Advertisement

ಅಂತಿಂಥ ಹಬ್ಬವಲ್ಲ ಟೊಮ್ಯಾಟೋ ಹಬ್ಬ!

06:30 AM Feb 22, 2018 | Team Udayavani |

ನಮ್ಮಲ್ಲಿ ಹೋಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ಬಣ್ಣದ ಓಕುಳಿಯನ್ನು ಎರಚಿ ಸಂಭ್ರಮ ಪಡುತ್ತೇವೆ. ಅದೇ ರೀತಿಯಾದ ಒಂದು ಹಬ್ಬ ಸ್ಪೇನ್‌ನಲ್ಲಿಯೂ ಆಚರಿಸುತ್ತಾರೆ. ಅದೇ ಲಾ ಟೊಮ್ಯಾಟಿನಾ! ಅಲ್ಲಿ ಬಣ್ಣಗಳಿಗೆ ಬದಲಾಗಿ ಟೊಮೆಟೊ ಹಣ್ಣುಗಳನ್ನು ಎಸೆದು ಸಂಭ್ರಮಿಸುತ್ತಾರೆ.

Advertisement

ಭಾರತದಂತೆಯೇ ವಿದೇಶಗಳಲ್ಲಿಯೂ ಹಲವು ವಿಶೇಷ ಹಬ್ಬಗಳನ್ನು ನೋಡಬಹುದು. ಅದರಲ್ಲಿ ಸ್ಪೇನ್‌ನ ಬುನೋಲ್‌ ನಗರದಲ್ಲಿ ನಡೆಯುವ “ಲಾ ಟೊಮ್ಯಾಟಿನಾ’ ಆಚರಣೆಯೂ ಒಂದು. ಟೊಮ್ಯಾಟೋ ಹಣ್ಣುಗಳಿಂದ ಪರಸ್ಪರ ಹೊಡೆದಾಡುತ್ತಾ ಸಂಭ್ರಮಪಡುವುದೇ ಈ ಹಬ್ಬದ ವೈಶಿಷ್ಟ.

ಟನ್‌ಗಟ್ಟಲೆ ಟೊಮ್ಯಾಟೊ: ಹಬ್ಬದ ದಿನ ನಗರದ ಚೌಕವೊಂದರ ಬಳಿ ಸಾವಿರಾರು ಜನರು ಸೇರುತ್ತಾರೆ. ನಿಗದಿತ ಸಮಯದಲ್ಲಿ ಹಬ್ಬ ಶುರುವಾಗುತ್ತದೆ. ಆಗ ಜನರು ಪರಸ್ಪರ ಟೊಮ್ಯಾಟೊ ಹಣ್ಣುಗಳನ್ನು ಎರಚಿ ಖುಷಿ ಪಡುತ್ತಾರೆ. ಈ ಹಬ್ಬ ಎಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ ಅಂದರೆ, ನೂರಾರು ಟನ್‌ ಟೊಮ್ಯಾಟೊ ಬೇಕಾಗುತ್ತದೆ. ದೊಡ್ಡ ದೊಡ್ಡ ಲಾರಿಗಳನ್ನು ಟೊಮ್ಯಾಟೊಗಳನ್ನು ತರಲಾಗುತ್ತದೆ. 2015ರಲ್ಲಿ ನಡೆದ ಈ ಹಬ್ಬದಲ್ಲಿ 1 ಲಕ್ಷದ 45 ಸಾವಿರ ಕೆ.ಜಿ ಟೊಮ್ಯಾಟೊ ಬಳಸಲಾಗಿತ್ತು!

ದೇಶ-ವಿದೇಶಗಳಿಂದ ಬರ್ತಾರೆ: ಈ ಹಬ್ಬದಲ್ಲಿ ಗಂಡು-ಹೆಣ್ಣು ಎಂಬ ಭೇದ-ಭಾವವಿಲ್ಲ. ಎಲ್ಲರೂ ಟೊಮ್ಯಾಟೊದ ಕೆಂಪು, ಹಳದಿ ರಂಗಿನಿಂದ ಕಂಗೊಳಿಸುತ್ತಾರೆ. ಮನೋರಂಜನೆಗಾಗಿ ನಡೆಯುವ ಈ ಹಬ್ಬವನ್ನು ನೋಡೋಕೆ ಅಂತಾನೇ ದೇಶ-ವಿದೇಶಗಳಿಂದ ಜನ ಬರುತ್ತಾರೆ!

