಆರ್‌ಎಂಸಿ ಯಾರ್ಡ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಮಿಳುನಾಡು ಮೂಲದ ಭಾಸ್ಕರನ್(36) ಮತ್ತು ಆತನ ಪತ್ನಿ ಸಿಂಧುಜಾ(30) ಬಂಧಿತರು.
ಆರೋಪಿಗಳಿಂದ ಬೊಲೆರೊ ಪಿಕ್‌ಅಪ್ ವಾಹನ, ಕಾರು, 2 ಮೊಬೈಲ್‌ಗಳು ಜಪ್ತಿ ಮಾಡಲಾಗಿದೆ. ಆರೋಪಿಗಳು ಅಪರಾಧ ಹಿನ್ನೆಲೆಯುಳ್ಳವರಾ ಗಿದ್ದು, ಕಳವು, ದರೋಡೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಆರೋಪಿಗಳ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಅಪರಾಧವೆಸಗಲೆಂದು ಬೆಂಗಳೂರಿಗೆ ಬಂದಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಇದೇ ವೇಳೆ ಕೃತ್ಯದಲ್ಲಿ ಭಾಗಿಯಾಗಿ ತಪ್ಪಿಸಿಕೊಂಡಿರುವ ಸುಂಕದಟ್ಟೆಯ ರಾಕೇಶ್, ಮಹೇಶ್ ಹಾಗೂ ತಮಿಳುನಾಡಿನ ಕುಮಾರ್ ಎಂಬುವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರೈತ ಮಲ್ಲೇಶ್ ಮತ್ತು ಶಿವಣ್ಣ ಎಂಬುವರು ಜುಲೈ 9ರಂದು 2 ಟನ್ ಟೊಮಾಟೊ ಲೋಡ್ ಮಾಡಿಕೊಂಡು ಬೊಲೆರೊ ವಾಹನದಲ್ಲಿ ಕೋಲಾರದ ಎಪಿಎಂಸಿ ಕಡೆಗೆ ಹೋಗುತ್ತಿದ್ದರು. ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಬಳಿ ಆರೋಪಿಗಳು, ಬೊಲೆರೊ ವಾಹನ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ವಾಹನ ಅಡ್ಡಗಟ್ಟಿದ್ದಾರೆ. ಬಳಿಕ ಮೂವರು ಆರೋಪಿಗಳು ಬೊಲೆರೊ ವಾಹನಕ್ಕೆ ಹತ್ತಿ ಗೊರಗುಂಟೆಪಾಳ್ಯದಿಂದ ದೇವನ ಹಳ್ಳಿಯ ಬೂದಿಗೆರೆ ಬಳಿಗೆ ರೈತರನ್ನು ಕರೆದೊಯ್ದು ರೈತರನ್ನು ಇಳಿಸಿ ಟೊಮಾಟೊ ಸಮೇತ ಪರಾರಿಯಾಗಿದ್ದರು. ಬಳಿಕ ತಮಿಳುನಾಡಿನ ವನಿಯಂಬಾಡಿಯಲ್ಲಿ ಮಾರಾಟ ಮಾಡಿ, ಗೂಡ್ಸ್ ವಾಹನವನ್ನು ದೇವನಹಳ್ಳಿ ಬಳಿ ತಂದು ನಿಲ್ಲಿಸಿದ್ದರು ಎಂದು ಪೊಲೀಸರು ಹೇಳಿದರು.
ಕೃತ್ಯಕ್ಕೆ ಸಂಚು: ಅಪರಾಧ ಹಿನ್ನೆಲೆಯುಳ್ಳವನಾಗಿದ್ದ ಭಾಸ್ಕರನ್ ಪತ್ನಿ ಸಿಂಧುಜಾ ಈ ಹಿಂದೆ ಪೀಣ್ಯದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವಾಗ ರಾಕೇಶ್ ಪತ್ನಿ ಸ್ನೇಹಿತರಾಗಿದ್ದರು. ಹೀಗಾಗಿ ರಾಕೇಶ್ ಮತ್ತು ಭಾಸ್ಕರನ್ ಪರಿಚಯಸ್ಥರಾಗಿದ್ದಾರೆ. ಸುಲಭವಾಗಿ ಹಣ ಸಂಪಾದಿಸಲು ಅಡ್ಡದಾರಿ ತುಳಿಯಲು ನಿರ್ಧರಿಸಿದ್ದರು. ಇತ್ತೀಚೆಗೆ ತಮಿಳುನಾಡಿಗೆ ಎಲ್ಲ ಸ್ನೇಹಿತರು ಹೋಗಿದ್ದಾಗ ಟೊಮಾಟೊ ಕಳವು ಮಾಡಿದರೆ ಸಿಕ್ಕಿ ಬೀಳುವುದಿಲ್ಲ ಎಂದು ಸಿಂಧುಜಾ ಪತಿ ಹಾಗೂ ಇತರರಿಗೆ ಪ್ರಚೋದಿಸಿದ್ದಳು. ಅದರಂತೆ ತಮಿಳುನಾಡಿನಿಂದ ಜು.9 ರಂದು ತುಮಕೂರು ರಸ್ತೆಗೆ ಬಂದಿದ್ದ ಭಾಸ್ಕರನ್ ಹಾಗೂ ಆತನ ಮೂವರು ಸಹಚರರು, ವಾಹನಗಳ ಮೇಲೆ ನಿಗಾವಹಿಸಿದ್ದರು. ಅದೇ ವೇಳೆ ಮಲ್ಲೇಶ್ ಮತ್ತು ಶಿವಣ್ಣ ಟೊಮಾಟೊ ತುಂಬಿಕೊಂಡು ಹೋಗುತ್ತಿದ್ದನ್ನು ಗಮನಿಸಿ ಸುಮಾರು 40-50 ಕಿ.ಮೀ. ಹಿಂಬಾಲಿಸಿ ಗೊರಗುಂಟೆಪಾಳ್ಯ ಬಳಿ ಕೃತ್ಯ ಎಸಗಿದ್ದಾರೆ.
ಸಿಸಿ ಕ್ಯಾಮೆರಾ ಆಧರಿಸಿ ಆರೋಪಿಗಳ ಸೆರೆ: ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಗೊರಗುಂಟೆಪಾಳ್ಯದಿಂದ ದೇವನಹಳ್ಳಿ ಮಾರ್ಗದವರೆಗೆ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಲಭ್ಯವಾಗಿತ್ತು. ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ತಮಿಳುನಾಡಿನಲ್ಲಿಯೇ ಭಾಸ್ಕರನ್ ದಂಪತಿ ಬಲೆಗೆ ಬಿದ್ದರು. ಇತರೆ ಆರೋಪಿಗಳಿಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.