Advertisement
ಮುಂಗಾರು ಮಳೆಯ ಕೊರತೆ ಹಾಗೂ ಅಕಾಲಿಕ ಮಳೆಯಿಂದ ಟೊಮೆಟೋ ಬೆಲೆ ಕಳೆದ ಒಂದು ತಿಂಗಳಿಂದ ಏರುತ್ತೇ ಇತ್ತು. ಆರಂಭದಲ್ಲಿ 10ರಿಂದ 20 ರೂ.ಗಳಿಗೆ ಮಾರಾಟವಾಗುತ್ತಿದ್ದ ಟೊಮೆಟೋ 100 ರೂ.ಗಳ ವರೆಗೂ ತಲುಪಿತ್ತು. ಇದು ವ್ಯಾಪಾರಸ್ಥರಿಗೆ ಲಾಭ ತಂದರೆ, ಗ್ರಾಹಕರಿಗೆ ಟೊಮೆಟೋ ಖರೀದಿ ಕಣ್ಣೀರು ತರಿಸಿತ್ತು.
Related Articles
Advertisement
ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಹೊಸಕೋಟೆ, ಆನೇಕಲ್, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ಮುಳಬಾಗಿಲು ಮುಂತಾದ ಕಡೆಗಳಿಗೆ ಬೆಂಗಳೂರು ಮಾರುಕಟ್ಟೆಗೆ ಬರುತ್ತಿದ್ದ ಟೊಮೆಟೋ ಪ್ರಮಾಣದಲ್ಲಿ ಇಳಿಕೆ ಇದ್ದರೂ, ಗ್ರಾಹಕರು ಹುಣುಸೆ ಹಣ್ಣಿಗೆ ಮೊರೆ ಹೋಗಿರುವ ಕಾರಣ ಟೊಮೆಟೋ ಮಾರಾಟವೂ ಕೂಡ ಕುಸಿದಿದ್ದು, ಬೆಲೆ ಇಳಿಮುಖವಾಗುತ್ತಿದೆ.
ಜತೆಗೆ ಇದೀಗ ಬಿತ್ತನೆಯಾಗಿರುವ ಬೆಳೆ ಕೊಯ್ಲಿಗೆ ಬರಲು ಇನ್ನೂ ಮೂರು ತಿಂಗಳ ಅವಧಿ ಇರುವುದರಿಂದ ಮಾರುಕಟ್ಟೆಯಲ್ಲಿ ಈಗಿನ ಬೆಲೆಯೇ ಮುಂದುವರೆಯುವ ಸಾಧ್ಯತೆ ಇದೆ ಎಂದು ಟೊಮೆಟೋ ಮಂಡಿ ಮಾಲೀಕ ಸತ್ಯನಾರಾಯಣ ರೆಡ್ಡಿ ತಿಳಿಸಿದ್ದಾರೆ.
ತರಕಾರಿಗಳ ಬೆಲೆ ಶೇ.15ರಷ್ಟು ಹೆಚ್ಚಳ: ದಿನಬಳಕೆಯ ತರಕಾರಿ ಬೆಲೆಯಲ್ಲೂ ಅಲ್ಪಸ್ವಲ್ಪ ವ್ಯತ್ಯಾಸಗಳಾಗಿದ್ದು, ಮೂಲಂಗಿ ಪ್ರತಿ ಕೆಜಿಗೆ 18ರಿಂದ 20 ರೂ., ತೊಂಡೆಕಾಯಿ 15 ರೂ., ಬದನೆಕಾಯಿ ಕೆಜಿಗೆ 22ರಿಂದ 24ರೂ.ಗಳು, ನಾಟಿ ಕ್ಯಾರೆಟ್ 52ರಿಂದ 54 ರೂ.ಗಳಿದ್ದು, ಊಟಿ ಕ್ಯಾರೆಟ್ 64 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.
