Advertisement

2021ರ ಜುಲೈಯಲ್ಲಿ ಟೋಕಿಯೊ ಒಲಿಂಪಿಕ್ಸ್‌ ?

09:52 AM Mar 31, 2020 | Sriram |

ಟೋಕಿಯೊ: ಕೋವಿಡ್-19 ವೈರಸ್‌ ವಿಶ್ವದಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್‌ ಕೂಟವನ್ನು ಮುಂದಿನ ವರ್ಷದ ಜುಲೈ ತಿಂಗಳಲ್ಲಿ ನಡೆಸಲು ಒಲಿಂಪಿಕ್ಸ್‌ ಸಂಘಟಕರು ಒಲವು ವ್ಯಕ್ತಪಡಿಸಿದ್ದಾರೆ ಎಂಧು ಜಪಾನೀಸ್‌ ಮಾಧ್ಯಮ ವರದಿ ಮಾಡಿದೆ.

Advertisement

ಕೋವಿಡ್-19 ವೈರಸ್‌ನಿಂದಾಗಿ ವಿಶ್ವದೆಲ್ಲೆಡೆ ಜನಜೀವನ ಸಾಮಾನ್ಯ ಸ್ಥಿತಿಗೆ ಬರಬೇಕಾಗಿದೆ. ಇದೇ ವೇಳೆ ಗೇಮ್ಸ್‌ ಆಯೋಜಿಸುವ ನಿಟ್ಟಿನಲ್ಲಿ ಸಿದ್ಧತೆಗಾಗಿ ಸಮಯದ ಅಗತ್ಯವಿದೆ. ಹೀಗಾಗಿ ಗೇಮ್ಸ್‌ 2021ರ ಜುಲೈ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆಯಿದೆ ಎಂದು ಸಂಘಟನಾ ಸಮಿತಿಯ ಮೂಲಗಳನ್ನು ಉಲ್ಲೇಖೀಸಿ ಪಬ್ಲಿಕ್‌ ಬ್ರಾಡ್‌ಕಾಸ್ಟರ್‌ ಎನ್‌ಎಚ್‌ಕೆ ತಿಳಿಸಿದೆ.

ಸಾಕಷ್ಟು ಸೆಕೆ ಮತ್ತು ಬಿಸಿಯ ವಾತಾವರಣ ಇಲ್ಲದ ಸಮಯದಲ್ಲಿ ಕೂಟ ಆಯೋಜಿಸುವುದು ಉತ್ತಮ ಇದರಿಂದಾಗಿ ಮ್ಯಾರಥಾನ್‌ ಮತ್ತು ಇತರ ರೇಸ್‌ಗಳನ್ನು ರಾಜಧಾನಿಯಲ್ಲಿ ನಡೆಸಲು ಸಾಧ್ಯವಾಗುತ್ತದೆ ಎಂದು ಟೋಕಿಯೊ ಗವರ್ನರ್‌ ಯುರಿಕೊ ಕೊಯಿಕೆ ಅವರು ಸಭೆಯೊಂದರಲ್ಲಿ ತಿಳಸಿದ್ದರು.

ಐಒಸಿ ಜತೆ ಚರ್ಚೆ
ಯೊಶಿರೊ ಮೊರಿ ನೇತೃತ್ವದ ಟೋಕಿಯೊ 2020 ತಂಡವು ಸಂಭಾವ್ಯ ದಿನಗಳ ಬಗ್ಗೆ ಇಂಟರ್‌ನ್ಯಾಶನಲ್‌ ಒಲಿಂಪಿಕ್‌ ಸಮಿತಿ (ಐಒಸಿ) ಜತೆ ಚರ್ಚಿಸುತ್ತಿದೆ. ಒಂದು ವಾರದ ಒಳಗಾಗಿ ಗೇಮ್ಸ್‌ ನಡೆಯುವ ದಿನ ಖಚಿತವಾಗಬಹುದು ಎಂದು ಮೊರಿ ಹೇಳಿದ್ದಾರೆ. ಗೇಮ್ಸ್‌ ಬೇಸಗೆಯಲ್ಲಿಯೇ ನಡೆಯಬೇಕೆಂಬ ನಿರ್ಬಂಧವಿಲ್ಲ. ಎಲ್ಲರಿಗೂ ಅನುಕೂಲವಾಗುವ ದಿನವನ್ನು ಸೂಚಿಸುವ ಆಯ್ಕೆಯಿದೆ ಎಂದು ಐಒಸಿ ಮುಖ್ಯಸ್ಥ ಥಾಮಸ್‌ ಬಾಕ್‌ ಕೂಡ ಹೇಳಿದ್ದಾರೆ.

ಒಲಿಂಪಿಕ್‌ ಜ್ಯೋತಿ ಪ್ರದರ್ಶನ
ಫ‌ುಕುಶಿಮಾದ ಜೆ-ವಿಲೇಜ್‌ ಕ್ರೀಡಾ ಸಂಕೀರ್ಣದಲ್ಲಿ ಒಂದು ತಿಂಗಳ ಕಾಲ ಒಲಿಂಪಿಕ್‌ ಜ್ಯೋತಿಯನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. 2011ರ ಅಣುಬಾಂಬು ದುರಂತದಲ್ಲಿ ಬಹಳಷ್ಟು ಹಾನಿಗೆ ಒಳಗಾದ ಪ್ರದೇಶ ಇದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next