Advertisement

ಟೊಮೆಟೋಗೆ ಬಂಪರ್‌ ಬೆಲೆ: ಗ್ರಾಹಕ ಕಂಗಾಲು

02:37 PM Jul 01, 2023 | Team Udayavani |

ದೇವನಹಳ್ಳಿ: ಮುಂಗಾರು ಮಳೆ ವಿಳಂಬ ಹಾಗೂ ಬೆಳೆ ನಷ್ಟದಿಂದ ಇಳುವರಿ ಕುಂಠಿತವಾಗಿ ಏಕಾಏಕಿ ಟೊಮೆಟೋ ಬೆಲೆ 70 ರಿಂದ 80 ರೂ. ಗಡಿ ದಾಟಿದೆ.

Advertisement

ವಿದ್ಯುತ್‌ ದರ ಹೆಚ್ಚಳದಿಂದ ಜನರು ಕಂಗಾಲಾಗಿದ್ದು ಅಗತ್ಯವಸ್ತುಗಳ ಬೆಲೆ ಒಂದೊಂದಾಗಿ ಏರುತ್ತಲೇ ಇದೆ. ಕಳೆದ ಹಲವು ದಿನಗಳಿಂದ ತರಕಾರಿಗಳನ್ನು ತಿನ್ನದಂತಾಗಿದೆ. ಅಷ್ಟರ ಮಟ್ಟಿಗೆ ಹೆಚ್ಚಳವಾಗಿದೆ. ಇದರಿಂದ ಜನಸಾಮಾನ್ಯರ ಜೀವನ ಬಲು ದುಬಾರಿಯಾಗಿದೆ. ಆಷಾಢದಲ್ಲಿ ಯಾವುದೇ ಶುಭ-ಸಮಾರಂಭಗಳು ನಡೆಯುವುದಿಲ್ಲ. ಬೆಲೆ ಇಳಿಕೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಕಡಿಮೆಯಾಗ ಲಿರುವುದು ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಸಾಮಾನ್ಯವಾಗಿ ಟೊಮೆಟೋ ಇಲ್ಲದೆ ಯಾವುದೇ ತಿಂಡಿ ಸಾಂಬಾರು ಹಾಗೂ ಚಾಟ್ಸ್‌ ಮಾಡಲು ಸಾಧ್ಯವಿಲ್ಲ. ಆದರೆ ಈಗ ಅದರ ಬೆಲೆ ಕೇಳಿದರೆ ಹುಬ್ಬೇರಿಸುವಂತಾಗಿದೆ.

ರೈತರಿಗೆ ಸಂತಸ: ಮಾರುಕಟ್ಟೆಗೆ ಬರುತ್ತಿರುವ ಅವಕದ ಪ್ರಮಾಣದ ಕುಸಿತ, ಮಳೆ, ರೋಗಬಾಧೆಯಿಂದ ತೋಟಗಳು ನಾಶವಾಗಿದೆ. ಕಳೆದ ವಾರ ಕೆ.ಜಿ.ಗೆ 30 ರಿಂದ 40ರೂ.ಗೆ ಮಾರಾಟವಾಗುತ್ತಿದ್ದ ಟೊಮೆಟೋ ಇದೀಗ 70ರಿಂದ 80ರೂಗೆ ಏಕಾಏಕಿ ಏರಿಕೆಯಾಗಿರುವುದು ಬೆಳೆಗಾರರಿಗೆ ಸಂತಸ ತಂದಿದೆ. ಬೆಲೆ ಏರಿಕೆಯಿಂದಾಗಿ ಟೊಮೆಟೋ ಈಗ ಕೆಂಪು ಚಿನ್ನವಾಗಿದ್ದು ಬಡ, ಮದ್ಯಮ ವರ್ಗದವರಿಗೆ ಅಡಿಗೆಗೆ ಬಳಸಲು ಹುಣಸೇಹಣ್ಣಿನ ಮೊರೆ ಹೋಗಿದ್ದಾರೆ. ಟೊಮೆಟೋ ಬೆಲೆ ಏರಿಕೆಯಿಂದ ರೈತರಿಗೆ ಸಂತಸವಾಗಿದ್ದರೂ ಗ್ರಾಹಕ ಮಾತ್ರ ಕಂಗಾಲಾಗಿದ್ದಾನೆ.

ಬೆಳೆಗಳಿಗೆ ಬಿಳಿ ಕೀಟಬಾಧೆ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಟೊಮೆಟೋ ಬೆಳೆಯನ್ನು ಸಾಕಷ್ಟು ಬೆಳೆಯುತ್ತಾರೆ. ಬೆಳೆಗಳಿಗೆ ಬಿಳಿ ಕೀಟಬಾಧೆ ಕಾಡುತ್ತಿದ್ದು, ಇಳುವರಿ ಕುಂಠಿತವಾಗಿದೆ. ಆಷಾಢಮಾಸದಲ್ಲಿ ಸಾಮಾನ್ಯವಾಗಿ ತರಕಾರಿ ಬೆಲೆ ಹೆಚ್ಚಾಗಿರುವುದರಲ್ಲಿ ಸಾಲ ಹೊಲ ಮಾಡಿ ಬೆಳೆ ಬೆಳೆದು ಬೆಲೆ ಸಿಗದೆ ಕೈಸುಟ್ಟು ಕೊಳ್ಳುವುದು ಬೇಡ ಎಂದು ಕೆಲ ರೈತರು ಬೆಳೆ ಬೆಳೆಯಲು ಹಿಂದೇಟು ಹಾಕಿದ್ದು ಉತ್ಪಾದನೆ ಕಡಿಮೆಯಾದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾಗಿದೆ ಎಂದು ರೈತರು ಹೇಳುತ್ತಾರೆ.