ಹಬ್ಬಕ್ಕೂ ಇದೆ ನಿಯಮ: ಈ ಆಚರಣೆಗೆ ಹಲವು ನಿಯಮಗಳನ್ನು ಮಾಡಲಾಗಿದೆ. ಆಚರಣೆಯ ವೇಳೆ ಬಾಟಲಿ ಮತ್ತು ಇತರ ವಸ್ತುಗಳನ್ನು ಎಸೆಯುವಂತಿಲ್ಲ. ಟೀ ಶರ್ಟ್‌ ಹರಿಯುವಂತಿಲ್ಲ, ಬಿಚ್ಚುವಂತಿಲ್ಲ. ಬೇರೆಯವರಿಗೆ ತೊಂದರೆ ಕೊಡುವಂತಿಲ್ಲ. ಬಂದೂಕಿನ ತುಪಾಕಿಯಲ್ಲಿ ಗುಂಡು ಹಾರಿಸಿದಾಗ ಆಚರಣೆ ನಿಲ್ಲಿಸಬೇಕು. ರಕ್ಷಣಾ ಸಿಬ್ಬಂದಿಯನ್ನು ಹೆದರಿಸುವಂತಿಲ್ಲ.

Advertisement

ಹಬ್ಬದಲ್ಲಿ ಪಾಲ್ಗೊಳ್ಳಲು ಮುಂಚಿತವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು ಮುಂತಾದ ನಿಯಮಗಳನ್ನು ಇಲ್ಲಿ ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು. 
 
ಹಬ್ಬದ ಇತಿಹಾಸ: ಸ್ಪೇನ್‌ನ ಬೂನಲ್‌ ವೇಲೇಯನ್‌ ನಗರದಲ್ಲಿ 1945ರಲ್ಲಿ ಮೊದಲ ಬಾರಿಗೆ ಈ ಆಚರಣೆ ನಡೆಯಿತು. ಆ ವರ್ಷ ಆಗಸ್ಟ್‌ನಲ್ಲಿ ನಗರದ ಚೌಕವೊಂದರ ಬಳಿ ಕಾಲ ಕಳೆಯಲು ಸೇರುವ ಜನರು ತಮಾಷೆಗಾಗಿ ಇದನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ ಬಬ್ಬ ಕಾಲು ಜಾರಿ ಕೆಳಕ್ಕೆ ಬಿದ್ದ. ಇದರಿಂದಾಗಿ ದೊಡ್ಡ ಗಲಾಟೆ ನಡೆದು, ಮಾರುಕಟ್ಟೆಯಲ್ಲಿದ್ದ ತರಕಾರಿ ಮತ್ತು ಟೊಮ್ಯಾಟೊಗಳಿಂದ ಜನ ಹೊಡೆದಾಡಿಕೊಂಡರು.

ಆಗ ಪೊಲೀಸರು ಈ ಆಚರಣೆಗೆ ನಿಷೇಧ ಹೇರಿದರು. ಮುಂದೆ 1957ರಲ್ಲಿ ಜನರು ಶವಪೆಟ್ಟಿಗೆಯಲ್ಲಿ ಟೊಮ್ಯಾಟೊ ಹಾಕಿಕೊಂಡು, ಹಬ್ಬಕ್ಕೆ ಅವಕಾಶ ನೀಡುವಂತೆ ಪ್ರತಿಭಟಿಸಿದರು. ಆಗ ಸರ್ಕಾರ ಈ ಆಚರಣೆಯನ್ನು ಅಧಿಕೃತವೆಂದು ಘೋಷಿಸಿತು. ಅಂದಿನಿಂದಲೂ ಈ ಹಬ್ಬ ಸ್ಪೇನ್‌ನಲ್ಲಿ ಬಹು ಜನಪ್ರಿಯ ಆಚರಣೆಯಾಗಿ ನಡೆದುಕೊಂಡು ಬಂದಿದೆ. 

* ದಂಡಿನಶಿವರ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next