ಟೋಕ್ಯೊ: ಆ.8ಕ್ಕೆ 17 ದಿನಗಳ ಟೋಕ್ಯೊ ಒಲಿಂಪಿಕ್ಸ್ ಮುಗಿದಿತ್ತು. ಇದೀಗ 13 ದಿನಗಳ ಟೋಕ್ಯೊ ಪ್ಯಾರಾಲಿಂಪಿಕ್ಸ್ ಮುಗಿದಿದೆ.
ಒಲಿಂಪಿಕ್ಸ್‌ನಂತೆಯೇ ಇದೂ ಐತಿಹಾಸಿಕ ಯಶಸ್ಸು ಗಳಿಸಿಕೊಂಡಿದೆ. ಕೊರೊನಾದಂತಹ ಭೀಕರ ಸವಾಲನ್ನು ಎದುರಿಟ್ಟುಕೊಂಡು ಸೆಣೆಸಿದ ಪ್ಯಾರಾಲಿಂಪಿಕ್ಸ್ ಸಂಘಟಕರು ಕೂಟವನ್ನು ಮುಗಿಸಿಯೇ ಬಿಟ್ಟಿದ್ದಾರೆ. ಸ್ವತಃ ಪ್ಯಾರಾಲಿಂಪಿಕ್ಸ್ ಅಧ್ಯಕ್ಷ ಆ್ಯಂಡ್ರ್ಯೊ ಪಾರ್ಸನ್ಸ್, ಈ ಕೂಟ ನಡೆಯಿತು, ಮುಗಿಯಿತು ಎನ್ನುವುದನ್ನು ನಂಬಲಿಕ್ಕೆ ಸಾಧ್ಯವಿಲ್ಲ ಎಂದು ನುಡಿದಿದ್ದಾರೆ.
ಹಲವು ಸಂದರ್ಭಗಳಲ್ಲಿ ಈ ಕೂಟ ನಡೆಯುವುದಿಲ್ಲ ಎಂದುಕೊಂಡಿದ್ದೆವು. ಈ ಒತ್ತಡದಲ್ಲಿ ಹಲವು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇವೆ ಎಂಬ ಪಾರ್ಸನ್ಸ್ ನುಡಿಗಳಲ್ಲಿ ಇಡೀ ಪ್ಯಾರಾಲಿಂಪಿಕ್ಸ್ ಶ್ರಮ ಅಡಗಿದೆ. ಮುಕ್ತಾಯ ಸಮಾರಂಭದ ಧ್ಯೇಯವಾಕ್ಯ “ಘೋರಸದ್ದುಗಳ ಸೌಹಾರ್ದಯುತ ಸಮ್ಮಿಶ್ರಣ’ (ಹಾರ್ಮೋನಿಯಸ್ ಕ್ಯಾಕೊಫೊನಿ) ಎನ್ನುವುದು ಒಟ್ಟಾರೆ ಪರಿಸ್ಥಿತಿಯ ಚಿತ್ರಣವಾಗಿತ್ತು. ಮುಕ್ತಾಯ ಸಮಾರಂಭದಲ್ಲಿ ಜಪಾನ್ ಚಕ್ರವರ್ತಿ ನರುಹಿಟೊ ಸಹೋದರ, ಯುವರಾಜ ಅಕಿಶಿನೊ ಭಾಗವಹಿಸಿದ್ದರು.
ಹಿಂದೆಂದೂ ಕಾಣದ ಕೂಟಗಳು: ವಸ್ತುಸ್ಥಿತಿಯಲ್ಲಿ ಈ ಬಾರಿ ಜಪಾನ್ ರಾಜಧಾನಿ ಟೋಕೊÂದಲ್ಲಿ ನಡೆದ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್‌ಗಳು ಕಳೆದವರ್ಷವೇ ನಡೆಯಬೇಕಾಗಿತ್ತು. ಆದರೆ ಕೊರೊನಾ ಕಾರಣಕ್ಕೆ ಈ ಬಾರಿಗೆ ಮುಂದೂಡಿಕೆಯಾಗಿತ್ತು. ಅಂತಹದ್ದರಲ್ಲೂ ಯಶಸ್ಸನ್ನು ಕಂಡಿವೆ. ಹಾಗಾಗಿ ಹಿಂದೆಂದೂ ನಡೆಯದ ಕೂಟಗಳು ಎಂದರೆ ತಪ್ಪಾಗುವುದಿಲ್ಲ. ಒಲಿಂಪಿಕ್ಸ್‌ನಲ್ಲಂತೂ ಪ್ರೇಕ್ಷಕರಿಗೆ ಪ್ರವೇಶವೇ ಇರಲಿಲ್ಲ. ಪ್ಯಾರಾಲಿಂಪಿಕ್ಸ್‌ನ ಕೆಲವು ಅಂಕಣಗಳಿಗೆ ಕೆಲವು ಸಾವಿರ ಮಕ್ಕಳಿಗೆ ಮಾತ್ರ ಪ್ರವೇಶ ನೀಡಲಾಗಿದೆ.
ಈ ಕೂಟದಲ್ಲಿ ದಾಖಲೆಯ ಒಟ್ಟು 4,405 ಅಥ್ಲೀಟ್‌ಗಳು ಭಾಗವಹಿಸಿದ್ದರು. ದಾಖಲೆಯ ದೇಶಗಳು ಪದಕ ಗೆದ್ದಿವೆ. ಅಚ್ಚರಿಯೆಂದರೆ ತಾಲಿಬಾನ್ ಪೀಡಿತ ಅಫ್ಘಾನಿಸ್ತಾನದಿಂದಲೂ ಇಬ್ಬರು ಸ್ಪರ್ಧಿಗಳು ಭಾಗವಹಿಸಿದ್ದಾರೆ. ಅವರಿಬ್ಬರೂ ಕಾಬೂಲ್‌ನಿಂದ ರಾತ್ರೋರಾತ್ರಿ ಪರಾರಿಯಾಗಿ ಹಲವು ದಿನಗಳ ನಂತರ ಟೋಕ್ಯೊ ತಲುಪಿದ್ದರು!