ಟೋಕಿಯೊ: ಶೂಟಿಂಗ್‌ನಲ್ಲಿ ಭಾರತ ಸತತ ದ್ವಿತೀಯ ದಿನವೂ ಗುರಿ ತಪ್ಪಿದೆ. ಮನು ಭಾಕರ್ ಪಿಸ್ತೂಲ್‌ನ ತಾಂತ್ರಿಕ ಸಮಸ್ಯೆಯಿಂದಾಗಿ ಏಕಾಗ್ರತೆ ಕಳೆದುಕೊಂಡರು. ಯಶಸ್ವಿನಿ ಸಿಂಗ್ ದೇಸ್ವಾಲ್ ಕೂಡ ಯಶಸ್ಸು ಕಾಣಲಿಲ್ಲ.
10 ಮೀ. ಏರ್ ರೈಫಲ್ ಸ್ಪರ್ಧೆಯ ಭಾರೀ ಭರವಸೆಯಾಗಿದ್ದ ಮನು ಭಾಕರ್ ಅವರ ಆರಂಭ ಉತ್ತಮವಾಗಿಯೇ ಇತ್ತು. ಆದರೆ ಪಿಸ್ತೂಲ್‌ನ ಕಾಕಿಂಗ್ ಲಿವರ್ ತುಂಡಾದುದರಿಂದ 20 ನಿಮಿಷಗಳ ಕಾಲ ಸಮಸ್ಯೆ ಅನುಭವಿಸಿದರು. ಇದರಿಂದ ಅವರ ಏಕಾಗ್ರತೆಗೆ ಭಂಗವಾಯಿತು. ಆದರೂ 575 ಶಾಟ್‌ಗಳೊಂದಿಗೆ 12ನೇ ಸ್ಥಾನಿಯಾದರು. ಇನ್ನೊಂದೆಡೆ ಯಶಸ್ವಿನಿ 574 ಶಾಟ್‌ಗಳೊಂದಿಗೆ 13ನೇ ಸ್ಥಾನ ಪಡೆದರು.
ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಅನುಭವಿ ದೀಪಕ್ ಕುಮಾರ್ ಮತ್ತು ಯುವ ಪ್ರತಿಭೆ ದಿವ್ಯಾಂಶ್ ಸಿಂಗ್ ಪನ್ವಾರ್ ಕ್ರಮವಾಗಿ 26 ಹಾಗೂ 32ರಷ್ಟು ಕೆಳ ಕ್ರಮಾಂಕಕ್ಕೆ ಜಾರಿದರು.
ಇದನ್ನೂ ಓದಿ :ಟೋಕಿಯೊ ಒಲಿಂಪಿಕ್ಸ್ ; ಹಾಕಿ ಪಂದ್ಯದಲ್ಲಿ ಭಾರತಕ್ಕೆ 7 ಗೋಲುಗಳ ಸೋಲು
ಪುರುಷರ ಸ್ಕೀಟ್‌ನಲ್ಲಿ ಅಂಗದ್ ವೀರ್ ಸಿಂಗ್ ಬಾಜ್ವಾ 3ನೇ ಸುತ್ತಿನ ಅಂತ್ಯಕ್ಕೆ 11ನೇ ಸ್ಥಾನಿಯಾಗಿದ್ದಾರೆ. ಸೋಮವಾರ ಉಳಿದೆರಡು ಸುತ್ತನ್ನು ಪೂರೈಸಲಿದ್ದು, ಟಾಪ್-6 ಯಾದಿಯ ಕನಸು ಕಾಣುತ್ತಿದ್ದಾರೆ.