ಹೈದರಾಬಾದ್: ಟಾಲಿವುಡ್ ಸಿನಿಮಾರಂಗದ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಒಂದಾಗಿರುವ ʼಕಣ್ಣಪ್ಪʼ ಚಿತ್ರಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕಿದ್ದ ನೂಪರ್ ಸನನ್ ಅವರು ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ವಿಷ್ಣು ಮಂಚು ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಈ ನಡುವೆ ಸಿನಿಮಾದ ಬಗ್ಗೆ ಮತ್ತೊಂದು ಬಿಗ್ ಅಪ್ಡೇಟ್ ಹೊರಬಂದಿದೆ.
ಇತ್ತೀಚೆಗಷ್ಟೇ ʼಕಣ್ಣಪ್ಪʼ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ಅವರು ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿತ್ತು. ಮೂಲಗಳ ಪ್ರಕಾರ ಪ್ರಭಾಸ್ ಸಿನಿಮಾದಲ್ಲಿ ʼಶಿವʼನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಭಾರೀ ಬಜೆಟ್ ನಲ್ಲಿ ತಯಾರಾಗುತ್ತಿರುವ ʼಕಣ್ಣಪ್ಪʼ ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ನಯನತಾರಾ ಪಾರ್ವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಪ್ರಭಾಸ್ ಹಾಗೂ ನಯನತಾರಾ 16 ವರ್ಷದ ಬಳಿಕ ಒಂದೇ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು “ಓಟಿಟಿ ಪ್ಲೇʼ ವರದಿ ಮಾಡಿದೆ.
ಈ ಹಿಂದೆ ಪ್ರಭಾಸ್ ಹಾಗೂ ನಯನತಾರಾ 2007 ರಲ್ಲಿ ತೆರೆಕಂಡ ʼಯೋಗಿʼ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಸದ್ಯ ಪ್ರಭಾಸ್ – ನಯನತಾರಾ ಜೊತೆಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ಮುಕೇಶ್ ಸಿಂಗ್ ನಿರ್ದೇಶನದ ಈ ಚಿತ್ರಕ್ಕೆ ಪರುಚೂರಿ ಗೋಪಾಲಕೃಷ್ಣ, ಬುರ್ರಾ ಸಾಯಿ ಮಾಧವ್ ಮತ್ತು ತೋಟ ಪ್ರಾಸಾ ಕಥೆ ಬರೆದಿದ್ದಾರೆ. ಅವಾ ಎಂಟರ್ಟೈನ್ಮೆಂಟ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.