Advertisement

ಇಳಿಕೆ ಹಂತದಲ್ಲಿ ಟೊಮೇಟೊ ದರ- ಬೆಂಗಳೂರಿನಲ್ಲಿ 100 ರೂ.ಗಿಂತ ಕೆಳಗಿಳಿದ ದರ

12:38 AM Aug 05, 2023 | Team Udayavani |

ಕೋಲಾರ/ಬೆಂಗಳೂರು: ಕೋಲಾರ ಮತ್ತು ಬೆಂಗಳೂರು ಮಾರುಕಟ್ಟೆಗೆ ಟೊಮೇಟೊ ಆವಕ ಹೆಚ್ಚಾಗುತ್ತಿದ್ದು, ಬೆಲೆ ಇಳಿಕೆಯ ಲಕ್ಷಣಗಳು ಕಾಣಿಸುತ್ತಿವೆ. ಬೆಂಗಳೂರಿನಲ್ಲಿ ಕೆಜಿ  ಬೆಲೆ 100 ರೂ.ಗಿಂತ ಕೆಳಗೆ ಇಳಿದಿದೆ.

Advertisement

ಕೋಲಾರದ ಮಾರುಕಟ್ಟೆಯಲ್ಲಿ  ಮೂರೇ ದಿನಗಳ ಅಂತರದಲ್ಲಿ 15 ಕೆಜಿ ಟೊಮೇಟೊ ಬಾಕ್ಸ್‌ನ ಬೆಲೆ ಒಂದು ಸಾವಿರ ರೂ. ವರೆಗೆ ಇಳಿಕೆ ಯಾಗಿದೆ.  ಉತ್ತಮ ಧಾರಣೆ ಸಿಗುತ್ತಿರುವ ಹಿನ್ನೆಲೆಯಲ್ಲಿ ದೂರದ ಊರುಗಳಿಂದಲೂ ಟೊಮೇಟೊ ಭಾರೀ ಪ್ರಮಾಣದಲ್ಲಿ ಬರುತ್ತಿದೆ.

ಪೂರೈಕೆ ಹೆಚ್ಚಳ

ಕೋಲಾರಕ್ಕೆ ಆ.1ರಂದು 16,000 ಕ್ವಿಂಟಾಲ್‌ ಬಂದಿದ್ದು, ಸರಾಸರಿ ಧಾರಣೆ 93.30 ರೂ.ಗಳಾಗಿತ್ತು. ಆ. 2ರಂದು 14,670 ಕ್ವಿಂಟಾಲ್‌ ಆಗಮಿಸಿದ್ದು, ಸರಾಸರಿ ಧಾರಣೆ 80 ರೂ.ಗಳಾಗಿತ್ತು. ಆ.3ರಂದು 9,703 ಕ್ವಿಂಟಾಲ್‌  ಆವಕವಾಗಿದ್ದು, ಸರಾಸರಿ ಧಾರಣೆ 66.70 ರೂ.ಗಳಾಗಿತ್ತು. ಆ.4ರಂದು 10,590 ಕ್ವಿಂಟಾಲ್‌ ಪೂರೈಕೆಯಾಗಿದ್ದು, ಸರಾಸರಿ ಧಾರಣೆ 60 ರೂ.ಗಳಾಗಿದೆ. ಜುಲೈಯಲ್ಲಿ ಸರಾಸರಿ ದಿನದ ಆವಕ ಕೇವಲ 7-8 ಸಾವಿರ ಕ್ವಿಂಟಾಲ್‌ ಮಾತ್ರವೇ ಆಗಿತ್ತು. ಮುಂದಿನ ದಿನಗಳಲ್ಲಿ 10ರಿಂದ 15 ಸಾವಿರ ಕ್ವಿಂಟಾಲ್‌ ನಿರೀಕ್ಷಿಸಬಹುದಾಗಿದೆ.

