Advertisement

ಹಾಕಿ: ಮನ್‌ಪ್ರೀತ್‌ ಪಡೆಗೆ ಜಯ : ವನಿತೆಯರಿಗೆ ಸೋಲು

11:01 PM Jul 24, 2021 | Team Udayavani |

ಟೋಕಿಯೊ: ಹರ್ಮನ್‌ಪ್ರೀತ್‌ ಸಿಂಗ್‌ ಅವರ ಅವಳಿ ಗೋಲು ಹಾಗೂ ಕೀಪರ್‌ ಪಿ.ಆರ್‌. ಶ್ರೀಜೇಶ್‌ ಕೊನೆಯ ಹಂತದಲ್ಲಿ ತೋರಿದ ದಿಟ್ಟ ಸಾಹಸದಿಂದಾಗಿ ಟೋಕಿಯೊ ಒಲಿಂಪಿಕ್ಸ್‌ ಪುರುಷರ ಹಾಕಿ ಕೂಟದ “ಎ’ ವಿಭಾಗದ ಪಂದ್ಯದಲ್ಲಿ ಭಾರತ 3-2 ಗೋಲುಗಳಿಂದ ನ್ಯೂಜಿಲ್ಯಾಂಡನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಆದರೆ ವನಿತಾ ವಿಭಾಗದಲ್ಲಿ ಬಲಿಷ್ಠ ಡಚ್ಚರ ವಿರುದ್ಧ ಭಾರತ 1-5 ಗೋಲುಗಳ ಸೋಲುಂಡಿದೆ.

Advertisement

ಪಂದ್ಯದ ಮೊದಲ ಗೋಲು ಸಿಡಿಸಿದ್ದೇ ನ್ಯೂಜಿಲ್ಯಾಂಡ್‌. 6ನೇ ನಿಮಿಷದಲ್ಲೇ ಕೇನ್‌ ರಸೆಲ್‌ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಬಾರಿಸಿ ಭಾರತಕ್ಕೆ ಆಘಾತವಿಕ್ಕಿದರು. ಆದರೆ ಭಾರತ ನಾಲ್ಕೇ ನಿಮಿಷದಲ್ಲಿ ತಿರುಗಿ ಬಿತ್ತು. ರೂಪಿಂದರ್‌ ಪಾಲ್‌ ಸಿಂಗ್‌ 10ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಸ್ಫೂರ್ತಿ ತುಂಬಿದರು. ಮುಂದಿನದು ಹರ್ಮನ್‌ಪ್ರೀತ್‌ ಸಾಹಸ. ಅವರು 26ನೇ ಹಾಗೂ 33ನೇ ನಿಮಿಷದಲ್ಲಿ ಬೆನ್ನು ಬೆನ್ನಿಗೆ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಸ್ಟೀಫ‌ನ್‌ ಜೆನ್ಸೆನ್‌ 43ನೇ ನಿಮಿಷದಲ್ಲಿ ಅಂತರ ತಗ್ಗಿಸಿದರು.

ನ್ಯೂಜಿಲ್ಯಾಂಡ್‌ ಆಕ್ರಮಣ
ಕೊನೆಯ ಕೆಲವು ನಿಮಿಷಗಳಲ್ಲಿ ನ್ಯೂಜಿಲ್ಯಾಂಡ್‌ ಅತ್ಯಂತ ಆಕ್ರಮಣಕಾರಿಯಾಗಿ ಆಡಿತು. ಭಾರತದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರು. ಆದರೆ ಗೋಲ್‌ ಕೀಪರ್‌ ಶ್ರೀಜೇಶ್‌ ತಡೆಗೋಡೆಯಂತೆ ನಿಂತು ತಂಡವನ್ನು ಕಾಪಾಡಿದರು.

ಭಾರತ ರವಿವಾರ ಬಲಿಷ್ಠ ಆಸ್ಟ್ರೇಲಿಯ ಸವಾಲನ್ನು ಎದುರಿಸಲಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಕಾಂಗರೂ ಪಡೆ ಜಪಾನ್‌ ವಿರುದ್ಧ 5-3 ಅಂತರದ ಗೆಲುವು ದಾಖಲಿಸಿದೆ.

ಇದನ್ನೂ ಓದಿ : ಜುಲೈ 25 ರಿಂದ ಧಾರ್ಮಿಕ ಸ್ಥಳಗಳು ಭಕ್ತರಿಗೆ ಮುಕ್ತ : ಎಲ್ಲ ಬಗೆಯ ಸೇವೆಗಳಿಗೆ ಅವಕಾಶ

Advertisement

ಆರಂಭ ಖುಷಿ ತಂದಿದೆ
“ಹಿನ್ನಡೆಯ ಬಳಿಕ ಭಾರತ ಕೆಚ್ಚೆದೆಯ ಪ್ರದರ್ಶನ ನೀಡಿ ಗೆಲುವು ಸಾಧಿಸಿದ್ದು ಖುಷಿ ತಂದಿದೆ. ಆದರೆ ಆಸ್ಟ್ರೇಲಿಯ ಎದುರಿನ ರವಿವಾರದ ಸ್ಪರ್ಧೆ ಬಹಳ ಕಠಿನ. ಸವಾಲಿಗೆ ನಮ್ಮವರು ಸಜ್ಜಾಗಿದ್ದಾರೆ’ ಎಂದಿದ್ದಾರೆ ಕೋಚ್‌ ಗ್ರಹಾಂ ರೀಡ್‌.

ವನಿತೆಯರ ವೈಫ‌ಲ್ಯ
ರಾಣಿ ರಾಮ್‌ಪಾಲ್‌ ಪಡೆ ನೆದರ್ಲೆಂಡ್ಸ್‌ಗೆ ಸರಿಸಮನಾದ ಹೋರಾಟ ನೀಡಲು ಸಂಪೂರ್ಣ ವಿಫ‌ಲವಾಯಿತು. ಪರಿಣಾಮ, 1-5 ಅಂತರದ ದೊಡ್ಡ ಸೋಲನ್ನು ಹೊತ್ತುಕೊಂಡಿತು.

6ನೇ ನಿಮಿಷದಲ್ಲೇ ಖಾತೆ ತೆರೆದ ನೆದರ್ಲೆಂಡ್ಸ್‌ ಮತ್ತೆ ಹಿಂದಿರುಗಿ ನೋಡಲಿಲ್ಲ. ನಾಯಕಿ ರಾಣಿ ರಾಮ್‌ಪಾಲ್‌ 10ನೇ ನಿಮಿಷದಲ್ಲಿ ಪಂದ್ಯವನ್ನು ಸಮಬಲಕ್ಕೆ ತಂದುದಷ್ಟೇ ಭಾರತದ ಸಾಹಸವೆನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next