Advertisement

Toll Plaza ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿ ತೆರವು: ಜು.20ರ ಗಡುವು ನೀಡಿದ ಅಧಿಕಾರಿ

11:51 PM Jul 05, 2024 | |

ಉಳ್ಳಾಲ: ದೇಶಾದ್ಯಂತ ಹೆದ್ದಾರಿ ಬದಿಯಲ್ಲಿರುವ ತಾತ್ಕಾಲಿಕ ಅಂಗಡಿಗಳ ತೆರವಿಗೆ ಸುಪ್ರೀಂ ಕೋರ್ಟ್‌ ಆದೇಶ ನೀಡಿರುವ ಹಿನ್ನೆಲೆ ಯಲ್ಲಿ ಕುಂದಾಪುರದಿಂದ ತಲಪಾಡಿವರೆಗಿನ ರಾ.ಹೆ.66ರ ಬದಿಯಲ್ಲಿರುವ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಂಗಳ ಹಿಂದೆ ನೋಟೀಸು ಜಾರಿ ಮಾಡಿದ್ದರೂ ವ್ಯಾಪಾರಿಗಳು ಸ್ಪಂದಿಸಲಿಲ್ಲ. ಈ ಹಿನ್ನೆಲೆಯಲ್ಲಿ ತಲಪಾಡಿ ಟೋಲ್‌ ಪ್ಲಾಝಾ ಬಳಿ ಅಂಗಡಿ ತೆರವಿಗೆ ಟೋಲ್‌ ನಿರ್ವಹಣೆ ಮಾಡುವ ಸಂಸ್ಥೆಯಾಗಿರುವ ಉಡುಪಿ ಟೋಲ್‌ ಪ್ರೈ.ಲಿ.ಸಂಸ್ಥೆಯ ಸಿಬಂದಿ ಮತ್ತು ಅಧಿಕಾರಿಗಳು ಆಗಮಿಸಿದ್ದು, ಸ್ಥಳೀಯರು ಮತ್ತು ಅಂಗಡಿ ಮಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದರು.

Advertisement

ಬಳಿಕ ಮಾತುಕತೆ ನಡೆಸಿ, ತೆರವಿಗೆ ಜು. 20ರ ವರೆಗೆ ತೆರವಿಗೆ ಕಾಲಾವಕಾಶ ನೀಡಲಾಯಿತು.ಕೋರ್ಟ್‌ ಆದೇಶದಂತೆ ಟೋಲ್‌ ಫ್ಲಾಝಾ ಸಿಬಂದಿ ಕ್ರೇನ್‌ ಮತ್ತು ಜೆಸಿಬಿ ಮೂಲಕ ಅಂಗಡಿ ತೆರವಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಹೆದ್ದಾರಿ ಬದಿಯ ಅಂಗಡಿ ಮಾಲಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಾಚರಣೆಯನ್ನು ತಡೆದರು. ಗಡಿನಾಡು ರಕ್ಷಣ ವೇದಿಕೆಯ ಸಿದ್ಧಿಕ್‌ ತಲಪಾಡಿ, ಗ್ರಾಮ ಪಂಚಾಯತ್‌ ಸದಸ್ಯ ವೈಭವ್‌ ತಲಪಾಡಿ ಅವರು ಅಂಗಡಿ ಮಾಲಕರ ಪರವಾಗಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಆದೇಶ ಪಾಲಿಸುವುದು ಕರ್ತವ್ಯ
ರಾಷ್ಟ್ರೀಯ ಹೆದ್ದಾರಿ 66ರ ಟೋಲ್‌ ನಿರ್ವಹಣ ಸಂಸ್ಥೆಯ ಹಿರಿಯ ಪ್ರಬಂಧಕ ಎ.ಎಸ್‌. ತಿಮ್ಮಯ್ಯ ಮಾತನಾಡಿ, ಸುಪ್ರಿಂ ಕೋರ್ಟ್‌ ಆದೇಶದಂತೆ ತೆರವು ಅನಿವಾರ್ಯವಾಗಿದೆ. ತಲಪಾಡಿ ಯಿಂದ ಕುಂದಾಪುರದ ವರೆಗೆ ಹೆದ್ದಾರಿ ಬದಿಯ ಅಂಗಡಿ ಮಾಲಕರಿಗೆ ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಟಿಸು ನೀಡಿದೆ. ಸುಪ್ರಿಂಕೋರ್ಟ್‌ ನಿಗದಿಪಡಿಸಿದ ಪ್ರದೇಶದ ಎಲ್ಲ ಅಂಗಡಿಗಳನ್ನು ತೆರವು ಮಾಡಬೇಕಾಗಿದೆ. ನಂತೂರಿನಿಂದ -ತಲಪಾಡಿಯವರೆಗೆ ತೆರವಿಗೆ ಜು. 20ರ ವರೆಗೆ ಅವಕಾಶ ನೀಡಲಾಗಿದೆ. ಹಾಲಿನ ಬೂತ್‌ಗಳಿಗೆ ಷರತ್ತುಗಳ ಆಧಾರದಲ್ಲಿ ವಿನಾಯಿತಿ ನೀಡಿದ್ದು, ಇಲ್ಲಿ ಸಿಗರೇಟ್‌ ಸಹಿತ ಇತರ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಹಾಗೂ ತಡರಾತ್ರಿ ವರೆಗೆ ತೆರೆದಿಡುವಂತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next