ಟೋಲ್‌ಗೇಟ್ ವಿರುದ್ಧ ಹೋರಾಟ ಸಮಿತಿಯ ಹೋರಾಟ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ದ.ಕ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಭೇಟಿ ನೀಡಿ ಮಾತುಕತೆ ನಡೆಸಿದರು.
Advertisement
ಈ ಸಂದರ್ಭ ಸುರತ್ಕಲ್ ಟೋಲ್‌ಗೇಟ್ ಸ್ಥಿತಿಗತಿ ವಿವರಿಸಿದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಮತ್ತು ಮುನೀರ್ ಕಾಟಿಪಳ್ಳ ಅವರು ಪಾಲಿಕೆ ವ್ಯಾಪ್ತಿಯಲ್ಲಿ ಟೋಲ್ ಕೇಂದ್ರ ಸ್ಥಾಪಿಸಿರುವುದೇ ಅಕ್ರಮ. ಅಲ್ಲದೆ 10 ಕಿ.ಮೀ. ಅಂತರದಲ್ಲಿ ಹೆಜಮಾಡಿ ಟೋಲ್ ಕೇಂದ್ರವಿದೆ. ಕನಿಷ್ಠ ಅಂತರವನ್ನೂ ಕಾಯ್ದುಕೊಳ್ಳಲಾಗಿಲ್ಲ. ಜನವರಿಯಲ್ಲಿ ಹೆಜಮಾಡಿ ಟೋಲ್‌ಗೇಟ್ ಜತೆ ವಿಲೀನಕ್ಕೆ ರಾಜ್ಯ ಸರಕಾರವೇ ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸಾರಿಗೆ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರವು ಪರಿಗಣಿಸಿಲ್ಲ. ಟೋಲ್ ರದ್ದಾಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.
ಟೋಲ್‌ಗೇಟ್ ಮುಚ್ಚುವುದಾಗಿ ಭರವಸೆ ನೀಡಿ ಈಗ ಹಿಂದೆ ಸರಿದಿರುವ ಸಂಸದ ನಳಿನ್ ಕುಮಾರ್ ರಾಜೀನಾಮೆ ನೀಡಲಿ ಎಂದು ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ ಮತ್ತು ಟಿ.ಎನ್. ರಮೇಶ್ ಆಗ್ರಹಿಸಿದರು. ಹುಸೈನ್ ಕಾಟಿಪಳ್ಳ ಸ್ವರಚಿತ ಕವನ ಹಾಡುವ ಮೂಲಕ ಗಮನ ಸೆಳೆದರು. ಕೆನರಾ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಆರ್.ಡಿ. ಕಿಣಿ, ನ್ಯಾಯವಾದಿ ಸುಲಜ್ ಆರ್. ಕಿಣಿ ಹೋರಾಟಕ್ಕೆ ಬೆಂಬಲ ಘೋಷಿಸಿದರು. ರೇವತಿ, ದಯಾನಂದ ಶೆಟ್ಟಿ, ವೈ. ರಮಾನಂದ ರಾವ್, ವೈ.ರಾಘವೇಂದ್ರ ರಾವ್, ಬಿ.ಕೆ. ಇಮಿಯಾಝ್, ರೆಹಮಾನ್ ಖಾನ್ ಕುಂಜತ್ತಬೈಲು, ಅಬೂಬಕರ್ ಬಾವಾ, ಅಬ್ದುಲ್ ಸತ್ತಾರ್, ವಿಜಯ್ ಅರಾನಾ ಭಾಗವಹಿ ಸಿದ್ದರು. ಕಂದಾಯ ಕಾರಿ ನವೀನ್ ಸಹಾಯಕ ಆಯುಕ್ತರ ಜತೆಗಿದ್ದರು.