ಬೀನ್ಸ್ ಪ್ರತಿ ಕೆಜಿಗೆ 22ರಿಂದ 23, ಈರುಳ್ಳಿ 12ರಿಂದ 13 ರೂ.ಗಳು, ಸೌತೇಕಾಯಿ 26 ರೂ., ನಿಂಬೆಹಣ್ಣು 42 ರೂ.ಗಳು, ಅಣಬೆ 120, ಬಟನ್ ಅಣಬೆ 125ರಿಂದ 130, ಏಲಕ್ಕಿ ಬಾಳೆಹಣ್ಣು ಕೆಜಿಗೆ 62ರಿಂದ 65 ರೂ.ಗಳಿದ್ದು, ಪಚ್ಚಬಾಳೆ ಪ್ರತಿ ಕೆಜಿಗೆ 22ರಿಂದ 23 ರೂ.ಗಳಿದೆ.
ಬಟಾಣಿ ಕೆಜಿಗೆ 70 ರೂ., ಬೀಟ್‌ರೂಟ್ 30 ರೂ., ಕೋಸು 15 ರೂ., ಕೆಂಪು ಕೋಸು 55 ರೂ.ಗಳು, ಡಬಲ್ ಬೀನ್ಸ್ 110 ರೂ., ನುಗ್ಗೆ ಕಾಯಿ ಕೆಜಿಗೆ 45ರಿಂದ 50ರೂ.ನಂತೆ ಮಾರಲಾಗುತ್ತಿದೆ. ಆಲೂಗಡ್ಡೆ ಕೆಜಿಗೆ 16 ರೂ.ಇದ್ದು, ಕಳೆದ ಒಂದೆರಡು ವಾರಗಳಿಗೆ ಹೋಲಿಕೆ ಮಾಡಿದರೆ ಕೇವಲ 2ರಿಂದ 4 ರೂ.ಗಳ ವ್ಯತ್ಯಾಸ ಕಂಡು ಬಂದಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಮಾತ್ರ ಎಲ್ಲ ಬಗೆಯ ತರಕಾರಿಗಳ ಬೆಲೆಯಲ್ಲಿ ಶೇ.10ರಿಂದ 15ರಷ್ಟು ಏರಿಕೆ ಕಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಸಗಟು ಮಾರುಕಟ್ಟೆಯಲ್ಲಿ ಅತ್ಯುತ್ತಮ ದರ್ಜೆಯ ಟೊಮೆಟೋಗೆ 67 ರೂ., 2ನೇ ದರ್ಜೆ ಟೊಮೆಟೋಗೆ 50ರಿಂದ 55 ರೂ. ಇದೆ. 3ನೇ ದರ್ಜೆಯ ಟೊಮೆಟೋ ದರ 35ರಿಂದ 35ರೂ.ನಂತೆ ಮಾರಾಟವಾಗುತ್ತಿದೆ. ಚಿಲ್ಲರೆ ವ್ಯಾಪಾರಸ್ಥರು ಸಗಟು ಮಾರುಕಟ್ಟೆಯ ದರಕ್ಕಿಂತ 10ರಿಂದ 15 ರೂ.ದರ ಹೆಚ್ಚಳ ಮಾಡಿ ಮಾರಾಟ ಮಾಡುತ್ತಿದ್ದು, ಪ್ರತಿ ಕೆಜಿಗೆ 75ರಿಂದ 80 ರೂ.ಬೆಲೆ ಇದೆ.-ಸುರೇಂದ್ರಬಾಬು, ಟೊಮೆಟೋ ವ್ಯಾಪಾರಿ. ಪ್ರಸ್ತುತ ಹುಣಸೇ ಹಣ್ಣಿನ ಮಾರಾಟ ಹೆಚ್ಚಾಗಿರಬಹುದು. ಅದು ತಾತ್ಕಾಲಿಕ ಮಾತ್ರ. ಆದ್ದರಿಂದ ಮುಂದಿನ ಟೊಮೆಟೋ ಫಸಲು ಮಾರುಕಟ್ಟೆಗೆ ಬರುವವರೆಗೂ ಟೊಮೆಟೋ ಬೆಲೆ ಹಾಗೆಯೇ ಮುಂದುವರೆಯಲಿದೆ.
-ಕೇಶವ, ತರಕಾರಿ ವ್ಯಾಪಾರಿ. * ಸಂಪತ್ ತರೀಕೆರೆ