ಹೈದರಾಬಾದ್: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಬಹುನಿರೀಕ್ಷಿತ ಸೈನ್ಸ್ – ಫೀಕ್ಷನ್ ʼಕಲ್ಕಿ 2898 ಎ.ಡಿʼ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ವೊಂದು ಹೊರಬಿದ್ದಿದೆ.
ಈಗಾಗಲೇ ʼ ಕಲ್ಕಿ 2898 ಎಡಿʼ ಚಿತ್ರದ ಪುಟ್ಟದೊಂದು ಝಲಕ್ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು, ಚಿತ್ರದ ದುಬಾರಿ ವಿಎಫ್ ಎಕ್ಸ್ ಹಾಗೂ ದೃಶ್ಯಗಳು ಗಮನ ಸೆಳದಿದೆ.
ನಿರ್ದೇಶಕ ನಾಗ್ ಅಶ್ವಿನ್ ಸಿನಿಮಾದ ಮೇಲೆ ದೊಡ್ಡಮಟ್ಟದ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಇದೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾವಾಗಲಿದ್ದು,‘ಮಹಾಭಾರತದಿಂದ ಆರಂಭ ಆಗುವ ಸಿನಿಮಾದ ಕಥೆ 2898 ಎಡಿಯಲ್ಲಿ ಕೊನೆಗೊಳ್ಳಲಿದೆ. ಸುಮಾರು ಆರು ಸಾವಿರ ವರ್ಷಗಳ ಕಥೆ ಸಿನಿಮಾದಲ್ಲಿದೆ. ನಾವು ಜಗತ್ತುಗಳನ್ನು ಸೃಷ್ಟಿಸಲು ಪ್ರಯತ್ನಿಸಿದ್ದೇವೆ” ಎಂದು ಈ ಹಿಂದೆ ನಾಗ್ ಅಶ್ವಿನ್ ಕಾರ್ಯಕ್ರಮವೊಂದರಲ್ಲಿ ಸಿನಿಮಾದ ಬಗ್ಗೆ ಮಾತನಾಡುತ್ತಾ ಹೇಳಿದ್ದರು.
ಸಿನಿಮಾದ ಪ್ರಚಾರವನ್ನು ವಿಭಿನ್ನವಾಗಿ ಮಾಡಿರುವ ಚಿತ್ರತಂಡ ಇದೀಗ ಎಲ್ಲರೂ ಕಾತರದಿಂದ ಕಾಯುತ್ತಿದ್ದ ಟ್ರೇಲರ್ ರಿಲೀಸ್ ಡೇಟ್ ನ್ನು ಅನೌನ್ಸ್ ಮಾಡಿದೆ.
ಪ್ರಭಾಸ್(ಕಲ್ಕಿ) ಎತ್ತರದಲ್ಲಿ ನಿಂತಿರುವ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿ, ಟ್ರೇಲರ್ ಇದೇ ಜೂನ್ 10 ರಂದು ಬಿಡುಗಡೆ ಆಗಲಿದೆ. ಪೋಸ್ಟರ್ ಮೇಲೆ “ಎಲ್ಲವೂ ಬದಲಾಗಲಿದೆ” ಎಂದು ಬರೆಯಲಾಗಿದೆ. ಆ ಮೂಲಕ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ʼಕಲ್ಕಿʼ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಲು ಪ್ರಮುಖ ಕಾರಣಗಳಲ್ಲಿ ಅದರ ಪಾತ್ರವರ್ಗವೂ ಒಂದು. ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ, ಮತ್ತು ದೀಪಿಕಾ ಪಡುಕೋಣೆ ಮುಂತಾದ ಖ್ಯಾತ ಕಲಾವಿದರು ನಟಿಸಿದ್ದಾರೆ.
ವರ್ಷದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ʼ ಕಲ್ಕಿ 2898 ಎಡಿʼ ಇದೇ ಜೂನ್ 27 ರಂದು ರಿಲೀಸ್ ಆಗಲಿದೆ.