ಬೆಂಗಳೂರಿನ ಮಾರುಕಟ್ಟೆಯಲ್ಲಿ ಕೂಡ ಬೆಲೆ ಇಳಿಯುವ ಹಂತದಲ್ಲಿದೆ. ಕೆ.ಆರ್‌.ಮಾರುಕಟ್ಟೆ ಮತ್ತು ಕಲಾಸಿ ಪಾಳ್ಯ ಮಾರುಕಟ್ಟೆಯಲ್ಲಿ ಗುರುವಾರ ಪ್ರತಿ ಕೆ.ಜಿಗೆ 120ರಿಂದ 130 ರೂ.ದರದಲ್ಲಿ ಮಾರಾಟವಾಗಿದ್ದ ಟೊಮೇಟೊ ಶುಕ್ರವಾರ 100ರಿಂದ 80 ರೂ.ದರದ ವರೆಗೂ ಖರೀದಿಯಾಯಿತು. ಕಡಿಮೆ ಗುಣಮಟ್ಟದವು 50ರಿಂದ 60 ರೂ.ವರೆಗೂ ಮಾರಾಟವಾದವು.

Advertisement

ಗುರುವಾರದಿಂದ ಮಾರುಕಟ್ಟೆ ಚಿತ್ರಣ ಬದಲಾಗಿದೆ. ವಿಪರೀತ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಟೊಮೇಟೊ ಖರೀದಿಗೆ ವರ್ತಕರು ಕೋಲಾರ ಎಪಿಎಂಸಿಗೆ ಬರುತ್ತಿಲ್ಲ. ಹೀಗಾಗಿ ಪೂರೈಕೆ ಹೆಚ್ಚಿದ್ದು, ಮಾರಾಟ ತುಸು ಇಳಿದಿದೆ ಎಂದು ವರ್ತಕರು ಹೇಳುತ್ತಾರೆ.

ಶುಕ್ರವಾರದ  ದರ

ಕೋಲಾರ ಮಾರುಕಟ್ಟೆಗೆ ಶುಕ್ರವಾರ 10,590 ಕ್ವಿಂಟಾಲ್‌ ಟೊಮೇಟೊ ಆವಕವಾಗಿದ್ದು, ಈ ಪೈಕಿ 15 ಕೆಜಿ ಬಾಕ್ಸ್‌ನ ಅತ್ಯುತ್ತಮ ಗುಣಮಟ್ಟದವುಗಳ ಗರಿಷ್ಠ ಧಾರಣೆ 1,700 ಆಗಿದ್ದರೆ, ಸಾಧಾರಣ ಟೊಮೇಟೊ 1200ರಿಂದ 1,500 ರೂ.ಗೆ ಹರಾಜಾಗಿದೆ. ಸರಾಸರಿ ಕನಿಷ್ಠ 400 ರೂ.ಗಳಿಂದ ಗರಿಷ್ಠ 1500 ರೂ.ವರೆಗೂ ಹರಾಜಾಗಿದೆ. ಶುಕ್ರವಾರ ಸರಾಸರಿ ಧಾರಣೆ ಕೇವಲ 900 ರೂ.ಗಳಾಗಿತ್ತು. ಅಂದರೆ, ಪ್ರತಿ ಕೆಜಿಗೆ ಬೆಲೆ 60 ರೂ.ಗಳಿಗೆ ಇಳಿಕೆಯಾಗಿತ್ತು.

80ರಿಂದ 100 ರೂ. 

ಬೆಂಗಳೂರಿನ ಮಾರುಕಟ್ಟೆಗೆ ಕೋಲಾರ, ಚಿಕ್ಕಬಳ್ಳಾಪುರ ಸಹಿತ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಟೊಮೇಟೊ ಪೂರೈಕೆ ಆಗುತ್ತಿದೆ. ಕಲಾಸಿಪಾಳ್ಯ ರಖಂ  ಮಾರುಕಟ್ಟೆಯಲ್ಲಿ ಶುಕ್ರವಾರ ಅತ್ಯು ತ್ತಮ ಗುಣಮಟ್ಟದ 15 ಕೆಜಿ ಬಾಕ್ಸ್‌ನ ಟೊಮಾಟೋ 1,800 ರೂ.ಗಳಿಂದ 2 ಸಾ. ರೂ.ವರೆಗೂ ಮಾರಾಟವಾಯಿತು ಎಂದು ನೀಲಸಂದ್ರದ  ವ್ಯಾಪಾರಿ ಸರಿತಾ ತಿಳಿಸಿದ್ದಾರೆ. ಅಂದರೆ ಪ್ರತಿ ಕೆಜಿಗೆ 120ರಿಂದ 133 ರೂ.ವರೆಗೆ ಮಾರಾಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next