ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮೀಪದಲ್ಲಿರುವ ಟೋಲ್‌ಗೇಟ್‌ಗಳ ಕುರಿತು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳೂರಿಗೆ ಬಂದಾಗ ದೂರು ನೀಡಿದ್ದು, ಅದರ ಆಧಾರದಲ್ಲಿ ಸಚಿವರು ಮಾ. 15ರಂದು ಅಪರಾಹ್ನ 2.30ಕ್ಕೆ ಸಭೆ ಕರೆದಿದ್ದಾರೆ. ಅದರಲ್ಲಿ ರಾಜ್ಯದ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಭಾಗವಹಿಸಲಿದ್ದು, ಅಲ್ಲಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲಾಗುವುದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಶನಿವಾರ ಅಮ್ಮುಂಜೆಯಲ್ಲಿ ಪತ್ರಕರ್ತರ ಜತೆ ಮಾತನಾಡಿ, ಬಿ..ಸಿ.ರೋಡಿನಿಂದ ಮುಕ್ಕ ಎನ್‌ಐಟಿಕೆವರೆಗಿನ ಹೆದ್ದಾರಿಯನ್ನು ಇರ್ಕಾನ್ ಸಂಸ್ಥೆ ನೇರವಾಗಿ ರಾಷ್ಟ್ರೀಯ ಹೆದ್ದಾರಿಯಡಿ ಮಾಡಿದ್ದು, ಅವರು ಎನ್‌ಐಟಿಕೆ ಮತ್ತು ಬ್ರಹ್ಮರಕೂಟ್ಲುನಲ್ಲಿ ಟೋಲ್ ಮಾಡಿದ್ದಾರೆ.
ತಲಪಾಡಿಯಿಂದ ಹೆಜಮಾಡಿ, ಕುಂದಾಪುರವರೆಗಿನ ಹೆದ್ದಾರಿಯನ್ನು ಬಿಒಟಿ (ಬಿಲ್ಡ್ ಆಪರೇಟ್ ಟ್ರಾನ್ಸ್‌ಫರ್) ಯೋಜನೆಯಡಿ ನವಯುಗ ಸಂಸ್ಥೆ ಮಾಡಿದ್ದು, ಅವರು ತಲಪಾಡಿ ಮತ್ತು ಹೆಜಮಾಡಿಯಲ್ಲಿ ಟೋಲ್ ಮಾಡಿದ್ದಾರೆ.
ಟೋಲ್ ಸಮಸ್ಯೆ ಕುರಿತು ಈಗಾಗಲೇ ಸರಕಾರದ ಗಮನಕ್ಕೆ ತಂದು 2-3 ಸಭೆಗಳನ್ನು ಮಾಡಿದ್ದೇವೆ. ಅದರಲ್ಲಿ ಸಾಕಷ್ಟು ಕಾನೂನಾತ್ಮಕ ಸಮಸ್ಯೆಗಳಿವೆ. ಕಂಪೆನಿಯವರು ಹಾಕಿದ ಹಣ, ಮುಂದಿನ ನಿರ್ವಹಣೆ ಹೇಗೆ ಎಂಬ ಗೊಂದಲಗಳು ಕೂಡ ಇದೆ. ಹೀಗಾಗಿ ಕಾನೂನು ತೊಡಕುಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದರು.ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಜತೆಗಿದ್ದರು.