ನವದೆಹಲಿ: ಒಲಿಂಪಿಕ್ಸ್‌ನಿಂದ ವಾಪಸ್ ಆದ ಮೇಲೆ ಬ್ಯುಸಿ ಶೆಡ್ಯೂಲ್ ನಲ್ಲಿ ರುವ ಜಾವೆಲಿನ್ ಆಟಗಾರ ನೀರಜ್ ಚೋಪ್ರಾಗೆ ಮತ್ತೆ ಅನಾರೋಗ್ಯ ಕಾಡಿದೆ.
ವಾಪಸ್ ಬಂದಾಗಿನಿಂದಲೂ ವಿವಿಧ ಅಭಿನಂದನಾ ಕಾರ್ಯಕ್ರಮಗಳಲ್ಲಿ ನೀರಜ್ ಭಾಗಿಯಾಗಿದ್ದಾರೆ. ಹಾಗೆಯೇ, ಸೋಮವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಏರ್ಪಡಿಸಿದ್ದ ಉಪಹಾರ ಕೂಟದಲ್ಲಿಯೂ ನೀರಜ್ ಭಾಗಿಯಾಗಿದ್ದರು. ಮಂಗಳವಾರ ಹರ್ಯಾಣದ ಪಾನಿಪತ್ ಬಳಿ ಇರುವ ತಮ್ಮ ಹುಟ್ಟೂರಿಗೆ ಆಗಮಿಸಿದ್ದರು.
ಇದನ್ನೂ ಓದಿ:ತಾಲಿಬಾನ್ ಹಿಡಿತದಲ್ಲಿ ಅಫ್ಘಾನ್ : ಮಹತ್ವದ ಸಭೆ ನಡೆಸಿದ ಮೋದಿ
ಇವರ ಆಗಮನ ನಿಮಿತ್ತ ಹಳ್ಳಿಯಲ್ಲಿ ಸ್ವಾಗತ ಸಮಾರಂಭ ಏರ್ಪಡಿಸಲಾಗಿತ್ತು. ಇದರಲ್ಲೂ ಭಾಗಿಯಾಗಿದ್ದ ನೀರಜ್, ಮಧ್ಯದಲ್ಲೇ ಸುಸ್ತಾದರು. ಕಡೆಗೆ ಸಮಾರಂಭವನ್ನು ಮೊಟಕುಗೊಳಿಸಿ ತಮ್ಮ ನಿವಾಸಕ್ಕೆ ತೆರಳಿ ವಿಶ್ರಾಂತಿ ತೆಗೆದುಕೊಂಡರು.
ನೀರಜ್ ಆಪ್ತರ ಪ್ರಕಾರ, ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಏನೂ ಆಗಿಲ್ಲ. ಆದರೆ, ದಣಿವರಿಯದೇ ವಿವಿಧ ಸಮಾರಂಭಗಳಲ್ಲಿ ಭಾಗಿಯಾಗಿದ್ದರಿಂದ ಸುಸ್ತಾಗಿದ್ದಾರೆ. ಇದರಿಂದ ಸ್ವಲ್ಪವೇ ಜ್ವರ ಕಾಣಿಸಿಕೊಂಡಿದೆ. ಈಗ ವಿಶ್ರಾಂತಿ ಪಡೆದು ಕೊಳ್ಳುತ್ತಿದ್ದಾರೆ.