ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಜ್ಯೋತಿ ರಿಲೇ ಮತ್ತೂಮ್ಮೆ ಪ್ರಯಾಣ ಆರಂಭಿಸಿತು. ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಸರಿಯಾಗಿ 4 ತಿಂಗಳಿರುವಾಗ, ಗುರುವಾರ ಫುಕುಶಿಮಾ ದ್ವೀಪದಿಂದ ಈ ಜ್ಯೋತಿ ಹೊರಟಿತು.
ಜಪಾನಿನ 47 ನಗರ ಹಾಗೂ ದ್ವೀಪಗಳನ್ನು ಕ್ರಮಿಸಲಿರುವ ಈ ಟಾರ್ಚ್ ರಿಲೇ ವೇಳೆ ಹತ್ತು ಸಾವಿರ ಓಟಗಾರರು ಪಾಲ್ಗೊಳ್ಳಲಿದ್ದಾರೆ. ಆದರೆ ಕೋವಿಡ್-19 ಮುನ್ನೆಚ್ಚರಿಕೆಯ ಕಾರಣ ಮೊದಲ ಹಂತದ ವೇಳೆ ವೀಕ್ಷಕರಿಗೆ ನಿಷೇಧ ವಿಧಿಸಲಾಗಿದೆ.
2011ರ ಘೋರ ನ್ಯೂಕ್ಲಿಯರ್ ದುರಂತಕ್ಕೆ ಒಳಗಾದ ಫುಕುಶಿಮಾ ದ್ವೀಪದ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಜ್ಯೋತಿ ಬೆಳಗಿತು. ಅಂದು ಮಡಿದ ಸಾವಿರಾರು ಸಂತ್ರಸ್ತ ಕುಟುಂಬದ ಸದಸ್ಯರೆಲ್ಲ ಇದಕ್ಕೆ ಸಾಕ್ಷಿಯಾದರು. ಮೊದಲ ದಿನ ಜಪಾನಿನ ರಾಷ್ಟ್ರೀಯ ವನಿತಾ ಫುಟ್‌ಬಾಲ್ ತಂಡದ ಸದಸ್ಯರು ಒಲಿಂಪಿಕ್ಸ್ ಜ್ಯೋತಿಯನ್ನು ಹಿಡಿದು ಸಾಗಿದರು.
ನ್ಯೂಕ್ಲಿಯರ್ ದುರಂತ, ಸುನಾಮಿ ಸಂಕಟ, ಭೂಕಂಪ, ಬಾಂಬ್ ದಾಳಿ… ಹೀಗೆ ಎದುರಾದ ಎಲ್ಲ ಕಂಟಕಗಳನ್ನು ಮೀರಿನಿಂತ ನಗರ ಪ್ರದೇಶಗಳನ್ನು ಈ ರಿಲೇ ಹಾದು ಹೋಗಲಿದೆ.
“ಮುಂದೂಡಲ್ಪಟ್ಟ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುವುದು ನಮ್ಮ ಗುರಿ’ ಎಂಬುದಾಗಿ ಜಪಾನ್ ಪ್ರಧಾನಿ ಯೊಶಿಹಿಡೆ ಸುಗ ಹೇಳಿದ್ದಾರೆ.