ವಸ್ತುಗಳು ಬೆಲೆ ಏರಿಕೆ ಬಿಸಿ:ಬಯಲುಸೀಮೆಯ ಪ್ರದೇಶವಾದರೂ ಸಹ ಇರುವ ಅಲ್ಪಸ್ವಲ್ಪದ ಜಮೀನಿನಲ್ಲಿ ಹಾಗೂ ಇರುವ ಕೊಳವೆಬಾವಿಗಳಲ್ಲಿ ಇರುವ ನೀರಿನಲ್ಲಿಯೇ ರೈತರು ಟೊಮೆಟೋ ಮತ್ತು ಇತರೆ ತರಕಾರಿಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಈ ಬಾರಿ ಟೊಮೆಟೋ ಹೆಚ್ಚಾಗಿರುವುದರಿಂದ ರೈತರ ಕೈಹಿಡಿಯುವಂತಾಗಿದೆ. ಮಳೆ ಬಾರದೆ ರೈತ ಒಂದು ಕಡೆ ಕಂಗಾಲಾಗಿದ್ದಾನೆ. ಒಂದೊಂದು ಬೆಲೆಯೂ ಏರಿಕೆಯಾಗಿರು ತ್ತಿರುವುದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಬೇಳೆಕಾಳುಗಳು ಸಹ ಏರಿಕೆಯಾಗಿರುವುದರಿಂದ ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ. ಟೊಮೆಟೋ ಗಗನಕ್ಕೇರಿರುವುದರಿಂದ ಗ್ರಾಹಕರಿಗೆ ಪ್ರತಿ ನಿತ್ಯದ ವಸ್ತುಗಳು ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ.

Advertisement

ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆಯಿಂದಾಗಿ ವಿವಿಧ ಮಾರುಕಟ್ಟೆಗಳಿಂದ ಟೊಮೆಟೋ ಮತ್ತು ಇತರೆ ತರಕಾರಿಗಳನ್ನು ತಂದು ವ್ಯಾಪಾರ ಮಾಡಲಾಗುತ್ತಿದೆ. ಸಾಗಾಣಿಕಾ ವೆಚ್ಚ ದುಬಾರಿಯಾಗಿದ್ದರೂ ಸಹ ಹೆಚ್ಚು ಬೆಲೆ ಕೊಟ್ಟು ತರಕಾರಿಗಳನ್ನು ಖರೀದಿಸಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ಟೊಮೆಟೋ ಹೆಚ್ಚು ಬೆಲೆಯಾಗಿದೆ. ● ಆನಂದ್‌, ತರಕಾರಿ ವ್ಯಾಪಾರಿ.

ಎಷ್ಟೇ ಬೆಲೆಯಾದರೂ ಸಹ ಟೊಮೆಟೋ ಹಣ್ಣನ್ನು ಖರೀದಿಸಬೇಕು. ಯಾವುದೇ ಅಡುಗೆ ಮಾಡಬೇಕಾದರೆ ಟೊಮೆಟೋ ಇದ್ದರೆ ಮಾತ್ರ ರುಚಿ. ಯಾವುದೇ ಅಡುಗೆ ಮಾಡಲು ಆಗುವುದಿಲ್ಲ. ಎಷ್ಟೇ ಪ್ರಮಾಣದಲ್ಲಿ ಹುಣಸೇಹಣ್ಣನ್ನು ಹಾಕಿದರೂ ಸಹ ಟೊಮೆಟೋ ಹಣ್ಣಿನ ರುಚಿ ಸಿಗುವುದಿಲ್ಲ. ● ನಂದಿನಿ, ಗ್ರಾಹಕಿ.

ಬೆಲೆ ಏರಿಕೆ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಸಾಲ ಮಾಡಿ ಟೊಮೆಟೋ ಮತ್ತು ಇತರೆ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಇರುವ ಬೋರ್‌ವೆಲ್‌ ಗಳಲ್ಲಿ ನೀರಿನಿಂದ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಒಂದು ಬಾರಿ ಏರಿಕೆಯಾದರೆ, ಒಂದು ಬಾರಿ ಇಳಿಕೆಯಾಗುತ್ತದೆ. ಸರ್ಕಾರ ರೈತರಿಗೆ ಯಾವುದೇ ಬೆಳೆ ಬೆಳೆಯಲಿ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಇದರಿಂದ ರೈತರು ಆರ್ಥಿಕವಾಗಿ ಚೇತರಿಸಿಕೊಳ್ಳಲು ಅನುಕೂಲವಾಗುತ್ತದೆ. ● ರಮೇಶ್‌, ರೈತ

Advertisement

Udayavani is now on Telegram. Click here to join our channel and stay updated with the latest news.

Next